ಪಿ.ಡಿ.ದಿನಕರನ್ ರಾಜೀನಾಮೆ ವಿವಾದ: ಕೇಂದ್ರದ ಗುಟ್ಟು ಬಹಿರಂಗ

7

ಪಿ.ಡಿ.ದಿನಕರನ್ ರಾಜೀನಾಮೆ ವಿವಾದ: ಕೇಂದ್ರದ ಗುಟ್ಟು ಬಹಿರಂಗ

Published:
Updated:

ನವದೆಹಲಿ, (ಪಿಟಿಐ): ಸಿಕ್ಕಿಂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರ ರಾಜೀನಾಮೆ ವಿವಾದವನ್ನು ಕೇಂದ್ರ ಕಾನೂನು ಸಚಿವಾಲಯ ಗೋಪ್ಯವಾಗಿಟ್ಟರೂ ರಾಷ್ಟ್ರಪತಿ ಭವನ ಅದನ್ನು ಬಹಿರಂಗಪಡಿಸಿದೆ.ಭ್ರಷ್ಟಾಚಾರ ಮತ್ತು ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ದಿನಕರನ್ ಅವರು ಸಲ್ಲಿಸಿರುವ ರಾಜೀನಾಮೆ ಪತ್ರದ ಪ್ರತಿಗಳನ್ನು ಒದಗಿಸುವಂತೆ ಕೋರಿ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆ ಅಡಿ ರಾಷ್ಟ್ರಪತಿ ಭವನ ಮತ್ತು ಕಾನೂನು ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಗೋಪ್ಯ ಮಾಹಿತಿ ನೀಡಬಹುದೇ ಎಂದು ಕಾನೂನು ಸಚಿವಾಲಯ ದಿನಕರನ್ ಅಭಿಪ್ರಾಯ ಕೇಳಿತ್ತು. ಅದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸಚಿವಾಲಯ ಮಾಹಿತಿ ನೀಡಲು ನಿರಾಕರಿಸಿತ್ತು.ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಇಲ್ಲದ ಕಾರಣ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕಾನೂನು ಸಚಿವಾಲಯದ ಉಪ ಕಾರ್ಯದರ್ಶಿ ಎಸ್.ಕೆ.ಶ್ರೀವಾತ್ಸವ್ ಸ್ಪಷ್ಟಪಡಿಸಿದ್ದರು.ರಾಷ್ಟ್ರಪತಿಗೆ ಜುಲೈ 29ರಂದು ನ್ಯಾ. ದಿನಕರನ್ ಅವರು ಸಲ್ಲಿಸಿದ್ದ ಐದು ಪುಟಗಳ ರಾಜೀನಾಮೆ ಪತ್ರದ ಸಾರಾಂಶ ಹೀಗಿದೆ.  `ಸಾಂವಿಧಾನಿಕವಾಗಿ ಗೌರವಹಾಗೂ ಜವಾಬ್ದಾರಿಯುತವಾದ ಹುದ್ದೆಯಲಿದ್ದರೂ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅವಕಾಶ ದೊರೆಯಲಿಲ್ಲ. ಭಾರವಾದ ಹೃದಯದಿಂದ ಇದನ್ನು ಹೇಳಬೇಕಾಗಿದೆ~ ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ. `ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಅವಕಾಶ ವಂಚಿತ ಸಮುದಾಯದಲ್ಲಿ ಹುಟ್ಟಿರುವುದೇ ತಪ್ಪಾಗಿದೆ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ.ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ಸಮಿತಿ ಕೂಡಾ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲ. ನನ್ನ ಮೇಲಿನ ಆರೋಪಗಳ ವಿರುದ್ಧ ಎರಡು ತಾಸುಗಳ ವಾದವನ್ನು ಆಲಿಸಿ ಯಾವುದೇ ಕಾರಣ ನೀಡದೆ ಕೇವಲ ಎರಡೇ ಎರಡು ಸಾಲುಗಳಲ್ಲಿ ತಳ್ಳಿಹಾಕಲಾಗಿದೆ~ ಎಂದು ದಿನಕರನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಾಷ್ಟ್ರಪತಿಗೆ ಆಗಸ್ಟ್ 4ರಂದು ಮತ್ತೆ ಅವರು ಬರೆದ ಎರಡನೇ ಪತ್ರದಲ್ಲಿ ತಮ್ಮ ರಾಜೀನಾಮೆ ವಾಪಸ್ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜುಲೈ 30ರಿಂದ ಆಗಸ್ಟ್ 4ರವರೆಗಿನ ಅವಧಿಯನ್ನು `ರಜೆ~ ಎಂದು ಪರಿಗಣಿಸುವಂತೆ ಕೋರಿದ್ದಾರೆ. `ನ್ಯಾಯ ದೊರೆಯುವ ಭರವಸೆ ಇದ್ದು ರಾಜೀನಾಮೆಯನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ~ ಎಂದು ಅವರು ಕಾರಣ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry