ಪಿಎಸ್‌ಐ ಕಿರುಕುಳ: ಅಮಾನತಿಗೆ ಒತ್ತಾಯ

7

ಪಿಎಸ್‌ಐ ಕಿರುಕುಳ: ಅಮಾನತಿಗೆ ಒತ್ತಾಯ

Published:
Updated:

ದೇವನಹಳ್ಳಿ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಗ್ರಾಮಸ್ಥರಿಗೆ ಹಾಗೂ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಪಿಎಸ್‌ಐ ಖಲಂದರ್ ಅವರನ್ನು ಅಮಾನತುಗೊಳಿಸಿ ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಬೆಂಗಳೂರು ನಗರ ಹಾಗೂ ತಾಲ್ಲೂಕು ಪ್ರಜಾ ವಿಮೋಚನ ಚಳುವಳಿ ಕಾರ್ಯಕರ್ತರು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.ನಂತರ ಮಾತನಾಡಿದ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿ ಆಂಜನಪ್ಪ,  ವಿಮಾನ ನಿಲ್ದಾಣ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಖಲಂದರ್ ಖಾನ್‌ಗೆ ನಿವೃತ್ತಿಯಾಗಲು ಕೆಲವೇ ತಿಂಗಳು ಬಾಕಿ ಇದೆ. ಈ ಕಾರಣದಿಂದ  ಮೈಲನಹಳ್ಳಿ, ಹುಣಸೂರು, ಕಾಡಯರಪನಹಳ್ಳಿ, ಭಟ್ಟರಮಾರೇನಹಳ್ಳಿ ಗ್ರಾಮಗಳ ಬಡ ಕೂಲಿ ಕಾರ್ಮಿಕರ ಮೇಲೆ ಸುಳ್ಳು ಕಳ್ಳತನದ ಆರೋಪ ಹೊರಿಸಿ, ಎಫ್.ಐ.ಆರ್ ದಾಖಲಿಸಿ, ಪ್ರತಿ ನಿತ್ಯ ಚಿತ್ರಹಿಂಸೆಗೆ ಗುರಿಮಾಡುತ್ತಿದ್ದಾರೆ. ಇವರನ್ನು ಕೂಡಲೇ ಇಲಾಖೆಯಿಂದ ಅಮಾನತುಗೊಳಿಸಿ, ಇವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.ಎಫ್‌ಐಆರ್ ದಾಖಲಿಸಿ, ಅವರನ್ನು ಠಾಣೆಗೆ ಕರೆತಂದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಅಂಗಡಿ ಮಾಲಿಕರಿಂದಲೂ ಹಣ ವಸೂಲಿಯಲ್ಲಿ ತೊಡಗಿದ್ದಾರೆ. ಮಾನವ ಹಕ್ಕು ಉಲ್ಲಂಘನೆ ಮಾಡಿದ್ದಲ್ಲದೆ ಕಾನೂನು ವಿರೋಧಿ ಕೆಲಸ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಇವರ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ರೈತರು, ದಲಿತರು, ಕಾರ್ಮಿಕರು ಇಂಥವರ ಕೌರ್ಯಕ್ಕೆ ಬಲಿಪಶುವಾಗುತ್ತಿದ್ದಾರೆ ಎಂದು ಆರೋಪಿಸಿದರು.ಪಿ.ವಿ.ಸಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮುನಿಕೃಷ್ಣ ಮಾತನಾಡಿ, ವಿಮಾನ ನಿಲ್ದಾಣ ಸುರಿದ ತ್ಯಾಜ್ಯ ರಾಶಿಗಳಿಂದ ಕಬ್ಬಿಣದ ಹಾಗೂ ಇತರೆ ವಸ್ತುಗಳನ್ನು ಆಯ್ದು ಜೀವನ ನಡೆಸುವ ಹೆಣ್ಣು ಮಕ್ಕಳನ್ನು ಠಾಣೆಯಲ್ಲಿ ಕೂಡಿ ಹಾಕಲಾಗುತ್ತಿದೆ. ಅವರನ್ನು ಬಿಡಿಸಿಕೊಳ್ಳಲು ಬರುವಂತಹವರಿಗೂ ಧಮಕಿ ಹಾಕಿ, ಅವರಿಂದ ತಮಗೆ ಬೇಕಾದ ಕಬ್ಬಿಣ, ಸಿಮೆಂಟ್ ಅನ್ನು ಕೊಡುವಂತೆ ಧಮಕಿ ಹಾಕುತ್ತಿದ್ದಾರೆ. ಇದರಿಂದ ಬೇಸತ್ತ ಗ್ರಾಮದ ಅನೇಕರು ಮನೆ ತೊರೆದಿದ್ದಾರೆ~ ಎಂದು ದೂರಿದರು.ಪಿ.ವಿ.ಸಿ ಬೆಂಗಳೂರು ಜಿಲ್ಲಾ ನಗರ ಉಪಾಧ್ಯಕ್ಷ ಅಯುಬ್ ಖಾನ್ ಮಾತನಾಡಿ, ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ನಿಲ್ದಾಣಕ್ಕೆ ವಶಪಡಿಸಿಕೊಂಡ ಫಲವತ್ತಾದ ಭೂಮಿಗೆ ಇದುವರೆವಿಗೂ ಸೂಕ್ತ ಪರಿಹಾರವಿಲ್ಲ. ಸ್ವಾಧೀನಕ್ಕಾಗಿ ನೀಡಿದ ಭರವಸೆಗಳು ಇದುವರೆಗೂ ಈಡೇರಿಲ್ಲ, ಆದರೂ ನಾಗರಿಕರ ಹಿತ ಕಾಯುವ ಅಧಿಕಾರಿ ಅಮಾಯಕರ ಮೇಲೆ ದೌರ್ಜನ್ಯ ನಡೆಸುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ.ಖಲಂದರ್ ಅವರು ಸೇವಾವಧಿಯಲ್ಲಿ ಮಾಡಿರುವ ಎಲ್ಲಾ ಅಕ್ರಮಗಳ ವಿರುದ್ಧ ತನಿಖೆಯಾಗಬೇಕು. ಪ್ರಸಕ್ತ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಾರ್ವಜನಿಕರಿಗೆ ಉಪಟಳ ಹೆಚ್ಚಾಗಿದ್ದು ವಸೂಲಿ ದಂದೆಯಲ್ಲಿ ತೊಡಗಿ ಕರ್ತವ್ಯ ಲೋಪವೆಸಗಿರುವ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.ಪಿವಿಸಿ ಬೆಂಗಳೂರು ವಿಭಾಗೀಯ ಅಧ್ಯಕ್ಷ ಚಿಕ್ಕನಂಜಪ್ಪ, ಪ್ರಧಾನ ಕಾರ್ಯದರ್ಶಿ ಮುನಿರಾಮಪ್ಪ ಬಿಬಿಎಂಪಿ ಪ್ರಧಾನ ಕಾರ್ಯದರ್ಶಿ ಕೆ.ಎನ್.ಮುನಿರಾಜ್, ಬ್ಯಾಡರಾಯನಪುರ ವಿಧಾನಸಭಾ ಕ್ಷೇತ್ರ ಎನ್.ಮೂರ್ತಿ, ತಿಮ್ಮರಾಯಪ್ಪ, ತಾಲ್ಲೂಕು ಪಿ.ವಿ.ಪಿ ಅಧ್ಯಕ್ಷ ಸಾವಕನಹಳ್ಳಿ ಶ್ರಿನಿವಾಸ್ ಹಾಗೂ ಗ್ರಾಮಸ್ಥರು ಮತ್ತು ಪಿ.ವಿ.ಸಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry