ಪಿಂಚಣಿ: ಅನ್ಯಾಯ ತಡೆಗೆ ಕ್ರಮ

7

ಪಿಂಚಣಿ: ಅನ್ಯಾಯ ತಡೆಗೆ ಕ್ರಮ

Published:
Updated:
ಪಿಂಚಣಿ: ಅನ್ಯಾಯ ತಡೆಗೆ ಕ್ರಮ

ಬೆಂಗಳೂರು: `ಕಾರ್ಮಿಕ ಪಿಂಚಣಿ ಯೋಜನೆಯ ಪಿಂಚಣಿದಾರರಿಗೆ ಪಿಂಚಣಿ ನೀಡುವಲ್ಲಿ ಆಗುತ್ತಿರುವ ಅನ್ಯಾಯಗಳನ್ನು ತಡೆಯಲು ಕೇಂದ್ರ ಕಾರ್ಮಿಕ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು~ ಎಂದು ಕಾರ್ಮಿಕ ಮತ್ತು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.ನಗರದಲ್ಲಿ ಸೋಮವಾರ ಕಾರ್ಮಿಕ ಪಿಂಚಣಿ ಯೋಜನೆಯ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳ ಆಯೋಜಿಸಿದ್ದ `ಪಿಂಚಣಿದಾರರ ಸಮಾವೇಶ~ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಕಾರ್ಮಿಕ ಪಿಂಚಣಿ ಯೋಜನೆಯ ಪಿಂಚಣಿದಾರರು ಸದ್ಯ ತಿಂಗಳಿಗೆ ಕನಿಷ್ಠ 12 ರೂಪಾಯಿಗಳಿಂದ ಗರಿಷ್ಠ 1600 ರೂಪಾಯಿಗಳ ಪಿಂಚಣಿ ಪಡೆಯುತ್ತಿದ್ದಾರೆ.

 

ಇದೊಂದು ಅವೈಜ್ಞಾನಿಕ ಪಿಂಚಣಿ ನೀಡಿಕೆಯ ವ್ಯವಸ್ಥೆಯಾಗಿದ್ದು, ಸುಮಾರು ಹನ್ನೊಂದು ವರ್ಷಗಳಿಂದ ಈ ವ್ಯವಸ್ಥೆಯ ಪರಿಷ್ಕರಣೆ ಆಗಿಲ್ಲ. ದೇಶದ ಸುಮಾರು 5.5 ಕೋಟಿ ಪಿಂಚಣಿದಾರರು ಈ ಕಡಿಮೆ ಪಿಂಚಣಿಯನ್ನೇ ಪಡೆಯುತ್ತಾ ಬಡತನದಲ್ಲಿ ಬಾಳುವಂತಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ಹಾಗೂ ಪಿಂಚಣಿ ಯೋಜನೆಗಳು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.

 

ಹೀಗಾಗಿ ಪಿಂಚಣಿದಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲಾಗುವುದು~ ಎಂದು ಅವರು ತಿಳಿಸಿದರು.`ರಾಜ್ಯದ ವಿವಿಧ ವಲಯಗಳ ಅಸಂಘಟಿತ ಕಾರ್ಮಿಕರಿಗಾಗಿ ಕಾರ್ಮಿಕ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಿದೆ. ಇಲ್ಲಿಯವರೆಗೆ ರಾಜ್ಯದ 20 ಲಕ್ಷ ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ವಿಮೆ ಹಾಗೂ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ದೇಶದಲ್ಲೇ ಹೆಚ್ಚು ಕಾರ್ಮಿಕ ವಿಮೆ ಮಾಡಿಸಿದ ಸಾಲಿನಲ್ಲಿ ರಾಜ್ಯ 4ನೇ ಸ್ಥಾನದಲ್ಲಿದೆ~ ಎಂದರು.ಇಚ್ಛಾಶಕ್ತಿಯ ಕೊರತೆ: `ಸರ್ಕಾರದ ಮಟ್ಟದಲ್ಲಿ ಯಾವುದೇ ಕಾರ್ಯಗಳನ್ನಾಗಲೀ ಜನಪರವಾಗಿ ಮಾಡಲು ಸಾಧ್ಯವಿದೆ. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಆಗಬೇಕಾದ ಕಾರ್ಯಗಳು ಆಗುತ್ತಿಲ್ಲ. ಜನರಿಗೆ ಒಳಿತಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಿದರೆ ಸರ್ಕಾರಿ ಯಂತ್ರ ಸಮರ್ಪಕವಾಗಿ ನಡೆಯುತ್ತದೆ. ಆದರೆ ಸರ್ಕಾರದಲ್ಲಿನ ಜನರ ಆಲಸ್ಯ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ತಲುಪಬೇಕಾದ ಸೌಲಭ್ಯಗಳು ಜನರಿಗೆ ತಲುಪುತ್ತಿಲ್ಲ~ ಎಂದು ಅವರು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಕಾರ್ಮಿಕ ಪಿಂಚಣಿ ಯೋಜನೆ ಪಿಂಚಣಿದಾರರ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಜಿ.ಎಸ್.ಇಂಗಳೆ, ಗೌರವಾಧ್ಯಕ್ಷ ವಿ.ರೇಣುಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಮಹಾಜನ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry