ಮಂಗಳವಾರ, ನವೆಂಬರ್ 19, 2019
23 °C

ಪಿ.ಬಿ.ಶ್ರೀನಿವಾಸ್ ವಿಧಿವಶ

Published:
Updated:

ಚೆನ್ನೈ: ಕನ್ನಡ ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ (83) ಅವರು ಇಲ್ಲಿನ ಸಿಐಟಿ ನಗರದ ತಮ್ಮ ನಿವಾಸದಲ್ಲಿ ಭಾನುವಾರ ನಿಧನರಾದರು.ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ 1930ರ ಸೆಪ್ಟೆಂಬರ್ 22 ರಂದು ಜನಿಸಿದ ಪ್ರತಿವಾದಿ ಭಯಂಕರ ಶ್ರೀನಿವಾಸ್ ಚಿತ್ರರಂಗದಲ್ಲಿ ಪಿ.ಬಿ.ಶ್ರೀನಿವಾಸ್ ಎಂದೇ ಚಿರಪರಿಚಿತರು.ಶಾಲಾ ದಿನಗಳಲ್ಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀನಿವಾಸ್ ಅವರು ಬಿಕಾಂ ಪದವಿ ಮುಗಿಸಿ ಕಾನೂನು ಪದವಿ ವ್ಯಾಸಂಗ ಮಾಡುವ ವೇಳೆಗೆ ಜೆಮಿನಿ ಸ್ಟುಡಿಯೊದಲ್ಲಿ ಸಂಗೀತ ಕಲಿಕೆ ಪ್ರಾರಂಭಿಸಿ ಮುಂದೆ ಅದರಲ್ಲಿಯೇ ಭವಿಷ್ಯ ಕಂಡುಕೊಂಡರು.ಹೆಸರಾಂತ ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರೂ ಆಗಿದ್ದ ನಾಗೇಂದ್ರ ರಾಯರು ಪಿ.ಬಿ.ಶ್ರೀನಿವಾಸ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. 1953ರಲ್ಲಿ ತೆರೆಕಂಡ ಜಾತಕ ಫಲ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದ ಶ್ರೀನಿವಾಸ್ ಅವರು ಮತ್ತೆ ಹಿಂತಿರುಗಿ ನೋಡಲಿಲ್ಲ.ಕನ್ನಡದ ವರನಟ ದಿವಂಗತ ಡಾ.ರಾಜ್‌ಕುಮಾರ್ ಅವರಿಗೆ ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿದ್ದ ಹೊಂದುತ್ತಿದ್ದ ಹಿನ್ನೆಲೆಯಲ್ಲಿ ಪಿ.ಬಿ.ಶ್ರೀ ಅವರು ರಾಜಕುಮಾರ್ ಅವರ ಸುಮಾರು 200ಕ್ಕೂ ಅಧಿಕ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ.ಕನ್ನಡದ ಸುಮಾರು 3000ಕ್ಕೂ ಅಧಿಕ ಚಿತ್ರಗೀತೆಗಳಿಗೆ ಧ್ವನಿಯಾಗಿರುವ ಶ್ರೀನಿವಾಸ್ ಅವರಿಗೆ ಭಕ್ತ ಕನಕದಾಸ ಚಿತ್ರದ `ಬದುಕಿದೇನು ಬದುಕಿದೇನು ಭವ ಎನಗೆ ಇಂಗಿತು' ಎನ್ನುವ ಗೀತೆ ಅಚ್ಚುಮೆಚ್ಚಿನ ಗೀತೆಯಾಗಿತ್ತು. ಹಿನ್ನೆಲೆ ಗಾಯಕರು ಮಾತ್ರವಲ್ಲದೆ ಗೀತರಚನೆಕಾರರಾಗಿ ಸುಮಾರು ಒಂದೂವರೆ ಲಕ್ಷದಷ್ಟು ಹಾಡುಗಳನ್ನು ಎಂಟು ಭಾಷೆಗಳಲ್ಲಿ ರಚಿಸಿದ ಪಿ.ಬಿ.ಶ್ರೀ ಅವರು ಜತೆಗೆ ಹಲವಾರು ಕನ್ನಡ ಗಝಲ್‌ಗಳು ಸೇರಿದಂತೆ ಪುಸ್ತಕಗಳನ್ನು ಕೂಡ ಬರೆದು, `ನವನೀತ ಸುಮಸುಧಾ' ಎಂಬ ರಾಗ ನಿರ್ಮಿಸಿದ್ದಾರೆ.ಪಿ.ಬಿ.ಶ್ರೀ ಅವರ ವಿದ್ವತ್‌ನ್ನು ಗುರ್ತಿಸಿದ ಆರಿಝೋನ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೆಟ್ ನೀಡಿ ಗೌರವಿಸಿತ್ತು. ಜತೆಗೆ 1998ರಲ್ಲಿ ಕರ್ನಾಟಕ ಸರ್ಕಾರ ಕೂಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು.ಸೋಮವಾರ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪಿ.ಬಿ.ಶ್ರೀ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)