ಗುರುವಾರ , ನವೆಂಬರ್ 14, 2019
18 °C
ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಪಿಇಬಿ ತೀರ್ಮಾನ ಪಾಲನೆ `ಕಡ್ಡಾಯ'

Published:
Updated:

ಬೆಂಗಳೂರು: ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರಿಗಿಂತ ಮೇಲಿನ ಹುದ್ದೆಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿ ಮಂಡಳಿ (ಪಿ.ಇ.ಬಿ) ನೀಡುವ ಶಿಫಾರಸನ್ನು `ನಿರ್ದೇಶನ ಅಥವಾ ಸೂಚನೆ' ಎಂದಷ್ಟೇ ಪರಿಗಣಿಸಬಾರದು, ಮಂಡಳಿಯ ಶಿಫಾರಸನ್ನು ಸರ್ಕಾರ ಸಾಮಾನ್ಯ ಸಂದರ್ಭದಲ್ಲಿ `ಕಡ್ಡಾಯ'ವಾಗಿ ಅನುಷ್ಠಾನಕ್ಕೆ ತರಬೇಕು ಎಂದು ಹೈಕೋರ್ಟ್ ಹೇಳಿದೆ.ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ 20(ಬಿ) ಅನ್ವಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮತ್ತು ಅವರಿಗಿಂತ ಮೇಲಿನ ಹುದ್ದೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಪಿಇಬಿ ಮಾಡುವ ಶಿಫಾರಸುಗಳು `ನಿರ್ದೇಶನ ಅಥವಾ ಸೂಚನೆ' ಮಾತ್ರ. ಅದನ್ನು `ಕಡ್ಡಾಯ'ವಾಗಿ ಪಾಲಿಸಬೇಕಾಗಿಲ್ಲ ಎಂದು ಸರ್ಕಾರದ ಪರ ವಕೀಲರು ಮಂಡಿಸಿದ್ದ ವಾದವನ್ನು ನ್ಯಾಯಮೂರ್ತಿ ಎನ್. ಕುಮಾರ್ ಮತ್ತು ಬಿ. ಮನೋಹರ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಳ್ಳಿಹಾಕಿದೆ. ಐಪಿಎಸ್ ಅಧಿಕಾರಿಗಳಾದ ಟಿ. ಸುನೀಲ್ ಕುಮಾರ್, ಅಲೋಕ್ ಕುಮಾರ್, ಡಿ. ರೂಪಾ ಮತ್ತು ಡಾ.ಟಿ.ಡಿ. ಪವಾರ್ ಅವರ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ನೀಡಿರುವ ಆದೇಶದಲ್ಲಿ ವಿಭಾಗೀಯ ಪೀಠ ಈ ಸ್ಪಷ್ಟನೆ ನೀಡಿದೆ.`ಪಿಇಬಿ ಯಾವುದೇ ಶಿಫಾರಸು ಮಾಡದೇ ಇದ್ದರೂ, ಕಾಯ್ದೆಯ ಸೆಕ್ಷನ್ 4 ಮತ್ತು 7ರ ಅನ್ವಯ, ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡುವ ಅಧಿಕಾರ ತನಗಿದೆ' ಎಂದು ಸರ್ಕಾರ ವಾದಿಸಿತ್ತು. ಪೊಲೀಸ್ ಸಿಬ್ಬಂದಿಯ ವರ್ಗಾವಣೆ ನಿಯಂತ್ರಿಸಲು ಪಿಇಬಿ ಸ್ಥಾಪಿಸಬೇಕು ಎಂಬ ನಿರ್ದೇಶನ ನೀಡುವ ಕಾಯ್ದೆಯ ಸೆಕ್ಷನ್ 20(ಬಿ) ಕುರಿತು ಆದೇಶದಲ್ಲಿ ವಿಸ್ತೃತವಾಗಿ ಚರ್ಚಿಸಿರುವ ನ್ಯಾಯಪೀಠ, ಈ ವಾದವನ್ನು ಮಾನ್ಯ ಮಾಡಿಲ್ಲ.ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಸರ್ಕಾರ, ಮಂಡಳಿ ನೀಡುವ ಶಿಫಾರಸಿನಲ್ಲಿ ಬದಲಾವಣೆ ಮಾಡಬಹುದು. ಆದರೆ ಅದಕ್ಕೆ ಸಮರ್ಪಕ ಕಾರಣ ನೀಡಬೇಕು. ಮಂಡಳಿಯ ಶಿಫಾರಸು ಇಲ್ಲದೆ ನಡೆಯುವ ಎಎಸ್‌ಪಿ ಮತ್ತು ಅವರಿಗಿಂತ ಮೇಲಿನ ಹುದ್ದೆಯ ಅಧಿಕಾರಿಗಳ ವರ್ಗಾವಣೆ ಅನೂರ್ಜಿತಗೊಳಿಸಲು ಸೂಕ್ತವಾದದ್ದು ಎಂದು ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.ಪಿಇಬಿ ಸ್ಥಾಪಿಸುವ ಕುರಿತು ನಿರ್ದೇಶನ ಬಂದಿದ್ದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ. ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರವು, ಪಿಇಬಿ ಶಿಫಾರಸಿಗೆ ಬೆಲೆ ನೀಡಬೇಕು ಮತ್ತು ವರ್ಗಾವಣೆಗೆ ಮುನ್ನ ಶಿಫಾರಸು ಪಡೆದುಕೊಳ್ಳಬೇಕು. ಅಲ್ಲದೆ, ಈ ಕಾನೂನು ರೂಪಿಸಿದ ಶಾಸನಸಭೆ ಕೂಡ, ಶಿಫಾರಸು ಪಡೆಯುವುದನ್ನು ಕಡ್ಡಾಯಗೊಳಿಸಿದೆ.ಅಧಿಕಾರದಲ್ಲಿ ಇರುವವರು ಈ ಕಾನೂನು ಪಾಲಿಸಬೇಕು ಎಂದು ಆದೇಶದಲ್ಲಿ ಕಿವಿಮಾತು ಹೇಳಲಾಗಿದೆ. ಸರ್ಕಾರ ಸುನೀಲ್ ಕುಮಾರ್ ಅವರ ವರ್ಗಾವಣೆಗೆ ಮುನ್ನ ಪಿಇಬಿಯಿಂದ ಶಿಫಾರಸು ಪಡೆದಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.`ಸ್ವೇಚ್ಛೆಯ ವರ್ಗಾವಣೆ ಸಲ್ಲ': ಪಿಇಬಿ ಸ್ಥಾಪನೆಗೆ ಅವಕಾಶ ಕಲ್ಪಿಸಿ ಕಾಯ್ದೆಗೆ ತಿದ್ದುಪಡಿ ತಂದ ನಂತರ, ಪೊಲೀಸ್ ಅಧಿಕಾರಿಗಳನ್ನು ಖುಷಿಬಂದಂತೆ ವರ್ಗಾವಣೆ ಮಾಡುವ ಸರ್ಕಾರದ ಅಧಿಕಾರ ಕೊನೆಗೊಂಡಿದೆ. ಪಿಇಬಿ ಮಾಡುವ ಶಿಫಾರಸನ್ನು ಸರ್ಕಾರ ಸಾಮಾನ್ಯ ಸಂದರ್ಭಗಳಲ್ಲಿ ಒಪ್ಪಿಕೊಳ್ಳಬೇಕು. ಹೀಗೆ ಮಾಡುವುದರಿಂದ ಪೊಲೀಸ್ ಅಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪದಿಂದ ಪಾರು ಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರತಿಕ್ರಿಯಿಸಿ (+)