ಪಿಎಫ್: ಶೇ 9.5ರಷ್ಟು ಬಡ್ಡಿ ದರ

7

ಪಿಎಫ್: ಶೇ 9.5ರಷ್ಟು ಬಡ್ಡಿ ದರ

Published:
Updated:

ನವದೆಹಲಿ (ಪಿಟಿಐ): 2010-11ನೇ ಸಾಲಿನ  ಭವಿಷ್ಯ ನಿಧಿ (ಪಿಎಫ್) ಠೇವಣಿ ಮೇಲೆ ಶೇಕಡ 9.5ರಷ್ಟು ಬಡ್ಡಿ ದರ ನೀಡಬೇಕು ಎನ್ನುವ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯ ಶೀಘ್ರದಲ್ಲಿಯೇ  ಹಸಿರು ನಿಶಾನೆ ತೋರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಿಂದ ‘ಪಿಎಫ್’ ಠೇವಣಿ ಮೇಲೆ ಶೇ 9.5 ರಷ್ಟು ಬಡ್ಡಿ ದರ ನೀಡಬೇಕು ಎನ್ನುವುದಕ್ಕೆ ಹಣಕಾಸು ಸಚಿವಾಲಯ ಇನ್ನೂ ಅಂತಿಮ ಅನುಮೋದನೆ ನೀಡಿಲ್ಲ. ಆದರೆ, ಮಾರ್ಚ್ 31ರ ಒಳಗೆ ಯಾವ ಕ್ಷಣದಲ್ಲಿ ಬೇಕಾದರೂ ಇದಕ್ಕೆ ಹಸಿರು ನಿಶಾನೆ ದೊರೆಯಬಹುದು’ ಎಂದು ಕಾರ್ಮಿಕ ಕಾರ್ಯದರ್ಶಿ ಪಿ.ಸಿ ಚರ್ತುವೇದಿ ಹೇಳಿದ್ದಾರೆ.ನೌಕರರ ಭವಿಷ್ಯ ನಿಧಿ ಸಂಘಟನೆಯ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಜತೆಗೆ ನಡೆಯಲಿರುವ ಮಾತುಕತೆಗೆ ಪೂರ್ವದಲ್ಲಿ ಚರ್ತುವೇದಿ ಈ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ‘ಸಿಬಿಟಿ’ ಪಿಂಚಣಿ ನಿಧಿಯ ಮೇಲೆ ಶೇ 9.5ರಷ್ಟು ಬಡ್ಡಿ ದರ ನೀಡಬೇಕು ಎನ್ನುವ ಪ್ರಸ್ತಾವವನ್ನು ಹಣಕಾಸು ಸಚಿವಾಲಯದ ಮುಂದಿಟ್ಟಿದೆ.‘ಪಿಎಫ್ ಬಡ್ಡಿ ದರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಮತ್ತು ಹಣಕಾಸು ಸಚಿವಾಲಯದ ನಡುವೆ ಸಣ್ಣ ಮಟ್ಟಿಗಿನ ತಿಕ್ಕಾಟ ಇರುವುದು ನಿಜ. ಆದರೆ, ಇದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಹಿಂದೆಯೂ ‘ಸಿಬಿಟಿ’  ಸಲ್ಲಿಸಿರುವ ಪ್ರಸ್ತಾವಗಳನ್ನು ಸರ್ಕಾರ  ಅಂಗೀಕರಿಸಿದೆ. ಆದಾಗ್ಯೂ, ಈ ವಿಷಯ ಇತ್ಯರ್ಥಗೊಳ್ಳದಿದ್ದಲ್ಲಿ ಎರಡೂ ಸಚಿವಾಲಯಗಳು ಇದನ್ನು ಅನೌಪಚಾರಿಕವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಂದಿಡಲಿದೆ’ ಎಂದು  ಹೇಳಿದರು.ನೌಕರರ ಭವಿಷ್ಯ ನಿಧಿ ಠೇವಣಿಯ ಮೇಲೆ 2005-06ನೇ ಸಾಲಿನಿಂದಲೂ ಶೇ 8.5ರಷ್ಟು ಬಡ್ಡಿ ದರ ನೀಡಲಾಗುತ್ತಿದೆ. ಇತ್ತೀಚೆಗೆ ಅಮಾನತು ಖಾತೆಯಲ್ಲಿ ್ಙ 1,731.57 ಕೋಟಿ ಮಿಗಿತ ವರಮಾನವು  ಪತ್ತೆಯಾದ ನಂತರ,   ‘ಇಪಿಎಫ್‌ಒ’   ಇದನ್ನು ಶೇ 9.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿತ್ತು.  ಆದರೆ, ಹಣಕಾಸು ಸಚಿವಾಲಯ  ಠೇವಣಿ ಮೇಲೆ ಹೆಚ್ಚುವರಿ ಲಾಭ ಇಲ್ಲ ಎಂದು ಹೇಳುತ್ತಿದೆ. ಶೇ 9.5 ರಷ್ಟು ಬಡ್ಡಿ ದರ ಜಾರಿಯಾದರೆ ಅದರಿಂದ 4.7 ಕೋಟಿ ‘ಪಿಎಫ್’ ಚಂದಾದಾರರಿಗೆ ಅನುಕೂಲವಾಗಲಿದೆ.ಎಲ್‌ಐಸಿ ಹೂಡಿಕೆ: ನೌಕರರ ಭವಿಷ್ಯ ನಿಧಿ ಹಣವನ್ನು ಎಲ್‌ಐಸಿ  ಗೃಹ ನಿರ್ಮಾಣ ಸಂಸ್ಥೆಗಳಲ್ಲಿ ಹೂಡುವ ಪ್ರಸ್ತಾವಕ್ಕೆ ಭವಿಷ್ಯ ನಿಧಿ ಕೇಂದ್ರ ಮಂಡಳಿ (ಸಿಬಿಟಿ) ಟ್ರಸ್ಟಿಗಳು ಮಂಗಳವಾರ ಇಲ್ಲಿ ಅನುಮೋದನೆ ನೀಡಿದ್ದಾರೆ.    ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಎಲ್‌ಐಸಿ ಗೃಹ    ನಿರ್ಮಾಣ ಸಂಸ್ಥೆಗಳ ಬಾಂಡ್‌ಗಳಲ್ಲಿ ್ಙ 450 ಕೋಟಿ ಹೂಡಿಕೆ ಮಾಡುವ ಯೋಜನೆಯನ್ನು ‘ಸಿಬಿಟಿ’ ಹೊಂದಿದೆ.

 ಖರ್ಗೆ ಆಶಾವಾದ

‘ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯವು ಶೀಘ್ರದಲ್ಲಿಯೇ ತನ್ನ ಅನುಮೋದನೆ ನೀಡುವ ನಿರೀಕ್ಷೆ ಇದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಇಲ್ಲಿ ಆಶಾವಾದ ವ್ಯಕ್ತಪಡಿಸಿದರು.ಭವಿಷ್ಯ ನಿಧಿಯ ಧರ್ಮದರ್ಶಿಗಳ ಕೇಂದ್ರೀಯ ಮಂಡಳಿಯ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ಹಣಕಾಸು ಸಚಿವಾಲಯ ಕೇಳಿದ ಎಲ್ಲ ಪ್ರಶ್ನೆಗಳಿಗೆ ನಾವು  ಸಮರ್ಪಕ ಉತ್ತರ ನೀಡಿರುವುದರಿಂದ 2010-11ನೇ ಸಾಲಿಗೆ ಶೇ 9.5ರಷ್ಟು ಬಡ್ಡಿ ಪಾವತಿಸಲು ಅನುಮತಿ ನೀಡುವ ನಿರೀಕ್ಷೆ ನಮಗೆ ಇದೆ ಎಂದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.ಷೇರು ಹೂಡಿಕೆ ಇಲ್ಲ: ಭವಿಷ್ಯ ನಿಧಿಯಲ್ಲಿ ಇರುವ 5 ಲಕ್ಷ ಕೋಟಿಗಳಲ್ಲಿ  ಕೆಲ ಭಾಗವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡದಿರಲೂ ಟ್ರಸ್ಟಿಗಳು ನಿರ್ಧರಿಸಿದ್ದಾರೆ. ಇಂತಹ ಹೂಡಿಕೆಗೆ ಸುರಕ್ಷತೆಯ ಭರವಸೆ ನೀಡಲು ಮತ್ತು ಬರಬಹುದಾದ ಲಾಭಕ್ಕೆ ಹಣಕಾಸು ಸಚಿವಾಲಯವು ಯಾವುದೇ ಖಾತರಿ ನೀಡಲು ನಿರಾಕರಿಸಿರುವುದರಿಂದ ಈ ನಿರ್ಣಯಕ್ಕೆ ಬರಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry