ಶನಿವಾರ, ಜೂನ್ 19, 2021
27 °C
ಗ್ರಾಮ ಲೆಕ್ಕಿಗರ ಹುದ್ದೆ ಆಕಾಂಕ್ಷಿ

ಪಿಯುಸಿ ನಕಲಿ ಅಂಕಪಟ್ಟಿ ಸಲ್ಲಿಕೆ ಬಯಲು

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯ ಗ್ರಾಮ ಲೆಕ್ಕಿಗರ ಹುದ್ದೆಗೆ ಇತ್ತೀಚೆಗೆ ನಡೆದ ನೇಮಕಾತಿ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು  ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.ನಕಲಿ ಅಂಕಪಟ್ಟಿ ಸಲ್ಲಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಶಿವರಾಜ್‌ ಪಾಟೀಲ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಚನಾಯಕನಹಳ್ಳಿ ಗ್ರಾಮದ ಎನ್‌. ನಾಗೇಶ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಡಗು ಜಿಲ್ಲಾಡಳಿತವು ಮಡಿಕೇರಿ ಪೊಲೀಸರಿಗೆ ದೂರು ಸಲ್ಲಿಸಿದೆ. ದೂರು ಸಲ್ಲಿಸಿರುವ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.ಜಿಲ್ಲೆಯಲ್ಲಿ ಖಾಲಿಯಾಗಿದ್ದ 12 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಕೊಡಗು ಜಿಲ್ಲಾಡಳಿತವು ಕಳೆದ ವರ್ಷ ಜುಲೈ 9ರಂದು ಆನ್‌ಲೈನ್‌ ಮೂಲಕ ದ್ವಿತೀಯ ಪಿ.ಯು.ಸಿ/ತತ್ಸಮಾನ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಆಗ ಈ ಅಭ್ಯರ್ಥಿಗಳು ಕೂಡ ಅಂಕಪಟ್ಟಿ ಜೊತೆ ಇತರ ದಾಖಲಾತಿಗಳನ್ನು ಸಲ್ಲಿಸಿದ್ದರು.ಕೊಡಗು ಜಿಲ್ಲಾಧಿಕಾರಿಗಳು ಎಲ್ಲ ಅಭ್ಯರ್ಥಿಗಳ ಅಂಕಪಟ್ಟಿಗಳ ಸತ್ಯಾಸತ್ಯತೆಯನ್ನು ತಿಳಿಯಲು ಪದವಿಪೂರ್ವ ಶಿಕ್ಷಣ ಇಲಾಖೆಗೆ ಅಂಕಪಟ್ಟಿಗಳನ್ನು ಕಳುಹಿಸಿಕೊಟ್ಟರು. ಇವುಗಳನ್ನು ಪರಿಶೀಲಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿವರಾಜ್‌ ಪಾಟೀಲ ಹಾಗೂ ಎನ್‌.ನಾಗೇಶ್‌ ಅವರ ಅಂಕಪಟ್ಟಿಗಳು ನಕಲಿಯಾಗಿವೆ ಎಂದು ದೃಢೀಕರಿಸಿದ್ದಾರೆ.ಶಿವರಾಜ್‌ ಪಾಟೀಲ ಅವರು ಸಲ್ಲಿಸಿದ್ದ ಅಂಕಪಟ್ಟಿಯಲ್ಲಿ ಕನ್ನಡ– 96, ಇಂಗ್ಲಿಷ್‌– 94, ಇತಿಹಾಸ– 95, ಅರ್ಥಶಾಸ್ತ್ರ– 95, ಬಿಸಿನೆಸ್‌ ಸ್ಟಡೀಸ್‌– 96, ಅಕೌಂಟೆನ್ಸಿ– 93 ಸೇರಿದಂತೆ ಒಟ್ಟು 569 ಅಂಕಗಳನ್ನು ತೋರಿಸಲಾಗಿತ್ತು. ವಾಸ್ತವದಲ್ಲಿ ಅವರಿಗೆ ಕನ್ನಡ– 44, ಇಂಗ್ಲಿಷ್‌– 35, ಇತಿಹಾಸ– 30, ಅರ್ಥಶಾಸ್ತ್ರ– 39, ಬಿಸಿನೆಸ್‌ ಸ್ಟಡೀಸ್‌– 48, ಅಕೌಂಟೆನ್ಸಿ– 35 ಸೇರಿದಂತೆ ಒಟ್ಟು 231 ಅಂಕಗಳು ಮಾತ್ರ ಲಭಿಸಿದ್ದವು.ಎನ್‌. ನಾಗೇಶ್‌ ಅವರು ಬೆಂಗಳೂರಿನ ಹೊಸಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಂಕಪಟ್ಟಿಯನ್ನು ಸಲ್ಲಿಸಿದ್ದರು. ವಾಸ್ತವದಲ್ಲಿ ಈ ಅಂಕಪಟ್ಟಿಗೆ ಸಂಬಂಧಿಸಿದಂತೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಇವೆರಡೂ ಅಂಕಪಟ್ಟಿಗಳು ಇಲಾಖೆಯ ದಾಖಲಾತಿಗಳೊಂದಿಗೆ ತಾಳೆಯಾಗುವುದಿಲ್ಲ. ಈ ಅಂಕಪಟ್ಟಿಗಳನ್ನು ಇಲಾಖೆಯಿಂದ ನೀಡಿಲ್ಲ ಹಾಗೂ ಇವು ನೈಜತೆಯನ್ನು ಹೊಂದಿಲ್ಲ ಎಂದು ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕರು ಫೆಬ್ರುವರಿ 12ರಂದು ಸ್ಪಷ್ಟನೆ ನೀಡಿದ್ದಾರೆ.ಶಿಕ್ಷಣ ಇಲಾಖೆಯ ಪತ್ರದ ಆಧಾರದ ಮೇಲೆ ನಕಲಿ ಅಂಕಪಟ್ಟಿ ನೀಡಿರುವ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮಡಿಕೇರಿ ನಗರ ಪೊಲೀಸ್‌ ಠಾಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌. ಪ್ರಸನ್ನ ದೂರು ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.