ಭಾನುವಾರ, ಜೂನ್ 20, 2021
20 °C

ಪಿಗ್ಮಿ ಹಣ ವಂಚನೆ: ನಾಗರಿಕರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ನಗರದ ಕೆಲವು ಖಾಸಗಿ ಫೈನಾನ್ಸ್‌ಗಳ ಮಾಲೀಕರು ಸಾರ್ವಜನಿಕರಿಗೆ ಪಿಗ್ಮಿ ಹಣ ನೀಡದೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದರು.ನಗರದ ಪೊಲೀಸ್ ಠಾಣಾ ಆವರಣದಲ್ಲಿ ಸಬ್‌ಇನ್‌ಸ್ಪೆಕ್ಟರ್ ಎಂ.ಮಹೇಶ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಾಗರಿಕ ಸಮಿತಿ ಸಭೆಯಲ್ಲಿ ನಾಗರಿಕರು ಹಲವು ದೂರುಗಳನ್ನು ಮುಂದಿಟ್ಟರು.ನಗರದಲ್ಲಿ 2ರಿಂದ 3 ಫೈನಾನ್ಸ್ ಮಾಲೀಕರು ಪಿಗ್ಮಿ ಸಂಗ್ರಾಹಕರ ಮೂಲಕ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಪಿಗ್ಮಿ ಸಂಗ್ರಹಿಸಿದ್ದು, ಈಗಾಗಲೆ 2 ಫೈನಾನ್ಸ್ ಮಾಲೀಕರು ವಂಚಿಸಿ ಪರಾರಿಯಾಗಿದ್ದಾರೆ. ಕೆಲವು ವರ್ತಕರು, ವರ್ಕ್‌ಶಾಪ್ ಹಾಗೂ ಬಸ್ ಕಾರ್ಮಿಕರು, ವಾಹನ ಚಾಲಕರೂ ಸೇರಿದಂತೆ ಹಲವು ಮಂದಿ ವಂಚನೆಗೆ ಒಳಗಾಗಿದ್ದು, ಇಂತಹ ಫೈನಾನ್ಸ್‌ಗಳಲ್ಲಿ ಕೆಲಸ ಮಾಡಿದ ಕೆಲವು ಮಹಿಳೆಯರು ನಗರದಲ್ಲಿ ಓಡಾಡುವಂತಿಲ್ಲ. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂತು. ಇದಕ್ಕೆ ಪ್ರತಿಕ್ರಿಯಿಸಿದ ಸಬ್‌ಇನ್‌ಸ್ಪೆಕ್ಟರ್ ಪಿಗ್ಮಿಹಣ ನೀಡದೆ ವಂಚಿಸಿರುವ ಬಗ್ಗೆ ಇಲ್ಲಿಯ ತನಕ ದೂರುಗಳು ಬಂದಿಲ್ಲ. ಹಣ ಕಟ್ಟಿದವರು ದೂರು ನೀಡಿದರೆ ಇಲಾಖಾಧಿಕಾರಿಗಳೊಡನೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ. ಇಂತಹ ಫೈನಾನ್ಸ್‌ಗಳ ಪಾಲುದಾರರಿದ್ದರೆ ಅಂತಹವರ ಮೇಲೂ ಕ್ರಮಕೈಗೊಳ್ಳಲಾಗುವುದು ಎಂದರು.ನಗರದಲ್ಲಿ ಏಕಮುಖ ಸಂಚಾರ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯಿತು. ಆದರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಸಬ್‌ಇನ್‌ಸ್ಪೆಕ್ಟರ್ ತಮ್ಮ  ಅಸಹಾಯಕತೆ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂತೆಯ ದಿನದಂದು ಜಿಲ್ಲಾ ಮೀಸಲು ಪಡೆಯ ಆರು ಮಂದಿಯನ್ನು ಸೇವೆಗೆ ನಿಯೋಜಿಸುವ ಭರವಸೆ ನೀಡಿರುವುದಾಗಿ ತಿಳಿಸಿದರು.ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ನಳಿನಿ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ, ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ್, ಮೋಟಾರು ಚಾಲಕರ ಸಂಘದ ಕಾರ್ಯದರ್ಶಿ ಇಬ್ರಾಹಿಂ, ಪದಾಧಿಕಾರಿ ಡ್ಯಾನಿಯಲ್, ಆಟೋ ಚಾಲಕರ ಸಂಘದ ಹಸನಬ್ಬ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.