ಪಿಎಸಿ ಎದುರು ಹಾಜರಾದ ಅನಿಲ್, ಟಾಟಾ

7

ಪಿಎಸಿ ಎದುರು ಹಾಜರಾದ ಅನಿಲ್, ಟಾಟಾ

Published:
Updated:
ಪಿಎಸಿ ಎದುರು ಹಾಜರಾದ ಅನಿಲ್, ಟಾಟಾ

ನವದೆಹಲಿ (ಐಎಎನ್‌ಎಸ್): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ಮಂಗಳವಾರ ಕೈಗಾರಿಕೋದ್ಯಮಿಗಳಾದ ಅನಿಲ್ ಅಂಬಾನಿ, ಅತುಲ್ ಝಾಂಬ್ ಮತ್ತಿತರರನ್ನು ವಿಚಾರಣೆಗೆ ಗುರಿಪಡಿಸಿತು.

ಟಾಟಾ ಗ್ರೂಪ್‌ನ ಅಧ್ಯಕ್ಷ ರತನ್ ಟಾಟಾ ಹಾಗೂ ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ ಅವರನ್ನು ಸೋಮವಾರವೇ ಪ್ರಶ್ನಿಸಲಾಗಿತ್ತು. ಅಂಬಾನಿ, ಟಾಟಾ ಇಬ್ಬರೂ ಅತ್ಯಂತ ನೇರ ಮತ್ತು ಮುಕ್ತವಾಗಿ ಮಾತನಾಡಿದರು. ಆದರೆ ರಾಡಿಯಾ ಪ್ರತಿಕ್ರಿಯೆ ನುಣುಚಿಕೊಳ್ಳುವ ರೀತಿಯಲ್ಲಿತ್ತು. ಸ್ಪೆಕ್ಟ್ರಂ ಹಂಚಿಕೆಯಲ್ಲಿನ ನೀತಿ ನಿಯಮ, ಮೊದಲು ಬಂದವರಿಗೆ ಮೊದಲ ಆದ್ಯತೆ ನೀತಿ, ಸೇವಾದಾರರು ಹೊಂದಿರುವ ಹೆಚ್ಚುವರಿ ಸ್ಪೆಕ್ಟ್ರಂ, 2ಜಿ- 3ಜಿ ದೂರಸಂಪರ್ಕ ಸೇವೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಶ್ನೆಗಳು ಕೇಂದ್ರೀಕೃತಗೊಂಡಿದ್ದವು ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ನಡೆದ 3ಜಿ ಸ್ಪೆಕ್ಟ್ರಂ ಹರಾಜಿನ ಬಗ್ಗೆಯೂ ರಿಲಯನ್ಸ್ ಕಮ್ಯುನಿಕೇಷನ್ಸ್ ಅಧ್ಯಕ್ಷ ಅಂಬಾನಿ ಅವರನ್ನು ಪ್ರಶ್ನಿಸಲಾಯಿತು. ಅಂಬಾನಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು. ಸಿಬಿಐ ಆರೋಪಗಳ ಬಗ್ಗೆ ಕೇಳಿದಾಗ ಮಾತ್ರ, ‘ವಿಷಯ ಕೋರ್ಟ್‌ನಲ್ಲಿ ಇರುವುದರಿಂದ ವಿವರವಾದ ಹೇಳಿಕೆ ನೀಡಲು ಸಾಧ್ಯವಿಲ್ಲ’ ಎಂದರು. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ನೀತಿಯನ್ನು ಸಮರ್ಥಿಸಿಕೊಂಡ ಅವರು, 3ಜಿ ಸ್ಪೆಕ್ಟ್ರಂ ಹಂಚಿಕೆಗೆ ಹರಾಜಿನ ಮಾರ್ಗವನ್ನು ಬೆಂಬಲಿಸಿದರು.

‘ಎಲ್ಲ ಮಾಹಿತಿಯೂ ಅವರ ಬಾಯಿಯ ತುದಿಯಲ್ಲಿತ್ತು. ಯಾವುದೇ ಕಾಗದ ಅಥವಾ ಸಿದ್ಧ ಉತ್ತರದ ಅಗತ್ಯ ಅವರಿಗಿರಲಿಲ್ಲ’ ಎಂದು ಬಿಜೆಪಿ ನಾಯಕ ಮುರಳಿ ಮನೋಹರ ಜೋಷಿ ನೇತೃತ್ವದ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಮುನ್ನ ನಡೆದ ವಿಚಾರಣೆಯಲ್ಲಿ ಹಿರಿಯ ಸಹೋದ್ಯೋಗಿಗಳೊಂದಿಗೆ ಬಂದಿದ್ದ ಎಟಿಸಲಾಟ್ ಡಿಬಿ ಟೆಲಿಕಾಂ ಮುಖ್ಯ ಕಾರ್ಯನಿರ್ವಾಹಕ ಅತುಲ್ ಝಾಂಬ್, ಸಿಬಿಐ ವಶದಲ್ಲಿರುವ ಶಾಹಿದ್ ಬಲ್ವ ತಮ್ಮ ಸಹಭಾಗಿ ಎಂದು ತಿಳಿಸಿದರು. ಎಸ್‌ಟೆಲ್ ಸಿಇಒ ಶಮಿಕ್ ದಾಸ್ ಅವರನ್ನೂ ಸಮಿತಿ ಪ್ರಶ್ನಿಸಿತು.

ಟಾಟಾ ಒಪ್ಪಿಗೆ: ‘ಹಗರಣಕ್ಕೆ ಸಂಬಂಧಿಸಿದ ಕೆಲ ಧ್ವನಿಮುದ್ರಿಕೆಗಳಲ್ಲಿ ಇರುವುದು ತಮ್ಮದೇ ಧ್ವನಿ, ರಾಡಿಯಾ ಮೂಲಕ ಕರುಣಾನಿಧಿ ಅವರಿಗೆ ಬರೆದು ಕಳುಹಿಸಿದ್ದ ಪತ್ರವೂ ತಮ್ಮದೇ ಎಂಬುದನ್ನು ಟಾಟಾ ಒಪ್ಪಿಕೊಂಡರು. ಕೆಲ ವಿಷಯಗಳ ಬಗ್ಗೆ ಅವರ ಬಳಿ ಮಾಹಿತಿ ಇರಲಿಲ್ಲ, ಆದರೆ ಅದನ್ನು ಕೆಲ ದಿನಗಳಲ್ಲೇ ಒದಗಿಸುವುದಾಗಿ ತಿಳಿಸಿದರು’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುರಳಿ ಮನೋಹರ ಜೋಷಿ ಮಾಹಿತಿ ನೀಡಿದರು.

ಕೇಂದ್ರ ಸಚಿವ ದಯಾನಿಧಿ ಮಾರನ್ ಅವರೊಂದಿಗೆ ತಮಗೆ ಹೆಚ್ಚಿನ ಹೊಂದಾಣಿಕೆ ಆಗದಿದ್ದುದನ್ನು ಸಹ ಒಪ್ಪಿಕೊಂಡ ಟಾಟಾ, ಯುಪಿಎ ಸರ್ಕಾರದ ಎರಡನೇ ಅವಧಿಯ ಸಚಿವರ ಆಯ್ಕೆಯಲ್ಲಿ ತಾವು ಯಾವುದೇ ಪ್ರಭಾವ ಬೀರಿರಲಿಲ್ಲ ಎಂದು ತಿಳಿಸಿದರು. ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರನ್ನು ಹೊಗಳಿ ಪ್ರಧಾನಿ ಅಥವಾ ಕೇಂದ್ರ ಸಚಿವರನ್ನು ಬಿಟ್ಟು ಡಿಎಂಕೆ ಮುಖ್ಯಸ್ಥ ಕೆ.ಕರುಣಾನಿಧಿ ಅವರಿಗೆ ಪತ್ರ ಬರೆದಿದ್ದೇಕೆ ಎಂದು ಅವರನ್ನು ಪ್ರಶ್ನಿಸಲಾಯಿತು.

ಈ ಪತ್ರ ಬಹಿರಂಗಗೊಂಡದ್ದು ಹೇಗೆ ಎಂದದ್ದಕ್ಕೆ, ಭಾರ್ತಿ ಟೆಲಿಕಾಂನ ಸುನಿಲ್ ಮಿತ್ತಲ್ ಮೊದಲಿಗೆ ಅದನ್ನು ಪ್ರಸ್ತಾಪಿಸಿದ್ದರು ಎಂದು ಟಾಟಾ ಹೇಳಿದರಾದರೂ, ಪತ್ರ ಬಹಿರಂಗಗೊಂಡದ್ದಕ್ಕೆ ಯಾರನ್ನೂ ದೂಷಿಸಲಿಲ್ಲ. ರಾಜಾ ಅವರ ಸ್ಪೆಕ್ಟ್ರಂ ಹಂಚಿಕೆಯ ಸುತ್ತ ಸಾಕಷ್ಟು ವಿವಾದಗಳು ಸುತ್ತಿಕೊಂಡಿದ್ದರಿಂದ ಅಂತಹ ಪತ್ರವನ್ನು ಬರೆಯುವ ಅಗತ್ಯವಾದರೂ ಏನಿತ್ತು ಎಂದೂ ಅವರನ್ನು ಕೇಳಲಾಯಿತು.

ರಾಡಿಯಾ ನೇರವಾಗಿರಲಿಲ್ಲ. ಕೆಲವೊಮ್ಮೆ ತಮಗೆ ತಿಳಿಯದು, ನೆನಪಿಲ್ಲ, ಕೆಲ ಪತ್ರಕರ್ತರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳ ಜೊತೆ ತಾವು ನಡೆಸಿರುವುದಾಗಿ ಹೇಳುತ್ತಿರುವ ಧ್ವನಿಮುದ್ರಿಕೆಗಳನ್ನು ತಿರುಚಲಾಗಿದೆ ಎಂದರು. ವಿಚಾರಣೆಯ ಬಳಿಕ ಅವರ ಸಾರ್ವಜನಿಕ ಸಂಪರ್ಕ ಸಂಸ್ಥೆಯಾದ ವೈಷ್ಣವಿ ಕಮ್ಯುನಿಕೇಷನ್ಸ್ ‘ನೀರಾ ರಾಡಿಯಾ ಪಿಎಸಿ ಎದುರು ಹಾಜರಾಗಿ ಸಹಕರಿಸಿದರು’ ಎಂದು ಹೇಳಿರುವುದು ಸರಿಯಲ್ಲ ಎಂದು ಜೋಷಿ ಟೀಕಿಸಿದರು.

ತಾವು ದಲ್ಲಾಳಿ ಎಂಬುದನ್ನು ಒಪ್ಪಿಕೊಳ್ಳದ ರಾಡಿಯಾ, ತಮ್ಮನ್ನು ಗೊತ್ತು ಮಾಡಿಕೊಂಡ ಗ್ರಾಹಕರ ಪರವಾದ ಕೆಲಸಗಳನ್ನಷ್ಟೇ ಮಾಡುವುದಾಗಿ ಹೇಳಿಕೊಂಡರು. ಟಾಟಾ ಅವರ ಪತ್ರದ ಬಗ್ಗೆ ಕೇಳಿದಾಗ, ಅದು ಮುಚ್ಚಿದ ಲಕೋಟೆಯ ಒಳಗೆ ಇದ್ದುದರಿಂದ ಅದರಲ್ಲಿದ್ದ ಅಂಶಗಳ ಅರಿವಿಲ್ಲ, ಟಾಟಾ ಅವರಿಂದ ಕರುಣಾನಿಧಿ ಅವರಿಗೆ ತಾವು ಅದನ್ನು ತಲುಪಿಸಿದ್ದು ಮಾತ್ರ ಎಂದು ಉತ್ತರಿಸಿದರು.

ಎ.ರಾಜಾ ಅವರನ್ನು ಸಂಪುಟ ಸಚಿವರನ್ನಾಗಿಸಲು ಪತ್ರಕರ್ತರು ಹಾಗೂ ಇತರರ ಜೊತೆ ಲಾಬಿ ನಡೆಸಿದ ಬಗ್ಗೆ, ಬೇಕಾದ ವರದಿಗಳ ಪ್ರಕಟಣೆ ಹಾಗೂ ಲಾಬಿಗಾಗಿ ಪತ್ರಕರ್ತರಿಗೆ ಹಣ ನೀಡುವ ಅಭ್ಯಾಸ ನಿಮ್ಮ ಕಂಪೆನಿಗಿದೆಯೇ ಎಂದು ಅವರನ್ನು ಕೇಳಲಾಯಿತು ಎಂದು ಜೋಷಿ ತಿಳಿಸಿದರಾದರೂ, ಅವರ ಉತ್ತರಗಳನ್ನು ಮಾತ್ರ ಬಹಿರಂಗಪಡಿಸಲಿಲ್ಲ. ಅದೆಲ್ಲವೂ ಪಿಎಸಿ ವರದಿಯಲ್ಲಿರುತ್ತವೆ. ಅದಕ್ಕಾಗಿ ನೀವು ಕಾಯಬೇಕು ಎಂದಷ್ಟೇ ಹೇಳಿದರು.

ರಾಜಾ ಅವರಿಗಿಂತ ಹಿಂದೆ ದೂರಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್ ಅವರ ಸಹೋದರ ಕಲಾನಿಧಿ ಮಾರನ್ ಐದು ವರ್ಷಗಳ ಹಿಂದೆ ಟಾಟಾ ಸ್ಕೈನ ಡಿಟಿಎಚ್ ಯೋಜನೆಯ ಷೇರುಗಳನ್ನು ಹೊಂದಲು ಆಸಕ್ತಿ ವಹಿಸಿದ್ದರು. ಸನ್ ಟಿ.ವಿ ಗ್ರೂಪ್‌ಗೆ ಸಂಬಂಧಿಸಿದ ಈ ವಿಷಯದಲ್ಲಿ ಆಗ ಟಾಟಾ ಹಾಗೂ ದಯಾನಿಧಿ ಅವರ ನಡುವೆ ಮನಸ್ತಾಪ ಉಂಟಾಗಿತ್ತು.

ದೂರಸಂಪರ್ಕ ಕಾರ್ಯದರ್ಶಿ ಆರ್.ಚಂದ್ರಶೇಖರ್, ಅವರ ಪೂರ್ವಾಧಿಕಾರಿಗಳಾದ ಡಿ.ಎಸ್.ಮಾಥುರ್, ಸಿದ್ಧಾರ್ಥ ಬೇಹೂರ, ದೂರಸಂಪರ್ಕ ಆಯೋಗದ ಹಣಕಾಸು ವಿಭಾಗದ ಮಾಜಿ ಸದಸ್ಯ ಮಂಜು ಮಾಧವನ್, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರನ್ನೂ ಸಮಿತಿ ಪ್ರಶ್ನಿಸಿದೆ. 2ಜಿ ಸ್ಪೆಕ್ಟ್ರಂ ಹಂಚಿಕೆ ಸಂದರ್ಭದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ರಿಸರ್ವ್ ಬ್ಯಾಂಕ್ ಗೌರ್ನರ್ ಡಿ.ಸುಬ್ಬರಾವ್ ಅವರೊಂದಿಗೆ ಸಂವಾದ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry