ಪಿಚ್ಚಾವಾರಂ ಅಗಾಧ ಕಾಂಡ್ಲಾ ಕಾಡು

7

ಪಿಚ್ಚಾವಾರಂ ಅಗಾಧ ಕಾಂಡ್ಲಾ ಕಾಡು

Published:
Updated:

ವಿಶ್ವದಲ್ಲಿಯೇ ಎರಡನೇ ಅತಿ ವಿಸ್ತಾರವಾದ ಕಾಂಡ್ಲಾ (ಮ್ಯಾಂಗ್ರೋವ್) ಕಾಡು ಇರುವುದು ಪಿಚ್ಚಾವರಂನಲ್ಲಿ. ತಮಿಳುನಾಡಿನ ಕಡಲೂರು ಜಿಲ್ಲೆಗೆ ಸೇರಿದ ಪಿಚ್ಚಾವರಂನಲ್ಲಿ ವೆಲ್ಲಾರ್ ಮತ್ತು ಕೊಲೆರೂನ್ ನದಿಗಳು ಬಂಗಾಳ ಕೊಲ್ಲಿ ಸಮುದ್ರಕ್ಕೆ ಸೇರುತ್ತವೆ. ಆ ತಾಣದಲ್ಲಿ ವಿಶಿಷ್ಟ ಕಾಂಡ್ಲಾ ವನ ಬೆಳೆದು ನಿಂತಿದೆ. ಅದು ವಿಶಿಷ್ಟ ಪ್ರವಾಸಿ ತಾಣವಾಗಿಯೂ ಗಮನ ಸೆಳೆಯುತ್ತಿದೆ.ಪರಿಸರ ಪ್ರವಾಸಿ ತಾಣ ಎಂದೇ ಖ್ಯಾತವಾದ ಇದು ನೀರಿನಲ್ಲಿ ಬೇರಿಳಿಸಿಕೊಂಡು ಬೆಳೆಯುವ, ನೀರಿನ ಹರಿವನ್ನು ನಿಯಂತ್ರಿಸುವ ಮರಗಳ ತಾಣ. ಮ್ಯಾಂಗ್ರೋವ್ ಮರಗಳು ಸುನಾಮಿಯನ್ನೂ ತಡೆಯಬಲ್ಲವು ಎಂಬ ಮಾತಿದೆ.ನೀರಿನಾಳಕ್ಕೆ ಬೇರು ಇಳಿಬಿಟ್ಟು ಬೆಳೆದು ನಿಂತಿರುವ ಮರ ಅಥವಾ ಪೊದೆಯಂಥ ಮರಗಳು ವಿವಿಧ ಜೀವಪ್ರಭೇದಗಳ ನೆಲೆಯೂ ಆಗಿವೆ. ವಲಸೆ ಹಕ್ಕಿಗಳಾದ ವಾಟರ್ ಸ್ನಿಪ್ಸ್, ಕೊರ್‌ಮೊರಂಟ್ಸ್, ಇಗ್ರೆಟ್ಸ್, ಸ್ಟೋರ್ರ್ಕ್‌, ಹೆರೊನ್ಸ್, ಸ್ಪೂನ್‌ಬಿಲ್ಸ್, ಪೆಲಿಕಾನ್ಸ್ ಮೊದಲಾದ ನೀರಕ್ಕಿಗಳನ್ನು ನೋಡಲು ಇಲ್ಲಿಗೆ ಬರಬಹುದು. ಪಕ್ಷಿ ವೀಕ್ಷಕರ ಜೊತೆಗೆ ಹಾರಾಡುವ ಹಾಡುಗಳನ್ನು ಸೆರೆಹಿಡಿಯುವ ಛಾಯಾಗ್ರಾಹಕರೂ ಇಲ್ಲಿಗೆ ಬರುವುದುಂಟು.ತಾಜಾ ತಂಗಾಳಿಯಲ್ಲಿ ದೋಣಿ ವಿಹಾರ ಮಾಡಿ ಕಾಂಡ್ಲಾ ಕಾಡಿನ ಸೊಗಸನ್ನು ಸವಿಯಲು ಅವಕಾಶವಿದೆ. ಈ ಕಾಡಿನಲ್ಲಿ ಮೂರು ಗಂಟೆ ದೋಣಿ ವಿಹಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇಡೀ ಕಾಡನ್ನು ಮೂರು ಗಂಟೆಯಲ್ಲಿ ಕ್ರಮಿಸಲು ಸಾಕಾಗದು. ಹಲವು ದ್ವೀಪಗಳು ಆವರಿಸಿಕೊಂಡ ವಿಸ್ತಾರವಾದ ಕಾಡಿದು.2,800 ಎಕರೆ ವಿಸ್ತೀರ್ಣದಲ್ಲಿ ಇರುವ ಕಾಂಡ್ಲಾವನದಲ್ಲಿ 177 ಪ್ರಭೇದದ ಹಕ್ಕಿಗಳಿವೆ. ನವೆಂಬರ್‌ನಿಂದ ಜನವರಿವರೆಗೆ ಇಲ್ಲಿ ಹಕ್ಕಿಗಳ ಜಾತ್ರೆ. ತಮಿಳುನಾಡು ಸರ್ಕಾರ ಇಲ್ಲಿ ಪ್ರತೀವರ್ಷ `ಪರಿಸರ ಪ್ರವಾಸ ಉತ್ಸವ' ನಡೆಸುತ್ತದೆ.ಚೆನ್ನೈನಿಂದ 248 ಕಿಮೀ, ಕೊಯಮತ್ತೂರಿನಿಂದ 357 ಕಿಮೀ, ಚಿದಂಬರನಿಂದ 10 ಕಿಮೀ ದೂರದಲ್ಲಿ ಇರುವ ಪಿಚ್ಚಾವರಂ ಪರಿಸರ ಪ್ರಿಯರು ಸಂದರ್ಶಿಸಲೇಬೇಕಾದ ಅಪರೂಪದ ತಾಣ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry