ಪಿಡಿಒಗಳ ನಿರ್ಲಕ್ಷ್ಯ-: ಆರೋಪ

7

ಪಿಡಿಒಗಳ ನಿರ್ಲಕ್ಷ್ಯ-: ಆರೋಪ

Published:
Updated:

ಕಾರ್ಕಳ: ಪಡಿತರ ಚೀಟಿ ವಿತರಣೆ ನಡೆಸುವ ಸಂಬಂಧ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಶಿಫಾರಸ್ಸು ಮಾಡುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ವಿಕ್ರಮ್ ಹೆಗ್ಡೆ ಆರೋಪಿಸಿದರು.ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ರಶ್ಮಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು ಮೇಲಧಿಕಾರಿಗಳು  ಸೂಚಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದರು. ತಾಲ್ಲೂಕಿನ ಮುಂಡ್ಕೂರು ಸಚ್ಚರಿಪೇಟೆ ಮೊದಲಾದೆಡೆ ರಸ್ತೆ ಬದಿಯಲ್ಲೇ ಅಂಗಡಿ ಕಟ್ಟಡಗಳು ತಲೆ ಎತ್ತುತ್ತಿದ್ದು, ಅಂಗನವಾಡಿ ಸಮೀಪ ಕೋಳಿ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕುರಿತು ಸದಸ್ಯೆ ಶಕುಂತಲಾ ಶೆಟ್ಟಿ ಸಭೆಯ ಗಮನ ಸೆಳೆದರು. ಈ ಕುರಿತು ಸಭೆಯಲ್ಲಿ ಚರ್ಚೆ ಆಯಿತು. ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಲಾಯಿತು.ಕೆಲವು ಕಡೆಯ ಸರ್ಕಾರಿ ಕಟ್ಟಡಗಳು ಉಪಯೋಗವಾಗದೇ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡುತ್ತಿರುವುದರ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು  ವಿಕ್ರಮ ಹೆಗ್ಡೆ ಸೂಚಿಸಿದರು. ಇಂತಹ ಸಂದರ್ಭದಲ್ಲಿ ಸರ್ಕಾರ ಕ್ರಮಕೈಗೊಳ್ಳುವಂತೆ ಸೂಚಿಸಲು ನಿರ್ಧರಿಸಲಾಯಿತು.

2010-11ರ ಸಾಲಿನಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಮಾಜಿ ಅಧ್ಯಕ್ಷ ಜಯರಾಮ ಸಾಲಿಯಾನ್ ಪ್ರಸ್ತಾಪಿಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ ಅದು ತಾಲ್ಲೂಕು ಪಂಚಾಯಿತಿಯ ತಪ್ಪಲ್ಲ. ಇಡೀ ರಾಜ್ಯಮಟ್ಟದಲ್ಲಿ ಪ್ರಸ್ತಾಪವಾಗುವ ಸಂಗತಿ ಎಂದರು.ಡೀಮ್ಡ ಫಾರೆಸ್ಟ್ ಸಮಸ್ಯೆಯಿಂದಾಗಿ  ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ತಮ್ಮ ತಮ್ಮ ಜಮೀನು ನಿರ್ಧರಿಸಿಕೊಂಡಾಗ ಸಮಸ್ಯೆ ತಪ್ಪುತ್ತದೆ ಎಂದು ಬೆಳ್ಮಣ್ ಸದಸ್ಯ ಕ್ಷೇವಿಯರ್ ಡಿಮೆಲ್ಲೊ ತಿಳಿಸಿದರು.ಅವಧಿ ಮುಗಿದರೂ ಕಾರ್ಕಳ -ಪಡುಬಿದ್ರಿ ಪ್ರಧಾನ ರಸ್ತೆ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಜೈರಾಮ್ ಸಾಲಿಯಾನ್ ಹಾಗೂ ಸದಸ್ಯ ಕ್ಷೇವಿಯರ್ ಡಿಮೆಲ್ಲೊ ಪ್ರಸ್ತಾಪಿಸಿದರು. ಕೆಸಿಪ್ ಅಧಿಕಾರಿ ಉತ್ತರಿಸಿ ವಿದ್ಯುತ್ ಕಂಬ ಸ್ಥಳಾಂತರ, ಮರಗಳನ್ನು ಕಡಿಯುವುದು ನಿಗದಿತ ಅವಧಿಯಲ್ಲಿ ನಡೆಯದೇ ಸಮಸ್ಯೆ ಉಂಟಾಗುತ್ತಿದೆ ಎಂದರು. ತಾಲ್ಲೂಕಿನ ಶಿರ್ಲಾಲು ಎಂಬಲ್ಲಿ ಕರಿಮೆಣಸಿನ ಗುಚ್ಛ ಮಾದರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕುರಿತು ಪ್ರಸ್ತಾಪಿಸಿದರು.

ಉಪಾಧ್ಯಕ್ಷ ಜಯವರ್ಮ ಜೈನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಯಿಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ ಸಾಲ್ಯಾನ್ ಇತರರು  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry