ಪಿಂಕಿ ಪ್ರಾಮಾಣಿಕ್ ಲಿಂಗ ಪರೀಕ್ಷೆ ಅಪೂರ್ಣ

7

ಪಿಂಕಿ ಪ್ರಾಮಾಣಿಕ್ ಲಿಂಗ ಪರೀಕ್ಷೆ ಅಪೂರ್ಣ

Published:
Updated:
ಪಿಂಕಿ ಪ್ರಾಮಾಣಿಕ್ ಲಿಂಗ ಪರೀಕ್ಷೆ ಅಪೂರ್ಣ

ಕೋಲ್ಕತ್ತ (ಐಎಎನ್‌ಎಸ್): ಅತ್ಯಾಚಾರ ಆರೋಪ ಹೊತ್ತಿರುವ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ಅವರನ್ನು ಮಂಗಳವಾರ ಇಲ್ಲಿ ಲಿಂಗ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಬರಸಾತ್ ಆಸ್ಪತ್ರೆಯಲ್ಲಿನ ವೈದ್ಯರ ತಂಡವು ಖಚಿತವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿ ಸ್ವರ್ಣ ಪದಕ ಗೆದ್ದಿದ್ದ ಪಿಂಕಿ ಮಹಿಳೆ ಅಲ್ಲ ಪುರುಷ ಎಂದು ದೂರಲಾಗಿದೆ. ಅಷ್ಟೇ ಅಲ್ಲ ಅತ್ಯಾಚಾರ ಮಾಡಿದ ದೂರು ಕೂಡ ಇದೇ ಅಥ್ಲೀಟ್ ವಿರುದ್ಧ ದಾಖಲಾಗಿದೆ.ಇದೇ ಕಾರಣಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಪಿಂಕಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಈಗ ಇನ್ನೂ ಉನ್ನತ ಮಟ್ಟದ ಪರೀಕ್ಷೆ ಅಗತ್ಯವೆಂದು ವೈದ್ಯರ ತಂಡ ತಿಳಿಸಿದೆ ಎಂದು ಬಿಧಾನನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.ಬರಸಾತ್ ಉಪ ವಿಭಾಗದ ಸರ್ಕಾರಿ ಆಸ್ಪತ್ರೆಯ ಏಳು ಪರಿಣತ ವೈದ್ಯರ ವಿಶೇಷ ಮಂಡಳಿಯು ಪಿಂಕಿಯನ್ನು ಪರೀಕ್ಷೆ ಮಾಡಿದೆ ಎಂದು ಕೂಡ ಅವರು ಹೇಳಿದರು. ಆದರೆ ಆಸ್ಪತ್ರೆಯಲ್ಲಿನ ಪರೀಕ್ಷಾ ಸೌಲಭ್ಯಗಳ ವಿಷಯವಾಗಿ ಪ್ರಶ್ನೆಗಳು ಎದ್ದಿರುವ ಕಾರಣ ಉನ್ನತ ತಂತ್ರಜ್ಞಾನವನ್ನು ಹೊಂದಿರುವ ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಪರೀಕ್ಷೆಯಾದ ನಂತರವೇ ಅಂತಿಮ ವರದಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ.ತಮ್ಮ ಮೇಲೆ ಪಿಂಕಿ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರು ನೀಡಿದ ದಿನವೇ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಪ್ರಯತ್ನಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗಿದ್ದ ಪ್ರಾಥಮಿಕ ಪರೀಕ್ಷೆಗಳು ಈ ಅಥ್ಲೀಟ್ ಮಹಿಳೆ ಅಲ್ಲ ಪುರುಷ ಎನ್ನುವುದನ್ನು ಸಾಬೀತು ಪಡಿಸಿದ್ದವು. ಆನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಇದನ್ನು ಖಾತ್ರಿ ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದರು. ಆದರೆ ಆಗ ಎರಡು ಬಾರಿಯೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದ ಪಿಂಕಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.ನ್ಯಾಯಾಲಯವು ಗುರುವಾರ ಪಿಂಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಆನಂತರ ಪರೀಕ್ಷೆಗೆ ಮಾರ್ಗ ಸುಗಮವಾಯಿತು. ವೈದ್ಯಕೀಯ ಮಂಡಳಿ ಈಗ ಪರೀಕ್ಷೆ ಪೂರ್ಣಗೊಳಿಸಿತ್ತು. ಆದರೆ ಸಂಕೀರ್ಣವಾದ ಈ ಪ್ರಕರಣದಲ್ಲಿ ಉನ್ನತ ಮಟ್ಟದ ಪರೀಕ್ಷೆ ನಡೆಸುವುದು ಅಗತ್ಯವಿದೆ ಎಂದು ಪ್ರಧಾನ ವೈದ್ಯಾಧಿಕಾರಿ ಡಾ.ಸುಕಾಂತ ಸಿಲ್ ನಿರ್ಣಯಿಸಿದರು. ಆದ್ದರಿಂದ ಈಗ ಪಿಂಕಿಯನ್ನು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪೊಲೀಸರಿಗೆ ಸಲಹೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry