ಮಂಗಳವಾರ, ಜೂನ್ 22, 2021
29 °C

ಪಿಯುಸಿ ಪ್ರಶ್ನೆಪತ್ರಿಕೆ ಮಾರಾಟ ಜಾಲ: ಸೈಬರ್ ಕೆಫೆ, ಹೋಟೆಲ್ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪಿ.ಯು.ಸಿ. ದ್ವಿತೀಯ ವರ್ಷದ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರು  ಪೊಲೀಸರೊಂದಿಗೆ ನಗರದ ಒಂದು ಸೈಬರ್ ಕೆಫೆ ಹಾಗೂ ಹೋಟೆಲ್ ಕೊಠಡಿ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿದರು.ನಗರದ ಮಾವಿನ ಕೆರೆ ಸಮೀಪ `ಲಕ್ಕಿ ಸೈಬರ್ ಕೆಫೆ~ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಕೇಂದ್ರವನ್ನು ವಶಕ್ಕೆ ಪಡೆಯಲಾಯಿತು. ಈ ಕೇಂದ್ರದ ಇಬ್ಬರನ್ನು ವಶಕ್ಕೆ ತೆಗೆದುಕೊಂಡ ಡಿ.ಎಸ್ಪಿ. ಬಾಬಾ ಅವರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಮಂತ್ರಾಲಯ ರಸ್ತೆಯ ಅನುಷ್ಕಾ ಹೋಟೆಲ್‌ನ ಎರಡು ಕೊಠಡಿಗಳಲ್ಲಿ ಕಂಪ್ಯೂಟರ್‌ನಿಂದ ಪ್ರಶ್ನೆಪತ್ರಿಕೆ ವಿವರಣೆಯನ್ನು ತೆಗೆದುಕೊಂಡು ಕೈಯಿಂದ ಬರೆದು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಜಿಲ್ಲಾಧಿಕಾರಿಗಳು ಎರಡೂ ಕೊಠಡಿಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಬಂದೋಬಸ್ತ್‌ಗೆ ಆದೇಶಿಸಿದರು.ಜಿಲ್ಲಾಧಿಕಾರಿ ವಿವರಣೆ: ಪಿಯುಸಿ ದ್ವಿತೀಯ ವರ್ಷದ ಪ್ರಶ್ನೆಪತ್ರಿಕೆ ಮಾರಾಟ ಜಾಲ ನಗರದಲ್ಲೂ ಇದೆಯೆಂಬ ಮಾಹಿತಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಲಕ್ಕಿ ಸೈಬರ್ ಕೆಫೆಗೆ ಎರಡು ದಿನಗಳಿಂದ ನಾನೇ ಕೆಲವರನ್ನು ಕಳುಹಿಸಿದ್ದೆ. ಒಂದು ಪ್ರಶ್ನೆಪತ್ರಿಕೆಗೆ 10 ಸಾವಿರ ಕೊಟ್ಟರೆ ಭಾನುವಾರ ಬೆಳಿಗ್ಗೆ ಕೊಡುವುದಾಗಿ ಹೇಳಿದ್ದರು. ನಂತರ ಸಂಜೆ ಎಂದು ಹೇಳಿದ್ದರು. ಸಂಜೆ ವಿಚಾರಿಸಿದಾಗ ನಾಳೆ ಸಂಜೆ ಕೊಡುವುದಾಗಿ ಹೇಳಿದರು. ಅಲ್ಲದೇ ನಾನು ಕಳುಹಿಸಿದ ವ್ಯಕ್ತಿಯ ಮೊಬೈಲ್‌ನ್ನು ಕಿತ್ತುಕೊಂಡು ಕಳುಹಿಸಿದ್ದರು. ಅದೇ ರೀತಿ ಮಾಹಿತಿ ಅನುಷ್ಕಾ ಹೋಟೆಲ್ ಕೊಠಡಿಯಲ್ಲಿ ಪ್ರಶ್ನೆಪತ್ರಿಕೆ ಕೈಯಿಂದ ಬರೆದು ಕೊಡುವ ಬಗ್ಗೆ ಮಾಹಿತಿ ದೊರಕಿತು. ಹೀಗಾಗಿ  ದಾಳಿ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇನ್ನೂ ಪರೀಕ್ಷೆ ನಡೆಯದ ವಿಜ್ಞಾನ ವಿಷಯಗಳ ಪ್ರಶ್ನೆಪತ್ರಿಕೆ ಪಡೆಯಲು ಸೈಬರ್ ಕೆಫೆಗೆ ಜನ ಕಳುಹಿಸಿದ್ದೆ. ಪ್ರಶ್ನೆಪತ್ರಿಕೆ ಕೊಡುವುದನ್ನು ನಾಳೆ, ನಾಡಿದ್ದು ಎಂದು ಹೇಳಿದ್ದರಿಂದ ತಮಗೆ ದೊರಕಿದ ಮಾಹಿತಿ ಖಚಿತ ಎಂದು ಗೊತ್ತಾಗಿ ದಾಳಿ ನಡೆಸಿದ್ದಾಗಿ ಹೇಳಿದರು. ಪೊಲೀಸರು ಇಬ್ಬರ ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.