ಗುರುವಾರ , ಏಪ್ರಿಲ್ 22, 2021
30 °C

ಪಿಡಿಒ ಮನೆ ಮೇಲೆ ಲೋಕಾಯುಕ್ತ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಟಿ.ಎಂ. ಹೊಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್.ಬಿ. ಶ್ರೀಕಂಠ ಅವರ ಬಾಬುರಾಯನಕೊಪ್ಪಲಿನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದರು.ಮೈಸೂರು ಲೋಕಾಯುಕ್ತ ಡಿವೈಎಸ್ಪಿ ರಶ್ಮಿ ನೇತೃತ್ವದ ತಂಡ ಬೆಳಿಗ್ಗೆ 6.30ಕ್ಕೆ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದ ಶ್ರೀಕಂಠ ಅವರ ನಿವಾಸದ ಮೇಲೆ ದಾಳಿ ನಡೆಸಿತು. ದಾಳಿಯ ವೇಳೆ ಶ್ರೀಕಂಠ ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿದ್ದ ಆಸ್ತಿಗಳ ದಾಖಲೆ ಪತ್ರ ವಶಪಡಿಸಿಕೊಂಡರು. ಶ್ರೀಕಂಠ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.

 

ದಾಳಿ ವೇಳೆ ತಾಲ್ಲೂಕಿನ ಕಿರಂಗೂರು, ಮೈಸೂರಿನ ಬೋಗಾದಿ, ಮಂಡ್ಯ ತಾಲ್ಲೂಕಿನ ಯಲಿಯೂರು ಗ್ರಾಮಗಳಲ್ಲಿ ಶ್ರೀಕಂಠ ಅವರ ಪತ್ನಿ ಭಾರತಿ ಹಾಗೂ ಸಂಬಂಧಿ ಅಂಬಿಕಾ ಅವರ ಹೆಸರಿನಲ್ಲಿರುವ ನಿವೇಶನ ಹಾಗೂ ಕೃಷಿ ಭೂಮಿಯ ದಾಖಲೆ ಪತ್ರಗಳು ಸಿಕ್ಕಿವೆ.ಬಾಬುರಾಯನಕೊಪ್ಪಲು ಗ್ರಾಮದ ಆರ್‌ಸಿಸಿ ಮನೆ ಸೇರಿ ರೂ.25 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಶ್ರೀಕಂಠ ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿದೆ. ಅಷ್ಟೇನೂ ಪಿತ್ರಾರ್ಜಿತ ಆಸ್ತಿ ಹೊಂದಿರದ ಶ್ರೀಕಂಠ ಕೆಲಸಕ್ಕೆ ಸೇರಿದ ನಂತರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ.ವಿಚಾರಣೆ ವೇಳೆ ಮನೆಯಲ್ಲಿ ಅಥವಾ ಬ್ಯಾಂಕ್ ಖಾತೆಯಲ್ಲಿ ನಗದು ಇಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದಾಯ ಮೀರಿ ಸ್ಥಿರ ಹಾಗೂ ಚರ ಆಸ್ತಿ ಹೊಂದಿರುವುದರಿಂದ ಶ್ರೀಕಂಠ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ರಶ್ಮಿ ತಿಳಿಸಿದ್ದಾರೆ.ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ಧರ್ಮೇಂದ್ರ, ಗೋಪಾಲಕೃಷ್ಣ ಇತರರು ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.