ಶನಿವಾರ, ಮೇ 15, 2021
24 °C

ಪಿಕಳಾರದ ಹಕ್ಕಿಗಳು

ಡಾ. ನಾ. ಡಿಸೋಜ Updated:

ಅಕ್ಷರ ಗಾತ್ರ : | |

ಪುಟ್ಟಜ್ಜಿ ಮನೆ ಅಂಗಳದಲ್ಲಿ ಕುಳಿತು ಅಕ್ಕಿ ಆರಿಸುತ್ತಿದ್ದಳು. ಅಕ್ಕಿಯಲ್ಲಿಯ ಕಲ್ಲು, ಭತ್ತ ತೆಗೆದು ತೆಗೆದು ದೂರ ಎಸೆಯುವಳು. ಆಗ ಕೆಲ ಹಕ್ಕಿಗಳು ಬಂದು ಕುಳಿತು ಅಜ್ಜಿ ಎಸೆಯುವ ಭತ್ತವನ್ನ ಆಯುತ್ತಿದ್ದವು. ಹೀಗೆ ಎಸೆಯುತ್ತ ಅಜ್ಜಿ ಹಕ್ಕಿಗಳನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದಳು.ಅಂದು ಭತ್ತ ಎಸೆಯುವಾಗ ಅಜ್ಜಿ ಹೊಸದೊಂದು ಹಕ್ಕಿ ತನ್ನ ಮನೆ ಅಂಗಳಕ್ಕೆ ಬಂದಿರುವುದನ್ನ ಗುರುತಿಸಿದಳು. ಅದೊಂದು ಪಿಕಳಾರದ ಹಕ್ಕಿ.

`ಓ, ಪಿಕಳಾರ, ಎಲ್ಲಿ ನಿನ್ನ ಕಾಡು?~

ಎಂದು ಕೇಳಿದಳು ಪುಟ್ಟಜ್ಜಿ ಆ ಹಕ್ಕಿಗೆ.`ಇಲ್ಲೆೀ ಪಡುವಣದ ಕಾಡು~

`ಓ ಬಹಳ ದೂರ ಬಂದಿ, ಇಷ್ಟು ದೂರ ಬರಲು ಏನು ಕಾರಣ?~

ಆ ಹಕ್ಕಿ ತುಸು ನಾಚಿತು. ನಂತರ ಇಳಿ ದನಿಯಲ್ಲಿ ಹೇಳಿತು.

`ನನ್ನ ಓರ್ವ ಸಂಗಾತಿ ಇದ್ದಾಳೆ ಇಲ್ಲಿ. ಅವಳನ್ನ ನೋಡಲು ಬಂದೆ~

`ಸಂತೋಷ, ಬೇಗ ಒಂದು ಮನೆ ಮಾಡಿ ಮದುವೆಯಾಗಿ ಬಿಡಿ~

ಎಂದಳು ಪುಟ್ಟಜ್ಜಿ.`ಅದಕ್ಕೇ ತಿರುಗಾಡುತ್ತಿದ್ದೇವೆ... ಗೂಡು ಕಟ್ಟಲು ಒಳ್ಳೆಯ ಕಾಡು ಸಿಗುತ್ತಿಲ್ಲ~

`ಹೌದೇ?~

`ಹೌದು. ನಮ್ಮ ಪಡುವಣದ ಕಾಡಿನ ತುಂಬಾ ಕಾರ್ಖಾನೆಗಳ ಹೊಗೆ... ಮೂಡಣದ ಕಾಡಿನ ತುಂಬ ಅಣೆಕಟ್ಟುಗಳ ಹಿನ್ನೀರು... ಹಕ್ಕಿಗಳು ಅಲ್ಲಿ ಗೂಡು ಕಟ್ಟುವಂತಿಲ್ಲ, ಇಲ್ಲಿ ಇರುವಂತಿಲ್ಲ~.

ತುಂಬಾ ಬೇಸರದಿಂದ ನುಡಿಯಿತು ಹಕ್ಕಿ.`ಹೌದು, ಕಾಡಿನಲ್ಲಿ ಬದುಕಿರುವ ಹಕ್ಕಿಗಳಿಗೆ ಒಂದಲ್ಲಾ ಒಂದು ಕಷ್ಟ~.

ಎಂದು ನುಡಿದ ಅಜ್ಜಿ ಮತ್ತೆ ಕೇಳಿದಳು.

`ಈಗ ಬೇರೆ ಕಾಡು ಹುಡುಕುತ್ತಿರುವಿರಾ?~

`ಹೌದು... ಯಾವುದೇ ತೊಂದರೆ ಇಲ್ಲದ ಕಾಡು ನಮಗೆ ಬೇಕು... ಇಲ್ಲಿ ತೆಂಕಣದಲ್ಲಿ ಒಂದು ಕಾಡು ಇದೆ ಎಂದು ಕೇಳಿದೆ... ಅದಕ್ಕೇ ಈ ಕಡೆ ಬಂದೆ~.

`ತೆಂಕಣದ ಕಾಡು ಚೆನ್ನಾಗಿದೆ, ನೋಡಿ~.

ಪಿಕಳಾರ ಕೊಂಚ ಹೊತ್ತು ಅಲ್ಲಿ ಕುಳಿತು ಭತ್ತವನ್ನ ಆಯ್ದು ತಿಂದಿತು. ನಂತರ ಪುರ್ ಎಂದು ಅಲ್ಲಿಂದ ಹಾರಿತು. ಪುಟ್ಟಜ್ಜಿ ಹಕ್ಕಿ ಹಾರಿದ ದಿಕ್ಕನ್ನು ನೋಡಿ ನಕ್ಕಳು. ಅವಳ ಮನಸ್ಸಿನಲ್ಲಿ ಒಂದು ಹಾಡು ಹುಟ್ಟಿತು.ಮೂಡಣದ ಕಾಡಿನಲ್ಲಿ ಇದ್ದ ಒಂದು ಹಕ್ಕಿಯು

ಪಡುವಣದ ಹಕ್ಕಿಯನ್ನ ಪ್ರೀತಿ ಮಾಡಿತು.

ಪಡುವಣದ ಹಕ್ಕಿ ಇದರ ಪ್ರೀತಿಗೆ ಮನಸೋತು

ಸಂಗಾತಿ ಆಗಿ ಅದನು ಒಪ್ಪಿಕೊಂಡಿತು.

ಎರಡು ಹಕ್ಕಿಗಳೂ ಸೇರಿ ಗೂಡು ಕಟ್ಟಲು

ಒಂದು ಕಾಡ ಹುಡುಕಿಕೊಂಡು ಹೊರಟು ಬಿಟ್ಟವು

ಮೂಡಣದಾ ಕಾಡಿನಲ್ಲಿ ಕಪ್ಪು ಹೊಗೆಯ ಆರ್ಭಟ

ಪಡುವಣದ ಕಾಡಿನಲ್ಲಿ ನಿಂತ ನೀರ ಹೊಯ್ದೊಟ.

ಹೀಗೆಂದೇ ಹಕ್ಕಿಗಳು ಬೇರೆ ಕಾಡ ಬಯಸಿ

ಹಸಿರು ಕಾಡಿನಲ್ಲಿ ತಮ್ಮ ಗೂಡ ಕಟ್ಟಲೆಣಿಸಿ

ಸುಂದರ ಮರ ಹುಡುಕಿ ಗೂಡ ಕಟ್ಟುವೆವೆಂದು

ರೆಕ್ಕೆ ರೆಕ್ಕೆ ಒಂದು ಮಾಡಿ ಅವು ಹೊರಟವು.

 

ಮತ್ತೊಂದು ದಿನ ಅಜ್ಜಿ ಅಕ್ಕಿ ಆರಿಸುವಾಗ ಆ ಪಿಕಳಾರ ಮತ್ತೆ ಕಾಣಿಸಿಕೊಂಡಿತು. ಅದರ ಜೊತೆಯಲ್ಲಿ ಹೆಣ್ಣು ಪಿಕಳಾರ ಕೂಡ ಇದ್ದಿತು.

`ಏನು ಈಗಲೂ ಒಂಟಿಯಾಗಿರುವಿರಿ, ಏಕೆ ಗೂಡು ಕಟ್ಟಲು ಕಾಡು ಸಿಗಲಿಲ್ಲವೆ?~

ಅಜ್ಜಿ ಕೇಳಿದಳು.

ಒಂದೇ ದನಿಯಲ್ಲಿ ಎರಡೂ ಹಕ್ಕಿಗಳು ನುಡಿದವು-

ತೆಂಕಣದ ಕಾಡಿನಲಿ ಗೂಡು ಕಟ್ಟಲಿಕೆಂದು

ಮರವನೊಂದ ಹುಡುಕಿಕೊಂಡು ನಾವು ಹೊರಟೆವು

ಸಾಲು ಸಾಲು ಮರಗಳಂತು ನಮಗೆ ಕಂಡವು

ಒಂದು ಮರವ ಆಯ್ಕೆ ಮಾಡಿ ಗೂಡ ಕಟ್ಟ ಬಯಸಿದೆವು...

ಎರಡು ಹಕ್ಕಿಗಳ ದನಿ ಉಡುಗಿ ಹೋಯಿತು.

`ಏಕೆ ಗೂಡು ಕಟ್ಟಲು ನಿಮಗೆ ಏನು ತೊಂದರೆ ಆಯಿತು?~

ಅಜ್ಜಿ ಆತಂಕದಿಂದ ಕೇಳಿದಳು.

ತೆಂಕಣದಾ ಕಾಡಿನೊಳಗೆ ರೆಕ್ಕೆ ಚಾಚಿ ಹೋಗುವಾಗ

ಕಾಡ ಬಾಗಿಲ ನೋಟ ನಮ್ಮ ಎದೆಯ ಚುಚ್ಚಿತು

ಸಡಗರವೆಲ್ಲ ಮಾಯವಾಗೆ ಅಲ್ಲಿ ಗೂಡು ಬೇಡ ಎನಿಸಿ

ನಾವು ತಿರುಗಿ ಬಂದೆವು, ನಾವು ತಿರುಗಿ ಬಂದೆವು.

`ಅಲ್ಲ, ಅ್ಲ್ಲಲಿ ಅಂತಹದು ಏನಾಯಿತು?~

ಹಕ್ಕಿಗಳು ಮುಖದ ಮೇಲೆ ಸಂಕಟದ ಪರದೆ ಎಳೆದು ತಂದು ನುಡಿದವು.

ತೆಂಕಣದ ಕಾಡಿನತ್ತ ನಾವು ಹಾರಿ ಹೋಗಲು

ದಾರಿಯಲ್ಲಿ ಅಡ್ಡವಾದರೊಂದಿಷ್ಟು ಜನಗಳು.

ಅವರ ಕೈಲಿ ಕೊಡಲಿ ಕತ್ತಿ ಬಿರುಸು ಗರಗಸ

ಹುರುಪು ಇಳಿದು ಹೋಗಿ ನಮ್ಮ ಮೈ ಬೆವರಿತು.

ಕೊಡಲಿ ಕತ್ತಿ ಹಿಡಿದ ಜನ ಕಾಡನ್ನ ಉಳಿಸುವರೇ

ಆ ಕಾಡಿನಲ್ಲಿ ಹಕ್ಕಿ ಪಕ್ಕಿ ಬದುಕಿ ಉಳಿಯಬಲ್ಲುದೆ?

ಎಂಬ ವಿಚಾರ ಮನದಿ ಬಂದು ನಾವು ಓಡಿ ಬಂದೆವು

ಈಗ ಬೇರೊಂದ ಕಾಡ ಹುಡುಕಿ ಹೊರಟಿಹೆವು.

`ಛೆ~ ಎಂದಳು ಅಜ್ಜಿ. ಹಕ್ಕಿಗಳಿಗೂ ಇಂತಹಾ ಗತಿ ಬಂದಿತೆ. `ನಿಮ್ಮನ್ನ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ ಮಕ್ಕಳೆ. ಕಾಡು ಉಳಿಯ ಬೇಕು, ಮರ ಗಿಡ ಬಳ್ಳಿ ಹಸಿರು ಚೆಲ್ಲಿ ನಗಬೇಕು. ಅಂತಹಾ ದಿನ ಬೇಗ ಬರಲಿ. ನೀವು ಒಂದು ಕೆಲಸ ಮಾಡಿ~ ಎಂದಳು ಅಜ್ಜಿ.

`ಏನು ಮಾಡಬೇಕು, ಹೇಳಿ ಅಜ್ಜಿ?~

ತೆಂಕಣದ ದಿಕ್ಕಿನಲ್ಲೇ ಮತ್ತೂ ಮುಂದೆ ಹೋಗಿರಿ

ಪೇಟೆ ಊರು ನಗರ ದಾಟಿ ಹಾಗೇ ಮುಂದೆ ಸಾಗಿರಿ

ಅಲ್ಲಿ ದಟ್ಟ ಕಾಡಿದೆ ಒತ್ತೊತ್ತಾಗಿ ಬೆಳೆದ ಕಾನಿದೆ

ಅಲ್ಲಿ ನೀವು ಪುಟ್ಟದೊಂದ ಗೂಡ ಕಟ್ಟಿರಿ.

ಮನುಷ್ಯನಲ್ಲಿ ದುಷ್ಟನಲ್ಲ ಅವನು ನಿಸರ್ಗ ಪ್ರೇಮಿಯು

ಹಕ್ಕಿಪಕ್ಕಿ ಅಂದರೆ ಅವನಿಗುಂಟು ಪ್ರೀತಿಯು

ಇಂತಹಾ ಜನ ಇರುವವರೆಗೆ ನಿಮಗೆ ಇಲ್ಲ ಬೇಸರ

ಉಳಿಯಿರಲ್ಲಿ ಗೂಡ ಕಟ್ಟಿ ನಿಮ್ಮ ಬದುಕೆ ಬಂಗಾರ.

ಕೊಂಚ ಹೊತ್ತು ಅಜ್ಜಿ ಮನೆ ಅಂಗಳದಲ್ಲಿ ಭತ್ತ ಆಯ್ದು ತಿಂದ ಗಂಡು ಪಿಕಳಾರ ಮತ್ತು ಹೆಣ್ಣು ಪಿಕಳಾರ ಹೊಸ ಕಾಡನ್ನ ಹುಡುಕಿಕೊಂಡು ಹೊರಟವು. ಮನೆಗೆಲಸ ನೆನಪಿಸಿಕೊಂಡ ಅಜ್ಜಿ ಎದ್ದಳು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.