ಸೋಮವಾರ, ಜೂನ್ 14, 2021
21 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

ಪಿ.ಡಿ.ಒಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿ.ಡಿ.ಒಗಳು ಅಕ್ರಮ­ವಾಗಿ ನಮೂನೆ 9 ಮತ್ತು 10 ರ ಮೂಲಕ ಮಾಡುತ್ತಿರುವ ಖಾತೆಗಳಿಗೆ ಕಡಿವಾಣ ಹಾಕುವಂತೆ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು.ಇಲ್ಲಿನ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಆರ್ಥಿಕ ವರ್ಷದ ಸರ್ವಸದಸ್ಯರ ಕೊನೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಲೋಹಾರ ಹಿಂದಿನ ನಡಾವಳಿ ಬಗ್ಗೆ ಪ್ರಸ್ತಾಪಿಸಿದರು.ಆಗ ಎದ್ದು ನಿಂತು ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ.ಕೆ.ಶಿವಪ್ಪ, ‘ಸರ್ಕಾರದ ಆದೇಶದಂತೆ 9 ಮತ್ತು 10ರ ಆಧಾರದ ಮೇಲೆ ಯಾವುದೇ ನೋಂದಣಿ ಮಾಡುವಂತಿಲ್ಲ. ಆದರೂ ಒಂದೇ ದಿನದಲ್ಲಿ ಉಪನೋಂದಣಿ ಇಲಾಖೆಯು ಹದಿನೈದು ಪ್ರಕರಣಗಳನ್ನು ನೊಂದಾಯಿಸಿದೆ. ಈ ಬಗ್ಗೆ ನನ್ನ ಬಳಿ ಎಲ್ಲಾ ಮಾಹಿತಿ ಇದೆ. ಇದನ್ನು ಪರಿಶೀಲಿಸಿ ಯಾಕೆ ಕ್ರಮತೆಗೆದುಕೊಳ್ಳಬಾರದು’ ಎಂದು ಪ್ರಶ್ನಿಸಿದರು.‘ಈಗಾಗಲೇ ಹಿಂದಿನ ಸಭೆಯಲ್ಲಿ ಅಕ್ರಮ ಖಾತೆ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೂ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವರ್ಗಾವಣೆಗೊಂಡ ಪಿ.ಡಿ.ಒಗಳು ಮತ್ತು ನಿವೃತ್ತಿ ಹೊಂದಿದವರು 9 ಮತ್ತು 10 ನಮೂನೆಗಳನ್ನು ಇನ್ನೂ ನೀಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ನಂತರ ಪ್ರತಿಕ್ರಿಯಿಸಿದ ನೋಂದಣಿ ಅಧಿಕಾರಿಯು, ‘2009 ರಿಂದ ದಾಖಲಾತಿ ಅನ್ವಯ ನೋಂದಣಿ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಇ ಸ್ವತ್ತು (ಎಲೆಕ್ರ್ಟಾನಿಕ್‌ ಖಾತೆ) ಮೂಲಕ ಮಾಡಲಾಗುತ್ತಿದೆ. ಕಾರ್ಯ ನಿರ್ವಹಿಸುತ್ತಿರುವವರು ಅಥವಾ ನಿವೃತ್ತಿ ಹೊಂದಿರುವ ಪಿ.ಡಿ.ಒ ಎಂಬುದನ್ನು ನಾವು ಪರಿಶೀಲಿಸಲು ಸಾಧ್ಯವಿಲ್ಲ’ ಎಂದರು.ಮಧ್ಯಪ್ರವೇಶಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯು ಗ್ರಾಮ ಪಂಚಾಯ್ತಿ ಪಿ.ಡಿ.ಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಇದಕ್ಕೆ ಕಡಿವಾಣ ಹಾಕಬೇಕು ಎಂದರು.ಇದಕ್ಕೆ ತೃಪ್ತರಾಗದ ಶಿವಪ್ಪ, ಬೂದಿಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿ ಯಲ್ಲಿ 40 ಎಕರೆ, ವಿಶ್ವನಾಥಪುರ ಪಂಚಾಯಿತಿಯಲ್ಲಿ 8 ಎಕರೆ ಅಕ್ರಮ ಲೇ ಔಟ್‌ಗೆ 9 ಮತ್ತು 10 ಹಾಕಿಕೊಡಲಾಗಿದೆ. ಅಲ್ಲದೆ ರೆವಿನ್ಯೂ ಎಂದೆ ಆರ್.ಟಿ.ಸಿ ದಾಖಲೆಯಲ್ಲಿದೆ. ಇದಕ್ಕೆ ಯಾವ ರೀತಿ ಕಡಿವಾಣ ಎಂದು ಪ್ರಶ್ನಿಸಿದರು. ಪಿ.ಡಿ.ಒಗಳ ನೇಮಕ ಮತ್ತು 9 ಮತ್ತು 10 ನಮೂನೆಯಲ್ಲಿ ಆಗಿರುವ ಅಕ್ರಮ ಲೇಔಟ್‌ಗಳನ್ನು ವಜಾಗೊಳಿಸುವಂತೆ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಿ ಎಂದು ಪಟ್ಟು ಹಿಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.