ಪಿಟೀಲು ತನಿಯ ಮೋಡಿ

7

ಪಿಟೀಲು ತನಿಯ ಮೋಡಿ

Published:
Updated:

ಮೊನ್ನೆ ಮೊನ್ನೆ ಬೆಂಗಳೂರು ಹಬ್ಬದಲ್ಲಿ ನಡೆದ ಒಂದು ಸಂಗೀತ ಕಛೇರಿಯಲ್ಲಿ ಗಾಯನಕ್ಕಿಂತ ಪಿಟೀಲು ವಾದನಕ್ಕೆ ಹೆಚ್ಚು ಪ್ರಶಂಸೆ, ಚಪ್ಪಾಳೆಗಳ ಸುರಿಮಳೆ ಇತ್ತು.ತನಿಯಾವರ್ತನದಲ್ಲಿ ಪಿಟೀಲಿನ `ಮನೋಧರ್ಮ ಸಂಗೀತ~ ಅಂದು ಬಹಳ ಮೆಚ್ಚುಗೆ ಪಡೆಯಿತು. ಪಿಟೀಲಿನ ನಾದವೇ ಹಾಗೆ;  ಜೇನಿನಲ್ಲಿ ಅದ್ದಿದ ಹಲಸಿನ ತೊಳೆಯಂತೆ..! ಸಂಗೀತಪ್ರಿಯರು ಕರ್ನಾಟಕ ಸಂಗೀತ ಕಛೇರಿಯಲ್ಲಿ `ತನಿಯಾವರ್ತನ~ ಬಂದಾಗ ಹೆಚ್ಚು ತನ್ಮಯರಾಗಿ ತಲೆದೂಗುವುದು ಈ ಕಾರಣಕ್ಕಾಗಿಯೇ. ಇದೇ ಮಾತನ್ನು ಖ್ಯಾತ ಪಿಟೀಲು ವಾದಕಿ ಜ್ಯೋತ್ಸ್ನಾ ಶ್ರೀಕಾಂತ್ ಕೂಡ ಸಮರ್ಥಿಸುತ್ತಾರೆ. ಸಂಗೀತ ಕಛೇರಿಗಳಲ್ಲಿ `ತನಿಯಾವರ್ತನ~ ಒಂದು ವಿಶಿಷ್ಟ ಭಾಗ. ಹಾಡುಗಾರರು ರಾಗದ `ಸಂಗತಿ~ಗಳನ್ನು ನವಿರಾಗಿ ಅರಳಿಸಿ ರಸಪಾಕ ಉಣಬಡಿಸುತ್ತಾರೆ. ಪಕ್ಕವಾದ್ಯದವರ ಸಾಮರ್ಥ್ಯ ಪ್ರದರ್ಶನ ನಡೆಯುವುದು ತನಿಯಾವರ್ತನದಲ್ಲೇ. ಅದರಲ್ಲೂ ಪಿಟೀಲಿಗೇ ಮೊದಲ ಪ್ರಾಶಸ್ತ್ಯ.ಪಿಟೀಲು ಒಂದು ವಿಶಿಷ್ಟ ತಂತಿ ವಾದ್ಯ ಪ್ರಕಾರ. ಇದನ್ನು ಪಕ್ಕವಾದ್ಯವಾಗಿಯೂ ಸ್ವತಂತ್ರ ಕಛೇರಿಯಾಗಿಯೂ ನುಡಿಸಬಹುದು. ಇದೀಗ ಫ್ಯೂಷನ್ ಸಂಗೀತದಲ್ಲೂ ಪಿಟೀಲು ಬಳಕೆಯಾಗುತ್ತಿದೆ. ಲಂಡನ್‌ಗೆ ಹೋಗಿ ಪಿಟೀಲನ್ನು ಫ್ಯೂಷನ್ ಸಂಗೀತದೊಂದಿಗೆ ಬೆರೆಸಿರುವ ಡಾ.ಜ್ಯೋತ್ಸ್ನಾ, `ಪಿಟೀಲನ್ನು ಡ್ರಮ್ಸ, ಗಿಟಾರ್, ಕೀಬೋರ್ಡ್, ತಬಲಾ ಮುಂತಾದ ವಾದ್ಯ ಸಂಗೀತದ ಜತೆಗೆ ನುಡಿಸಿದಾಗ ಕೇಳಲು ಸೊಗಸಾಗಿರುತ್ತದೆ. ಇದರಲ್ಲಿ ಅನೇಕ ಪ್ರಯೋಗ ನಡೆಸಿದ್ದೇನೆ. ಲಂಡನ್‌ನಲ್ಲಿ ಇದಕ್ಕಾಗಿಯೇ ಒಂದು ತಂಡವನ್ನೂ ಕಟ್ಟಿ ಹಲವಾರು ದೇಶಗಳಲ್ಲಿ ಪ್ರಸ್ತುತಪಡಿಸಿದ್ದೇನೆ. ಈಗ ಪಿಟೀಲು ಜತೆಗೆ ಜಾಜ್, ಪಾಪ್ ಶೈಲಿಯ ಸಂಗೀತವನ್ನು ಮಿಕ್ಸ್ ಮಾಡಿ ನುಡಿಸುತ್ತಿದ್ದೇನೆ. ಈ ಪ್ರಯೋಗ ಯಶಸ್ವಿಯಾಗುತ್ತಿದೆ~ ಎನ್ನುತ್ತಾರೆ.ಪಿಟೀಲಿಗೆ ಭದ್ರ ಬುನಾದಿ ಹಾಕಿದ ಚೌಡಯ್ಯನವರು ಇದಕ್ಕೆ ಅನ್ವರ್ಥನಾಮವಾದರು. ಅವರ ನೆನಪಾದ ಕೂಡಲೆ ಒಂದು ಸಣ್ಣ ಕಥೆಯೂ ನೆನಪಾಗುತ್ತಿದೆ. ಒಮ್ಮೆ ಪಿಟೀಲು ಚೌಡಯ್ಯನವರು ಶಬರಿಮಲೆಗೆ ಹೋಗಿದ್ದರಂತೆ. ಎಲ್ಲಿ ಹೋಗುವಾಗಲೂ ಕೈಯ್ಯಲ್ಲಿ ಪಿಟೀಲು ಹಿಡಿದುಕೊಂಡೇ ಹೋಗುವುದು ಅವರ ಅಭ್ಯಾಸ. ದಟ್ಟ ಕಾಡು. ಕಾಡಿನ ಮಧ್ಯೆ ನಡೆಯುತ್ತಾ ಹೋಗುವಾಗ ಒಂದು ಕಡೆ ಆನೆಗಳು ಜೋರಾಗಿ ಘೀಳಿಡುತ್ತಿದ್ದವು.ಚೌಡಯ್ಯನವರ ಬಳಿಗೇ ದಾಳಿಯಿಡಲು ಆರಂಭಿಸಿದವು. ಇದನ್ನು ಕಂಡು ಚೌಡಯ್ಯನವರು ಧೃತಿಗೆಡದೆ ಸರಸರನೆ ಒಂದು ಸಣ್ಣ ಮರ ಏರಿದರು. ಕೈಯ್ಯಲ್ಲಿ ಪಿಟೀಲು ತೆಗೆದು ಕಮಾನಿನಿಂದ ತಂತಿ ಮೀಟಿದರು. ಸುಮಧುರ ರಾಗ ನಾದ ಝರಿಯಾಯಿತು. ಆ ನಾದಕ್ಕೆ ಆನೆಗಳು ಕಿವಿಗೊಡುತ್ತಾ ನಿಂತವು. ಸುಮಾರು ಅರ್ಧ ಗಂಟೆ ಕಾಲ ಪಿಟೀಲು ನುಡಿಸಿದ ನಂತರ ಆನೆಗಳು ಸುಮ್ಮನಾದವು. ಚೌಡಯ್ಯನವರು ಮರದಿಂದ ಇಳಿದು ಅಯ್ಯಪ್ಪನ ದರ್ಶನಕ್ಕೆ ಪಾದಯಾತ್ರೆ ಬೆಳೆಸಿದರು. ಹೇಗಿದೆಪಿಟೀಲಿನ ನಾದದ ಮೋಡಿ?

ಪಿಟೀಲಿಗೆ ಜನಾಕರ್ಷಣ ಶಕ್ತಿಯಿದೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳ ಮನಃಪರಿವರ್ತನೆ ಮಾಡುವ ಸಾಮರ್ಥ್ಯ ಇದರ ಸುನಾದಕ್ಕಿದೆ.  ಪಿಟೀಲಿನಲ್ಲಿ ಖ್ಯಾತಿ ಪಡೆದ ಚೌಡಯ್ಯನವರ ನೆನಪಿಗೆ ಬೆಂಗಳೂರಿನಲ್ಲಿ ಪಿಟೀಲಿನ ಆಕಾರದಲ್ಲೇ ಚೌಡಯ್ಯ ಸ್ಮಾರಕ ಭವನ ನಿರ್ಮಿಸಿದ್ದು, ಇಲ್ಲಿ ನಿರಂತರ ಕಛೇರಿ ನಡೆಯುತ್ತಲೇ ಇರುತ್ತದೆ.ಮೊದಲಿಗೆ ಕರ್ನಾಟಕ ಸಂಗೀತದ ಪ್ರಮುಖ ಪಕ್ಕವಾದ್ಯಗಳಲ್ಲಿ ಒಂದಾದ ವಯೊಲಿನ್ ಶಾಸ್ತ್ರೀಯ ಸಂಗೀತ, ಸಿನಿಮಾ, ಲಘು ಸಂಗೀತ ಎಲ್ಲೆಡೆ ಛಾಪು ಮೂಡಿಸಲಾರಂಭಿಸಿದೆ. ಇದನ್ನು ಪಕ್ಕವಾದ್ಯ ಅಲ್ಲದೆ ಸೋಲೊ ಕಛೇರಿಗಳಲ್ಲೂ ಬಳಸುವುದಿದೆ. ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಪಿಟೀಲು ಯುಗಳ ಕಛೇರಿ ಇಂದು ಮನೆಮಾತು. ಎಲ್.ಸುಬ್ರಹ್ಮಣ್ಯಂ ಅವರು ನುಡಿಸುವ ವಯೊಲಿನ್ ಜಗದ್ವಿಖ್ಯಾತಿ. ಲಾಲ್‌ಗುಡಿ ಜಯರಾಮನ್ ಪಿಟೀಲು ಕಛೇರಿ ಮರೆಯುವಂತೆಯೇ ಇಲ್ಲ. ನೆರೆಯ ಚೆನ್ನೈಯಲ್ಲಿದ್ದ ಕುನ್ನಕುಡಿ ವೈದ್ಯನಾಥನ್ ಅವರು ಪಿಟೀಲಿನಲ್ಲಿ ಸಾಕಷ್ಟು ಪ್ರಯೋಗ ಮಾಡಿದ್ದಲ್ಲದೆ ಸಂಗೀತ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಹಾಗೆ ನೋಡಿದರೆ ಪಿಟೀಲು ನಮ್ಮ ದೇಸಿ ವಾದ್ಯ ಅಲ್ಲ. ಇದರ ಮೂಲ ಯೂರೋಪ್. ಮೀಟಿನಿಂದ ನಾದೋತ್ಪತ್ತಿ ಮಾಡುವ ವಿಶಿಷ್ಟ ತಂತಿವಾದ್ಯವಿದು. ಬಲಗೈ ಬೆರಳಿನಿಂದ ಮೀಟಿ ಎಡಗೈ ಬೆರಳುಗಳಿಂದ ತಂತಿಯ ಮೇಲೆ ಕೊಡುವ ಮೃದುವಾದ ಒತ್ತಡದಿಂದ ವಿವಿಧ ಸ್ವರಗಳನ್ನು ಹೊರಡಿಸುವುದು. ಪಿಟೀಲಿನಲ್ಲಿ ಜನಕ-ಜನ್ಯ, ಭಾಷಾಂಗ, ಉಪಾಂಗ ರಾಗಗಳ ಸೊಬಗು ಅದೆಷ್ಟು ಕರ್ಣಾನಂದಕರ..!ಎಲ್ಲಿ ಸಿಗುತ್ತದೆ..?

ಉತ್ತಮ ಗುಣಮಟ್ಟದ ಪಿಟೀಲು ನಗರದ ಬ್ರಿಗೇಡ್ ರಸ್ತೆ ಬಳಿಯ ಸೌಂಡ್‌ಗ್ಲಿಡ್ಜ್ ಮ್ಯೂಸಿಕ್ ಸ್ಟೋರ್ (080-66490858), ಆರ್‌ಟಿ ನಗರದಲ್ಲಿ ಶಿವ ಮ್ಯೂಸಿಕಲ್ಸ್ (080-66493293), ಕೋರಮಂಗಲದಲ್ಲಿ ಅರುಣಾ ಮ್ಯೂಸಿಕಲ್ಸ್ (080-66389263), ಅರುಣಾ ಮ್ಯೂಸಿಕಲ್ಸ್ ನ್ಯೂ (080-25502971).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry