ಪಿಟೀಲು ರಾಮಯ್ಯ ನಡೆದಿದ್ದೆ ದಾರಿ....

7

ಪಿಟೀಲು ರಾಮಯ್ಯ ನಡೆದಿದ್ದೆ ದಾರಿ....

Published:
Updated:

ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ತೆಲುಗು ಭಾಷೆ ಮತ್ತು ಸಂಸ್ಕೃತಿ ಪ್ರಭಾವ ದಟ್ಟವಾಗಿದೆ. ಅಲ್ಲಿನ ಜನಪದ ಶೈಲಿ ಕತೆಗಳು, ಸಂಸ್ಕೃತಿ, ಅಳಿವಿನಂಚಿನಲ್ಲಿರುವ ಕಲೆಗಳು ಎಲ್ಲವೂ ಚಿಕ್ಕಬಳ್ಳಾಪುರ ಜಿಲ್ಲೆಗೂ ವ್ಯಾಪಿಸಿವೆ. ಕಲೆ ಮತ್ತು ಸಂಸ್ಕೃತಿ ವಿಸ್ತರಣೆಗೆ ಯಾವುದೇ ಗಡಿಯಿಲ್ಲ ಎಂಬಂತೆ ಆಂಧ್ರಪ್ರದೇಶದ ಕಲಾವಿದರು ಕನ್ನಡನಾಡಿಗೆ ಬರುತ್ತಿದ್ದು, ಇಲ್ಲಿ ನೆಲೆಯೂರಿ ತಮ್ಮ ಕಲೆ ಕಾಯಕ ಮುಂದುವರಿಸಿದ್ದಾರೆ.ಕೆಲ ಕಲಾವಿದರು ಹೋಬಳಿ ಮತ್ತು ಕುಗ್ರಾಮಗಳಲ್ಲಿ ನೆಲೆ ಕಂಡುಕೊಂಡಿದ್ದರೆ, ಇನ್ನೂ ಕೆಲವರು ಅಲೆಮಾರಿಗಳಂತೆ ತಮ್ಮ ಕಲೆ ವಿಸ್ತರಿಸಿಕೊಳ್ಳುತ್ತ ಮುನ್ನಡೆಯುತ್ತಿದ್ದಾರೆ. ಅಂಥವರಲ್ಲಿ ಆಂಧ್ರಪ್ರದೇಶ ಮೂಲದ ಪಿಟೀಲು ರಾಮಯ್ಯ ಕೂಡ ಒಬ್ಬರು.ಕರಟ ಪಿಟೀಲು ನುಡಿಸುವುದನ್ನೆ ಕಾಯಕವಾಗಿಸಿಕೊಂಡಿರುವ ಅವರು, ಅದರಿಂದಲೆ ಕುಟುಂಬವನ್ನು ಸಾಕಿ ಸಲುಹುತ್ತಿದ್ದಾರೆ. ಮೊದಲಿನಂತೆ ಲೀಲಾಜಾಲವಾಗಿ ಓಡಾಡಲು ಸಾಧ್ಯವಾಗದಿದ್ದರೂ ಇಳಿವಯಸ್ಸಿನಲ್ಲಿ ಅಲ್ಪಸ್ವಲ್ಪ ದುಡಿದು ಜೀವನ ಸಾಗಿಸುವ ಛಲ ಹೊಂದಿದ್ದಾರೆ. ರಾಮಯ್ಯ ಅವರಿಗೆ ಪತ್ನಿ ಮತ್ತು ಮಕ್ಕಳಿದ್ದಾರೆ. ಮಕ್ಕಳು ಸಣ್ಣಪುಟ್ಟ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಅವರಿಗೆ ಕರಟ ಪಿಟೀಲು ಮತ್ತು ಇತರ ಕಲೆಗಳ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ.`ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯವನಾದ ನಾನು ಕಿರಿಯ ವಯಸ್ಸಿನಲ್ಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ. ಸಂಗೀತ ಗುರುಗಳು ನನಗೆ ಸೂಕ್ತ ಮಾರ್ಗದರ್ಶನ ನೀಡಿದರು. ವರ್ಷಗಳು ಕಳೆದಂತೆ ಸಂಗೀತದತ್ತ ಹೆಚ್ಚು ಆಕರ್ಷಿತನಾದೆ. ಆಗಿನ ಕಾಲದಲ್ಲಿ ಜನರು ಅತ್ಯುತ್ಸಾಹದಿಂದ ಸಂಗೀತ ಆಲಿಸುತ್ತಿದ್ದರು. ಜನಪದ ಕಲೆಗೆ ಆದ್ಯತೆ ಸಿಗುತ್ತಿತ್ತು. ಆದರೆ ಈಗ ಟಿವಿ, ರೇಡಿಯೊ, ಸಿನಿಮಾ ಪ್ರಭಾವ ಹೆಚ್ಚಾದಂತೆ ನಮ್ಮಂತಹ ಕಲಾವಿದರು ನಿಧಾನವಾಗಿ ಕಣ್ಮರೆಯಾಗುತ್ತಿದ್ದಾರೆ. ನಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ' ಎಂದು ಕರಟ ಪಿಟೀಲು ರಾಮಯ್ಯ `ಪ್ರಜಾವಾಣಿ'ಗೆ ತಿಳಿಸಿದರು.`ಸಂಗೀತ ಸೇವೆ ಮುಂದುವರಿಸುತ್ತಲೆ ಮದುವೆಯಾದೆ. 20 ವರ್ಷಗಳ ಹಿಂದೆ ಆಂಧ್ರಪ್ರದೇಶ ತೊರೆದು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿಗೆ ಕುಟುಂಬ ಸಮೇತ ಬಂದು ನೆಲೆಸಿದೆ. ಅಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸಿಸುತ್ತಿದ್ದೇನೆ. ನನ್ನ ಬಳಿ ಹೊಸ ಕರಟ ಪಿಟೀಲು ಇಲ್ಲ. ಹಲವಾರು ವರ್ಷಗಳ ಹಿಂದೆ ವ್ಯವಸ್ಥೆ ಮಾಡಿಕೊಂಡಿದ್ದ ಪಿಟೀಲು ನುಡಿಸುತ್ತೇನೆ. ಮಕ್ಕಳು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸಂಗೀತದ ಬಗ್ಗೆ ಆಸಕ್ತಿಯಿಲ್ಲ. ಸಂಗೀತ ಕಲಿಯಲು ನಾನು ಅವರಿಗೆ ಒತ್ತಾಯ-ಒತ್ತಡ ಹೇರಿಲ್ಲ' ಎಂದು ಅವರು ತಿಳಿಸಿದರು.`ಪ್ರತ್ಯೇಕ ಸಂಗೀತ ಕಛೇರಿ ನಡೆಸುವಷ್ಟು ಸಮರ್ಥನಿದ್ದೇನೆ. ಜನಪದ ಮತ್ತು ಪೌರಾಣಿಕ ಗೀತೆಗಳನ್ನು ಹಾಡುತ್ತೇನೆ. ಆದರೆ ನನಗೆ ಅವಕಾಶಗಳು ದೊರೆಯುತ್ತಿಲ್ಲ. ಅದಕ್ಕೆ ರಸ್ತೆಬದಿಗಳಲ್ಲಿ ಮತ್ತು ಪ್ರಮುಖ ವೃತ್ತಗಳಲ್ಲಿ ಒಂದೆಡೆ ಕೂತು ಪಿಟೀಲು ನುಡಿಸುತ್ತೇನೆ.ಸಂಗೀತ ಆಲಿಸಿದವರು ಶ್ಲಾಘಿಸುತ್ತಾರೆ. ಅವರಲ್ಲಿ ಕೆಲವರು ಹಣಕಾಸಿನ ನೆರವು ನೀಡುತ್ತಾರೆ. ಅದನ್ನೇ ನಂಬಿಕೊಂಡು ಜೀವನ ಮುಂದುವರಿಸಿದ್ದೇನೆ. ಬೇರೆಯವರಿಗೂ ಪಿಟೀಲು ನುಡಿಸುವುದನ್ನು ಕಲಿಸಬೇಕೆಂಬ ಬಯಕೆ ನನಗೆ. ಆದರೆ ಕಲಿಯುವವರು ಇಲ್ಲ' ಎಂದು ರಾಮಯ್ಯ ನೋವಿನಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry