ಪಿಎಫ್ ಸಂಸ್ಥೆಯ ನೂತನ ಕಟ್ಟಡ ನಾಳೆ ಉದ್ಘಾಟನೆ

7

ಪಿಎಫ್ ಸಂಸ್ಥೆಯ ನೂತನ ಕಟ್ಟಡ ನಾಳೆ ಉದ್ಘಾಟನೆ

Published:
Updated:

ಹುಬ್ಬಳ್ಳಿ: 1983ರಲ್ಲಿ ಹುಬ್ಬಳ್ಳಿಯಲ್ಲಿ ತನ್ನ ಉಪಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಿದ `ಕಾರ್ಮಿಕರ ಭವಿಷ್ಯನಿಧಿ ಸಂಘಟನೆ~ಯು (ಇಪಿಎಫ್) ಇದೀಗ, ಅಂದರೆ ಸುಮಾರು 29 ವರ್ಷಗಳ ಸುದೀರ್ಘ ಅವಧಿಯ ಬಳಿಕ ಸ್ವಂತ ಕಟ್ಟಡದಲ್ಲಿ ತನ್ನ ಚಟುವಟಿಕೆಯನ್ನು ಆರಂಭಿಸಲಿದೆ.ನವನಗರದಲ್ಲಿ ಆದಾಯ ತೆರಿಗೆ ಕಚೇರಿಗಳ ಕಟ್ಟಡದ ಹಿಂಭಾಗದಲ್ಲಿ 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡವನ್ನು ಇದೇ 26ರಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ.ಧಾರವಾಡ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಉಪಪ್ರಾದೇಶಿಕ ಕಚೇರಿ ಮೊಟ್ಟಮೊದಲು ಆರಂಭವಾದಾಗ ಹುಬ್ಬಳ್ಳಿಯ ಮುಜಾವರ್ ಬಿಲ್ಡಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ 1992ರಿಂದ ಇಲ್ಲಿಯವರೆಗೆ ನಗರದ ಕಾಟನ್ ಮಾರುಕಟ್ಟೆಯ ಶ್ರೀನಾಥ್ ಕಟ್ಟಡ ಸಮುಚ್ಚಯದ ನಾಲ್ಕನೇ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿತ್ತು. 2010ರ ಏಪ್ರಿಲ್‌ನಲ್ಲಿ ನವನಗರದ ಆದಾಯ ತೆರಿಗೆ ಕಚೇರಿಯ ಹಿಂಭಾಗದಲ್ಲಿರುವ 21,600 ಚದರ ಅಡಿ ಜಾಗವನ್ನು ಗುರುತಿಸಿ ಕಟ್ಟಡ ನಿರ್ಮಾಣವನ್ನು ಆರಂಭಿಸಲಾಗಿತ್ತು.ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಆ್ಯಂಡ್ ಕನ್‌ಸ್ಟ್ರಕ್ಷನ್ಸ್ ಲಿ. ಸಂಸ್ಥೆ ಈ ಕಟ್ಟಡವನ್ನು ನಿರ್ಮಿಸಿದ್ದು, `ಭವಿಷ್ಯನಿಧಿ ಭವನ~ ಎಂದು ನಾಮಕರಣ ಮಾಡಲಾಗಿದೆ. ಒಟ್ಟು ಮೂರು ಅಂತಸ್ತ ಹೊಂದಿರುವ ಈ ಕಟ್ಟಡ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ಮಾಡ್ಯುಲರ್ ಪೀಠೋಪಕರಣಗಳು ಹಾಗೂ ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆಯನ್ನು ಇದು ಹೊಂದಲಿದೆ.ಬ್ರೈಲ್ ಲಿಫ್ಟ್: ಅಂಧ ಗ್ರಾಹಕರು ಈ ಕಚೇರಿಗೆ ಬಂದರೆ ಯಾರ ಸಹಾಯವನ್ನೂ ಪಡೆಯದೇ ಅವರೇ ಲಿಫ್ಟ್ ಬಳಸಲಿ ಎಂಬ ಉದ್ದೇಶದಿಂದ ಲಿಫ್ಟ್‌ಗೆ ಬ್ರೈಲ್ ಲಿಪಿಯುಳ್ಳ ಬಟನ್‌ಗಳನ್ನು ಅಳವಡಿಸಲಾಗಿದೆಯಂತೆ. ಅಲ್ಲದೇ ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ, ಗಾಲಿಕುರ್ಚಿಗಳನ್ನು ಕೊಂಡೊಯ್ಯಲು ಪಾವಟಿಗೆರಹಿತ ದಾರಿಯನ್ನು ನಿರ್ಮಿಸಲಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಉಪಪ್ರಾದೇಶಿಕ ಕಚೇರಿಯ ಆಯುಕ್ತ ಸನತ್‌ಕುಮಾರ್, `ನಮ್ಮ ಕಚೇರಿಗೆ ಸ್ವಂತ ಕಟ್ಟಡ ಹೊಂದುವ ಬಹುದಿನಗಳ ಕನಸು ಇದೀಗ ಈಡೇರಿದೆ. ಒಟ್ಟಾರೆ 4.72 ಲಕ್ಷ ಗ್ರಾಹಕರನ್ನು ಹೊಂದಿರುವ ಉಪಪ್ರಾದೇಶಿಕ ಕಚೇರಿಯು ನವನಗರದಲ್ಲಿ ಪಿ.ಬಿ. ರಸ್ತೆಗೆ ಹೊಂದಿಕೊಂಡಂತೆ ಇದೆ. ಇದರಿಂದ ಧಾರವಾಡ ಹಾಗೂ ಬೆಳಗಾವಿ ನಗರಗಳ ಇಪಿಎಫ್ ಗ್ರಾಹಕರಿಗೆ ಹತ್ತಿರವಾಗಲಿದೆ~ ಎಂದರು.`ನೂತನ ಪೀಠೋಪಕರಣ ಹಾಗೂ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕಿರುವುದರಿಂದ ಉದ್ಘಾಟನೆಯಾದ ತಕ್ಷಣವೇ ಕಚೇರಿಯನ್ನು ಸ್ಥಳಾಂತರಿಸುವುದಿಲ್ಲ. ಒಂದೆರಡು ತಿಂಗಳ ಬಳಿಕವಷ್ಟೇ ನೂತನ ಕಟ್ಟಡಕ್ಕೆ ಹೋಗುತ್ತೇವೆ~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry