ಗುರುವಾರ , ಜೂನ್ 24, 2021
29 °C

ಪಿಯುಸಿ ಪರೀಕ್ಷೆ: ಜಿಲ್ಲೆಯಲ್ಲಿ 5,448 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಪ್ರತಿಯೊಬ್ಬರ ಶೈಕ್ಷಣಿಕ ಜೀವನದಲ್ಲಿ ದ್ವಿತೀಯ ಪಿ.ಯು.ಸಿ ಅತ್ಯಂತ ಮಹತ್ತರ ಘಟ್ಟ. ಇದು ಮುಂದಿನ ದಾರಿಗೆ ದಿಕ್ಸೂಚಿಯಾಗುತ್ತದೆ. ಎಂಜಿನಿಯರಿಂಗ್, ವೈದ್ಯರು, ಚಾರ್ಟೆಡ್ ಅಕೌಂಟೆಂಟ್, ಮ್ಯಾನೇಜ್‌ಮೆಂಟ್ ಕೋರ್ಸ್, ಕಾನೂನು ಶಿಕ್ಷಣ ಹಾಗೂ ಇತರೆ ಕ್ಷೇತ್ರಗಳಿಗೆ ಇದು ಪ್ರವೇಶ ದ್ವಾರವಾಗುವುದು. ಇದಕ್ಕಾಗಿ ವಿದ್ಯಾರ್ಥಿಗಳಲ್ಲದೇ ಪೋಷಕರು ಕೂಡ ಪಿ.ಯು.ಸಿ ಬಗ್ಗೆ ಅಷ್ಟೊಂದು ಮಹತ್ವನೀಡುತ್ತಾರೆ.ಶೈಕ್ಷಣಿಕ ಜೀವನದ ಮಹತ್ವದ ದಿನವಾದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಗುರುವಾರದಿಂದ (ಮಾರ್ಚ್ 15) ಆರಂಭವಾಗಲಿವೆ. ರಾಜ್ಯದ ಶೈಕ್ಷಣಿಕ ಪಟ್ಟಿಯಲ್ಲಿ ಅತ್ಯುತ್ತಮ ಜಿಲ್ಲೆಗಳ ಪೈಕಿ ಒಂದಾಗಿರುವ ಕೊಡಗು ಜಿಲ್ಲೆಯ 5,448 ವಿದ್ಯಾರ್ಥಿಗಳು ಈ ಬಾರಿ ಪಿ.ಯು.ಸಿ ಪರೀಕ್ಷೆಯಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.ಇವರಲ್ಲಿ 4,513 ವಿದ್ಯಾರ್ಥಿಗಳು ಮೊದಲ ಬಾರಿಗೆ ಪಿ.ಯು.ಸಿ ಪರೀಕ್ಷೆ ಎದುರಿಸುತ್ತಿದ್ದರೆ, 645 ವಿದ್ಯಾರ್ಥಿಗಳು ಮರು ಪರೀಕ್ಷೆ ಹಾಗೂ 290 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಾದ್ಯಂತ 14 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಮಡಿಕೇರಿ 5, ಸೋಮವಾರಪೇಟೆ 5 ಹಾಗೂ ವಿರಾಜಪೇಟೆಯಲ್ಲಿ 4 ಕೇಂದ್ರಗಳಿವೆ. ಕೊಡಗಿನ ಜನಸಂಖ್ಯೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಇರುವಂತೆ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳಲ್ಲಿಯೂ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 2801 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರೆ, 2647 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.ಕಲಾ ವಿಭಾಗದಲ್ಲಿ 2,469 ವಾಣಿಜ್ಯ ವಿಭಾಗದಲ್ಲಿ 2,088 ಹಾಗೂ ವಿಜ್ಞಾನ ವಿಭಾಗದಲ್ಲಿ 891 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ ಕನ್ನಡ ಮಾಧ್ಯಮದ 3,201 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮದ 2,247 ವಿದ್ಯಾರ್ಥಿಗಳಿದ್ದಾರೆ.ನಕಲು ತಡೆಯಲು ಕ್ರಮ: ಕೊಡಗು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಬುದ್ಧಿವಂತರಿರುವ ಕಾರಣ ನಕಲು ಮಾಡುವ ಹಾವಳಿ ಇಲ್ಲಿ ಅಷ್ಟಾಗಿ ಕಂಡುಬರಲ್ಲ. ಅದಕ್ಕೆ ಕಾರಣಕ್ಕಾಗಿ ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಸತೀಶ ಕುಮಾರ್ ಹೇಳಿದರು.ಆದಾಗ್ಯೂ, ನಕಲು ಹಾವಳಿಯನ್ನು ತಡೆಯಲು ಜಾಗೃತ ದಳದ 15 ಜನ ಅಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಲಿರುವರು. ಇದಲ್ಲದೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾ.31ರವರೆಗೆ ನಡೆಯಲಿರುವ ಈ ಪರೀಕ್ಷೆಗಳ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ 144 ಕಲಂ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದರು.ನಿಷೇಧ: ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್, ಬ್ಯಾಗ್ ಹಾಗೂ ಇತರೆ ಪಠ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ನಿಷೇಧ ಹೇರಲಾಗಿದೆ. ವಿಜ್ಞಾನ ವಿಷಯದ ಪರೀಕ್ಷೆಗಳು ಇದ್ದಾಗ ಮಾತ್ರ ಸೈಂಟಿಫೀಕ್ ಕ್ಯಾಲಕ್ಯುಲೇಟರ್ ಒಯ್ಯಲು ಅವಕಾಶವಿದೆ ಎಂದರು.ಜಾತಿ ಕಾಲಂ ಅಳಿಸಲು ಸೂಚನೆ:  ಈ ಬಾರಿ ತೀವ್ರ ವಿವಾದ ಹುಟ್ಟುಹಾಕಿದ್ದ ಪ್ರವೇಶ ಪತ್ರದಲ್ಲಿ (ಹಾಲ್ ಟಿಕೆಟ್) ಜಾತಿ ಹೆಸರು ನಮೂದಿಸುವ ಕಾಲಂ ಅನ್ನು ಅಳಿಸಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ಈ ಆದೇಶ ಬಂದ ನಂತರ ಹಾಲ್‌ಟಿಕೆಟ್‌ನಲ್ಲಿದ್ದ ಜಾತಿ ಹೆಸರಿನ ಕಾಲಂನ್ನು ವೈಟನರ್ ಬಳಸಿ, ಅಳಿಸಿಹಾಕಲಾಗಿದೆ. ಯಾವ ಹಾಲ್‌ಟಿಕೆಟ್‌ನಲ್ಲಿ ಇನ್ನೂ ಹಾಗೆಯೇ ಇದೆಯೋ ಅದನ್ನು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ವೇಳೆಯಲ್ಲಿ ಅಳಿಸಿಹಾಕಲಾಗುವುದು ಎಂದು ಅವರು ವಿವರಣೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.