ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

7

ಪಿಡಿಒ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಗಜೇಂದ್ರಗಡ: ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಗೊಳಿಸಿದ ಭಾರಿ ಪ್ರಮಾಣದ ಅನುದಾನವನ್ನು ದುರ್ಬಳಕ್ಕೆ ಮಾಡಿಕೊಂಡ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ, ಕರವೇ ಕಾರ್ಯಕರ್ತರು ರಾಜೂರ ಗ್ರಾ.ಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಸೋಮವಾರ ನಡೆಯಿತು.ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ರಾಜೂರ ಗ್ರಾ.ಪಂನಲ್ಲಿ ಭಾರಿ ಪ್ರಮಾಣದ ಅನುದಾನ ದುರ್ಬಳ ಯಾಗಿದೆ ಎಂಬ ಆರೋಪದ ಹಿನ್ನೆಲೆ ಯಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಲೋಕಾಯುಕ್ತ ನಿರೀಕ್ಷಕ ಸಂಗನಗೌಡ ನೇತೃತ್ವದ ತಂಡ ದಾಳಿ ನಡೆಸಿ, ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿ, ಅಕ್ರಮ ನಡೆಸಿರುವುದನ್ನು ದೃಢಪಡಿಸಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ಬಿ. ಕಡಬಲಕಟ್ಟಿ ಅವರ ಅಮಾನತಿಗೆ ಶಿಫಾರಸ್ಸು ಮಾಡಲಾಗಿತ್ತು.ಹೀಗಿದ್ದರೂ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಡಬಲಕಟ್ಟಿ ಅವರನ್ನು ಅಮಾನತು ಗೊಳಿಸದೆ, ಸೇವೆಯಲ್ಲಿ ಮುಂದುವರೆಸಿ ರುವುದನ್ನು ಗಮನಿಸಿದರೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಈ ಅವ್ಯವಹಾರದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದರು ಆಕ್ರೋಶ ವ್ಯಕ್ತಪಡಿಸಿದರು.2011 ರಲ್ಲಿ ರೂ 3 ಲಕ್ಷ ಹಾಗೂ 2012 ರಲ್ಲಿ ರೂ 3 ಲಕ್ಷ, ಹೀಗೆ ನಿರಂತರ ರೂ 10 ಲಕ್ಷಕ್ಕೂ ಅಧಿಕ ಅನುದಾನವನ್ನು ವಿದ್ಯುತ್ ಸಾಮಗ್ರಿ ಖರೀದಿ ನೆಪದಲ್ಲಿ ವ್ಯಾಪಕ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ.ಶೇ 22 ರ ಅನುದಾನದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿ ಮಾಡಲು ಕಾಯ್ದಿರಿಸಿದ ಒಟ್ಟು ರೂ 22,680 ಅನುದಾನ ಬಳಕೆಗೆ ಸಂಬಂಧಿಸಿದ ದಾಖಲೆಗಳಿಲ್ಲ. ಹೀಗಿದ್ದರೂ ಎಲ್ಲ ಅನುದಾನವನ್ನು ವಿದ್ಯಾರ್ಥಿಗಳ ಪುಸ್ತಕ ಖರೀದಿಗೆ ನೀಡಲಾಗಿದೆ ಎಂದು ಹೇಳಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲೋಕಾಯುಕ್ತರು ಬಹಿರಂಗ ಪಡಿಸಿದ್ದಾರೆ.ಕರವೇ ತಾಲ್ಲೂಕು ಘಟಕದ ಉಪಾಧ್ಯಕ್ಷ ಶರಣಪ್ಪ ಪೂಜಾರ ಮಾತನಾಡಿ, ರಾಜೂರ ಗ್ರಾಮದಲ್ಲಿನ ಸಮುದಾಯ ಮಹಿಳಾ ಶೌಚಾಲಯ ಹಾಗೂ ತಿಪ್ಪೆಗುಂಡಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಒಟ್ಟು ರೂ 16.4 ಲಕ್ಷ ದುರ್ಬಳಕೆಯಾಗಿದೆ.2008 ರಲ್ಲಿ ಜಾರಿಯಾದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ `ಸುವರ್ಣ ಗ್ರಾಮ~, ~ಸಂರ್ಪೂಣ ನೈರ್ಮಲ್ಯ~ ಯೋಜನೆಗಳಲ್ಲಿ ಕಾಮಗಾರಿಗಳನ್ನು ನಡೆಸದೆ ಕೋಟ್ಯಾಂತರ ಅನುದಾನವನ್ನು ಕಡಬಲಕಟ್ಟಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಟೆಂಡರ ಕರೆಯದೆ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ನಡೆದ ಬಗ್ಗೆ ಸೂಕ್ತ ದಾಖಲಾತಿಗಳಿಲ್ಲ ಎಂದು ದೂರಿದರು.`ಇಂದಿರಾ ಆವಾಸ~ ಮತ್ತು `ಬಸವ ಆವಾಸ~ ಆಶ್ರಯ ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಗ್ರಾ.ಪಂ ವ್ಯಾಪ್ತಿಯಲ್ಲಿನ ಅರ್ಹ ಫಲಾನುಭವಿಗಳಿಗೆ ವಿತರಿಸದೆ, ಮನೆ ಹೊಂದಿದವರಿಗೆ ಮತ್ತೆ ಮತ್ತೆ ಯೋಜನೆಗಳಡಿ ಮನೆಗಳನ್ನು ನೀಡಲಾಗಿದೆ. ಅಲ್ಲದೆ ಮನೆಗಳನ್ನು ನಿರ್ಮಿಸಿಕೊಳ್ಳದಿದ್ದರೂ ಅನು ದಾನವನ್ನು ಪಾವತಿಸಲಾಗಿದೆ.ಇದರಿಂದಾಗಿ ಅರ್ಹ ಫಲಾನುಭವಿಗಳಿಗೆ ಮನೆಯಿಲ್ಲದಂತಾಗಿ ಗುಡಿಸಲುಗಳಲ್ಲಿ ವಾಸಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದರು. ಹೋರಾಟದ ಎಚ್ಚರಿಕೆ: ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಛೆ ಅನುದಾನವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಂಡ ರಾಜೂರ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಕಡಬಲಕಟ್ಟಿ ಅವರನ್ನು ಕೂಡಲೇ ಅಮಾನತುಗೊಳಿಸಿ, ಪೂರ್ಣ ಪ್ರಮಾಣದ ತನಿಖೆಗೆ ಪ್ರಕರಣವನ್ನು ಲೋಕಾಯುಕ್ತರಿಗೆ ವಹಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎಂ.ನಾರಾಯಣ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.ಪ್ರಶಾಂತ ಕಲಾಲ, ಕುಮಾರ ಜುಂಜಾ, ಅನಿಲ ಅರಳಿಗಿಡದ, ಭೀಮಪ್ಪ ತಳವಾರ, ಪ್ರಕಾಶ ಅಂಗಡಿ, ಅಲ್ಲಾಭಕ್ಷ ಮುಚವಾಲಿ, ಮೂಕಪ್ಪ ದಂಡಿನ, ಹನುಮಂತ ಹಿರೇಮನಿ, ಶರಣಪ್ಪ ಹಲಗಿ, ರಸೂಲ ಭಾಗವಾನ, ಮುತ್ತು ಹಿರೇಹಾಳ, ದುರ್ಗಪ್ಪ ನಿಡಗುಂದಿ, ಯಮನಪ್ಪ ಮುದ್ದಿನಮನೆ, ಮರಿಯಪ್ಪ ಪೂಜಾರ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry