ಪಿಂಚಣಿ ಅದಾಲತ್‌ನಲ್ಲಿ ವೃದ್ಧರು ಕಂಗಾಲು

7

ಪಿಂಚಣಿ ಅದಾಲತ್‌ನಲ್ಲಿ ವೃದ್ಧರು ಕಂಗಾಲು

Published:
Updated:

ಬಂಗಾರಪೇಟೆ: ಪಟ್ಟಣದ ಹಳೆ ಗಾಂಧಿ ಭವನದ ಆವರಣ ಸೋಮವಾರ ಎಂದಿನಂತೆ ಇರಲಿಲ್ಲ. ನೂರಾರು ವೃದ್ಧ, ವೃದ್ಧೆಯರು ಸಾಲುಗಟ್ಟಿದ್ದರು.  ಕೆಲ ವೃದ್ಧೆಯರು  ಸಾಲಿನಲ್ಲಿ ನಿಂತು ನಡೆದರೆ ಇನ್ನೂ ಕೆಲವರು ಸುಸ್ತಾಗಿ ನೆತ್ತಿಸುಡುವ ಬಿಸಿಲಿನಲ್ಲೇ ಕೂತಿದ್ದರು.ಅದು ಸರ್ಕಾರದ ವತಿಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್. ಕಸಬಾ ಹೋಬಳಿಗೆ ಸೇರಿದ ಅಪಾರ ಸಂಖ್ಯೆಯ ವೃದ್ಧ, ವೃದ್ಧೆಯರು ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸುವ ತವಕದಲ್ಲಿದ್ದರು. ಕೆಲ­ವರು ಆಟೊದಲ್ಲಿ ಬಂದರೆ ಇನ್ನೂ ಕೆಲ­ವರು ನಡೆದುಬಂದರು. ಕಾರ್ಯಾ­ಗಾರಕ್ಕೆ ಹತ್ತಿರವಿದ್ದ ಕೆಲವರು ಕುಟುಂಬದ ಸದಸ್ಯರ ನೆರವಿಂದ ಸ್ಥಳಕ್ಕೆ ಧಾವಿಸಿದರು.ಕಂದಾಯ ಇಲಾಖೆ, ತಾಲ್ಲೂಕು ಕಚೇರಿ ಸಿಬ್ಬಂದಿ ಬಿಡುವಿಲ್ಲದೆ ಬೆಳಗ್ಗೆ­ಯಿಂದ ಸಂಜೆಯವರಿಗೆ ಅರ್ಜಿ ಸ್ವೀಕರಿ­ಸುತ್ತಿದ್ದರು. ಆದರೂ ನಿರೀಕ್ಷೆಗೆ ಮೀರಿ ಧಾವಿಸಿದ ಜನಸಂಖ್ಯೆಗೆ ಸಹಕರಿಸುವಲ್ಲಿ ಸಿಬ್ಬಂದಿ ಪರಿಶ್ರಮ ಪಡಬೇಕಾಯಿತು. ಸಂಜೆ 6 ಗಂಟೆ ನಂತರವೂ ಅರ್ಜಿ ಸಲ್ಲಿಸುವವರ  ಉದ್ದನೆಯ ಸಾಲು ಕಂಡು­ಬಂತು. ವೈದ್ಯರ ಕೊರತೆಯಿಂದ ವೈದ್ಯಕೀಯ ಪ್ರಮಾಣಪತ್ರ ಪಡೆಯಲು ಬಂದಿದ್ದ ನೂರಾರು ಮಂದಿ ಊಟ, ನೀರು ಇಲ್ಲದೆ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಸನ್ನಿವೇಶ ನಿರ್ಮಾಣವಾಗಿತ್ತು. ಹತ್ತಿರದ ಹೋಟೆಲ್‌­ಗಳಿಗೂ ಹೋಗಲಾಗದ ಹಲವರು ಸಂಜೆವರೆಗೂ ಖಾಲಿ ಹೊಟ್ಟೆ­ಯಲ್ಲೇ ಇದ್ದು, ಅರ್ಜಿ ಸಲ್ಲಿಸಿ ತಮ್ಮ ಮನೆಗಳಿಗೆ ವಾಪಸು ಹೋದರು.ರಂಗ ಮಂದಿರದೊಳಗೆ ಅರ್ಜಿ­ದಾರರು ಕೂರಲು ಸ್ಥಳಾವಕಾಶ ಕೊರತೆ ಇರುವುದನ್ನು ಮನಗಂಡ ಅಧಿಕಾರಿಗಳು ಮಧ್ಯಾಹ್ನದ ನಂತರ ರಂಗ ಮಂದಿರದ ಬಯಲಿನಲ್ಲಿ ಶಾಮಿಯಾನ ವ್ಯವಸ್ಥೆ ಮಾಡಿದರು. ತಹಶೀಲ್ದಾರ್ ಎಸ್.ಆರ್.ಉಷಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry