ಪಿಡಿಒ ಹುದ್ದೆ ಶೀಘ್ರ ಭರ್ತಿ

7

ಪಿಡಿಒ ಹುದ್ದೆ ಶೀಘ್ರ ಭರ್ತಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ 1353 ಪಿಡಿಒ (ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ) ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ಶೀಘ್ರ ಭರ್ತಿ ಮಾಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಶುಕ್ರವಾರ ವಿಧಾನ ಪರಿಷತ್ತಿಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಡಾ.ದೊಡ್ಡರಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಗ್ರಾಮ ಪಂಚಾಯ್ತಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಒಟ್ಟು 3750 ಹುದ್ದೆಗಳಿದ್ದು, 2009-10ನೇ ಸಾಲಿನಲ್ಲಿ 2500 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಾಕಿ ಉಳಿದ 1250 ಹುದ್ದೆಗಳ ಜತೆಗೆ 2010ರ ನವೆಂಬರ್ ಅಂತ್ಯದವರೆಗೆ ತೆರವಾದ 103 ಹುದ್ದೆಗಳನ್ನು ಸೇರಿಸಿ ಒಟ್ಟು 1353 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗವನ್ನು ಕೋರಲಾಗಿತ್ತು. ಕಳೆದ ಡಿಸೆಂಬರ್ 18ರಂದು ಲಿಖಿತ ಪರೀಕ್ಷೆ ನಡೆದಿದೆ. ಆಯೋಗ ಮುಂದಿನ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಆದಷ್ಟು ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು~ ಎಂದರು.ಶೇ 67ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಶೇ 33ರಷ್ಟು ಹುದ್ದೆಗಳನ್ನು ಇರುವ ಸಿಬ್ಬಂದಿಗೆ ಬಡ್ತಿ ನೀಡುವ ಮೂಲಕ ತುಂಬಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

`ನಮ್ಮ ಸರ್ಕಾರ ಬಂದ ನಂತರ ಗ್ರಾಮ ಪಂಚಾಯ್ತಿಗಳಿಗೆ ಶಾಸನಬದ್ಧ ಅನುದಾನವನ್ನು 6ರಿಂದ 8 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. 13ನೇ ಹಣಕಾಸು ಯೋಜನೆಯಡಿ ಜನಸಂಖ್ಯೆ ಆಧಾರದ ಮೇರೆಗೆ 75 ಸಾವಿರ ರೂಪಾಯಿಗಳಿಂದ 15 ಲಕ್ಷ ರೂಪಾಯಿವರೆಗೆ ಅನುದಾನ ಸಿಗುತ್ತಿದೆ.

 

ಇದಲ್ಲದೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 50ರಿಂದ 70 ಲಕ್ಷ ರೂಪಾಯಿವರೆಗೆ ಪಂಚಾಯ್ತಿಗಳಿಗೆ ಅನುದಾನ ಲಭ್ಯವಾಗುತ್ತಿದೆ. 13ನೇ ಹಣಕಾಸು ಯೋಜನೆಯಡಿ ಲಭ್ಯವಾಗುವ ಅನುದಾನವನ್ನು ಪಂಚಾಯ್ತಿಗಳು ಕುಡಿಯುವ ನೀರು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ~ ಎಂದು ಬಿಜೆಪಿಯ ಶಿವರಾಜ ಸಜ್ಜನರ್ ಕೇಳಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.ಸುತ್ತೋಲೆ: ಬೆಂಗಳೂರು ನಗರ ಜಿಲ್ಲೆಯ 86 ಗ್ರಾಮ ಪಂಚಾಯ್ತಿಗಳ ಕಾರ್ಯದರ್ಶಿಗಳು ಹಾಗೂ ಪಿಡಿಒಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಾಗಿರುವಂತೆ ಸೂಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಶೆಟ್ಟರ್ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry