ಬುಧವಾರ, ಮಾರ್ಚ್ 29, 2023
25 °C

ಪಿಎಸಿಗೆ ವಿರೋಧ: ಜೆಪಿಸಿಗೇ ಪಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮುಂದೆ ಹಾಜರಾಗಿ ಹೇಳಿಕೆ ನೀಡುವೆ ಎಂಬ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ವಿರೋಧಿಸಿರುವ ಬಿಜೆಪಿ, ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಮಾತ್ರ ತನಿಖೆಗೆ ಹೆಚ್ಚಿನ ಅಧಿಕಾರವಿರುವುದರಿಂದ ಜೆಪಿಸಿಯನ್ನೇ ರಚಿಸಬೇಕು ಎಂದು ಪಟ್ಟು ಹಿಡಿದಿದೆ.



ಹಗರಣ ಕುರಿತಂತೆ ಪ್ರಧಾನಿ ಮೌನ ಮುರಿದು ಮಾತನಾಡಿರುವುದು ಸ್ವಾಗತಾರ್ಹ. ಆದರೆ ತಮ್ಮ ಮೇಲಿನ ಆರೋಪಗಳ ವಿಚಾರಣೆಗಾಗಿ ತಾವೇ ನಿರ್ದಿಷ್ಟ ಸಮಿತಿಯನ್ನು ತನಿಖೆಗಾಗಿ ಆಯ್ಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಟೀಕಿಸಿದ್ದಾರೆ.



‘ಅಡಗಿಸಿಕೊಳ್ಳುವಂಥದ್ದು ಏನಿಲ್ಲ’ ಎಂದಿರುವ ಪ್ರಧಾನಿ, ಸ್ವತಃ ತನಿಖೆಗೆ ಒಳಗಾಗಲು ಆಯ್ದುಕೊಂಡಿರುವ ಕ್ರಮವನ್ನು ಬಿಜೆಪಿ ಟೀಕಿಸಿದೆ. ಇದರ ಅರ್ಥ ಬೆಳಕಿಗೆ ಬರಬಾರದ ವಿಷಯಗಳು ಬಹಳ ಇವೆ ಅನ್ನುವುದನ್ನು ಸೂಚಿಸುತ್ತದೆ. ಪ್ರಧಾನಿ ಮತ್ತು ಅವರ ಸರ್ಕಾರ ತಪ್ಪೇನೂ ಎಸಗಿಲ್ಲ ಎಂದಾದರೆ, ಜಂಟಿ ಸಂಸದೀಯ ಸಮಿತಿ ನೇಮಕಕ್ಕೆ ಹೆದರುವುದು ಏಕೆ ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.



ಲೆಕ್ಕಪತ್ರ ಸಮಿತಿಯ ಅಧಿಕಾರ ಸೀಮಿತವಾಗಿದೆ, ಅದು ಸಿಎಜಿ ವರದಿ ಮೇಲೆ ಆಂತರಿಕ ಲೆಕ್ಕಪರಿಶೋಧನೆಯನ್ನಷ್ಟೇ ಮಾಡುತ್ತದೆ. ಆದರೆ 2ಜಿ ಸ್ಪೆಕ್ಟ್ರಂ ಸಂಪೂರ್ಣ ರಾಜಕೀಯ  ಪ್ರೇರಿತವಾಗಿರುವುದರಿಂದ ಪಿಎಸಿ ನೇಮಕ ಸಮಗ್ರವಾಗುವುದಿಲ್ಲ ಎಂದಿದೆ.



ಕಾಂಗ್ರೆಸ್‌ಗೆ  ‘ಬಿಜೆಪಿ ಭೀತಿ’ (ಬಿಜೆಪಿ ಫೋಬಿಯಾ) ಕಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಕ್ಷದ ಶತಮಾನದ ಸಾಧನೆಯನ್ನು ಮೆಲುಕು ಹಾಕುವ ಬದಲು ಮುಖಂಡರು ಬಿಜೆಪಿಯ ಮೇಲೆ ಹರಿಹಾಯ್ದಿರುವುದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.