ಮಂಗಳವಾರ, ಮಾರ್ಚ್ 9, 2021
31 °C
ದ್ವಿತೀಯ ಸ್ಥಾನಕ್ಕೆ ಕುಸಿದ ಉಡುಪಿ–ಒಟ್ಟಾರೆ ಫಲಿತಾಂಶದಲ್ಲೂ ಕುಸಿತ

ಪಿಯುಸಿ: ದಕ್ಷಿಣ ಕನ್ನಡ ಮತ್ತೆ ಅಗ್ರಸ್ಥಾನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಯುಸಿ: ದಕ್ಷಿಣ ಕನ್ನಡ ಮತ್ತೆ ಅಗ್ರಸ್ಥಾನಕ್ಕೆ

ಮಂಗಳೂರು: ಪದವಿ ಪೂರ್ವ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಅಗ್ರಸ್ಥಾನಕ್ಕೆ ನೆಗೆದಿದೆ. ಆದರೆ, ಕಳೆದ ವರ್ಷದ ಫಲಿ­ತಾಂಶಕ್ಕೆ ಹೋಲಿಸಿದಲ್ಲಿ ಈ ಬಾರಿ ಸ್ವಲ್ಪ ಮಟ್ಟಿನ ಕುಸಿತ ಕಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿ ಶೇ 86.04 ಫಲಿತಾಂಶ ಪಡೆದಿದೆ. ಕಳೆದ ವರ್ಷ ಶೇ 91.76 ಫಲಿತಾಂಶ ದಾಖಲಿಸಿತ್ತು.ಕಳೆದ ವರ್ಷ ಉಡುಪಿ ಜಿಲ್ಲೆ ಶೇಕಡಾ­ವಾರು ಫಲಿತಾಂಶದಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದರೆ, ದ.ಕ ಜಿಲ್ಲೆ ದ್ವಿತೀಯ ಸ್ಥಾನ ಪಡೆದಿತ್ತು. 

ತರಬೇತಿ ನೀಡಿದ ಫಲ: ವಿಜ್ಞಾನ ವಿಭಾಗ­ದಲ್ಲಿ ಕೇಂದ್ರೀಯ ಪಠ್ಯಕ್ರಮವನ್ನು ಅಳವಡಿ­ಸಿದ ಬಳಿಕ ವಿದ್ಯಾರ್ಥಿಗಳು ಎದುರಿಸಿದ ಮೊದಲ ಪಬ್ಲಿಕ್‌ ಪರೀಕ್ಷೆ ಇದಾಗಿತ್ತು. ಆದರೂ ರಾಜ್ಯಮಟ್ಟದಲ್ಲಿ ನಮ್ಮ ಜಿಲ್ಲೆ ಉತ್ತಮ ಸಾಧನೆ ಕಾಯ್ದುಕೊಂಡಿರುವುದು ಹೆಮ್ಮೆಯ ವಿಷಯ ಎಂದು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ, ಪಾಠ ಪ್ರವಚನ­ವನ್ನು ಸುಧಾರಿಸುವ ಸಲುವಾಗಿ ಉಪಗ್ರಹ ಆಧಾರಿತ ಕಾರ್ಯಕ್ರಮವನ್ನು ಉಳಿದ ಜಿಲ್ಲೆಗಳಿಗಿಂತ ವ್ಯವಸ್ಥಿತವಾಗಿ ಹಮ್ಮಿ­ಕೊಂಡಿದ್ದೆವು. ಎಲ್ಲಾ ಉಪನ್ಯಾಸಕರೂ ತಪ್ಪದೇ ಈ ತರಬೇತಿಗೆ ಹಾಜರಾಗಿದ್ದರು.ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘಟನೆಗಳ ವತಿಯಿಂದಲೂ ವಿಷಯ­ವಾರು ತರಬೇತಿ ಹಮ್ಮಿಕೊಳ್ಳಲಾಗಿತ್ತು. ಪಠ್ಯಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಸೂಚಿಸಿದ್ದೆವು. ಉಪನ್ಯಾಸಕರು ಹಾಗೂ ಇಲಾಖೆಯ ಸಂಘಟಿತ ಪ್ರಯತ್ನದಿಂದಾಗಿ ನಮ್ಮ ಜಿಲ್ಲೆ ರಾಜ್ಯದಲ್ಲಿ ಮತ್ತೆ ಅಗ್ರಸ್ಥಾನ ಪಡೆಯಲು ಸಾಧ್ಯವಾಗಿದೆ’ ಎಂದು ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ತಿಮ್ಮಯ್ಯ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ಇಲ್ಲಿನ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ಪಡೆದಿವೆ. ಖಾಸಗಿ ಶಾಲೆಗಳು ಸಂಪನ್ಮೂಲ ಹಂಚಿಕೊಂಡು, ಇತರ ಶಾಲೆಯ ಉಪನ್ಯಾಸಕರಿಗೂ ತರಬೇತಿ ಹಮ್ಮಿಕೊಳ್ಳು­ವುದು ಇಲ್ಲಿನ ವಿಶೇಷ’ ಎಂದು ತಿಳಿಸಿದರು.

‘ಎಲ್ಲ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ’

‘ಓದಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ...’  ಪಿಯುಸಿ ವಿಜ್ಞಾನ ವಿಭಾಗದಲ್ಲಿ 591 ಅಂಕ ಪಡೆದ ಸೇಂಟ್‌ ಅಲೋಶಿಯಸ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಯ ಕೇಶವ ಭಟ್‌ ಎ. ಅವರ ಕಿವಿಮಾತು ಇದು. ಅವರು ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ವಿಷಯಗಳಲ್ಲಿ ತಲಾ 100, ಭೌತಶಾಸ್ತ್ರದಲ್ಲಿ 99  ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 96 ಅಂಕ ಪಡೆದಿದ್ದಾರೆ.

‘ನಾನು ವರ್ಷ ಪೂರ್ತಿ ಕಣ್ಣಿಗೆ ಎಣ್ಣೆಹಾಕಿಕೊಂಡು ಓದುತ್ತಿರಲಿಲ್ಲ. ಆದರೆ, ತರಗತಿಯಲ್ಲಿ ಏಕಾಗ್ರತೆಯಿಂದ ಪಾಠ ಕೇಳುತ್ತಿದ್ದೆ. ಕಾಲೇಜಿನಲ್ಲಿ  ನಡೆಯುವ ಇತರ ಚಟುವಟಿಕೆಗಳಲ್ಲೂ ಭಾಗವಹಿ­ಸುತ್ತಿದ್ದೆ. ಎಲ್ಲಾ ಕಾಲೇಜುಗಳೂ ವಿದ್ಯಾರ್ಥಿಗಳ ಸಮಗ್ರ ವಿಕಸನಕ್ಕೆ ನೆರವಾಗುವ ಚಟುವಟಿಕೆಗಳತ್ತ ಆದ್ಯತೆ ನೀಡಬೇಕು’ ಎಂದು ಅಭಯ ಕೇಶವ ಭಟ್‌ ಹೇಳಿದರು.‘ಉತ್ತಮ ಅಂಕಗಳು ಬರುವುದೆಂದು ಭಾವಿಸಿದ್ದೆ. ಆದರೆ, ರ್‍ಯಾಂಕ್‌ ಬರುವ ನಿರೀಕ್ಷೆ ಇರಲಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಕಲಿಕೆ ಮುಂದುವರಿಸುವ ಆಸೆ ಇದೆ. ನರರೋಗ ತಜ್ಞನಾಗುವ ಹಂಬಲ ನನ್ನದು’ ಎನ್ನುತ್ತಾರೆ ಅವರು. ಅಭಯ್‌ ಅವರ ತಂದೆ ಜಯಕೃಷ್ಣ ಭಟ್‌ ಬೆಂಗಳೂರಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌. ತಾಯಿ ರಶ್ಮಿ ಭಟ್‌ ‘ಆಡಿಯಾಲಜಿ’ ಉಪನ್ಯಾಸಕಿ.  ಮಂಗಳೂರು ಮೂಲದ ಅವರ ಕುಟುಂಬ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದೆ.‘ನಾನು ಅತ್ತೆ ಮನೆಯಲ್ಲಿದ್ದುಕೊಂಡು (ಅಪರ್ಣಾ, ಕೆಪಿಟಿಯಲ್ಲಿ ಉಪನ್ಯಾಸಕಿ) ಕಾಲೇಜಿಗೆ ಹೋಗುತ್ತಿದ್ದೆ. ಅವರ ಕುಟುಂಬದವರೂ ನನಗೆ ಸಹಕರಿಸಿದ್ದಾರೆ. ನನ್ನ ಯಶಸ್ಸಿನಲ್ಲಿ ಉಪನ್ಯಾಸಕರ ಶ್ರಮವೂ ಇದೆ’ ಎಂದರು. ಅಭಯಗೆ 8 ವರ್ಷ ಕರ್ಣಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಚಿತ್ರಕಲೆಯಲ್ಲೂ ಅಭಿರುಚಿ ಹೊಂದಿದ್ದಾರೆ. ಬಾಸ್ಕೊ ಸಂಸ್ಥೆಯಿಂದ ಹೆಚ್ಚಿನ ತರಬೇತಿ ಪಡೆದಿದ್ದರು.ವಾಣಿಜ್ಯ ವಿಭಾಗ: ಅದಿತಿಗೆ 589

ಸೇಂಟ್‌ ಅಲೋಶಿಯಸ್‌ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅದಿತಿ ಶಾನುಭಾಗ್‌ ಅವರು 589 ಅಂಕ ಪಡೆದಿದ್ದಾರೆ. ಅವರು ಹಿಂದಿ­ಯಲ್ಲಿ 94, ಇಂಗ್ಲಿಷ್‌ನಲ್ಲಿ 97, ಮೂಲಗಣಿತ­ದಲ್ಲಿ 100, ಲೆಕ್ಕಶಾಸ್ತ್ರದಲ್ಲಿ 100, ಆಡಳಿತ ಲೆಕ್ಕಶಾಸ್ತ್ರದಲ್ಲಿ 97 ಅಂಕ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.