ಪಿಯುಸಿ ಫಲಿತಾಂಶ: ದಶಕದಲ್ಲೇ ಗರಿಷ್ಠ ದಾಖಲೆ

7

ಪಿಯುಸಿ ಫಲಿತಾಂಶ: ದಶಕದಲ್ಲೇ ಗರಿಷ್ಠ ದಾಖಲೆ

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾಖಲೆಯ ಫಲಿತಾಂಶ ಬಂದಿದೆ. ಈ ಬಾರಿ ಪರೀಕ್ಷೆ ಎದುರಿಸಿದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 57.03ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಫಲಿತಾಂಶದಲ್ಲಿ ಶೇ 8.1ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ಶೇ 48.93ರಷ್ಟು ಫಲಿತಾಂಶ ಬಂದಿತ್ತು.ವಿಜ್ಞಾನ ವಿಭಾಗದಲ್ಲಿ ನಗರದ ಮಲ್ಲೇಶಪುರಂನ ಎಂಇಎಸ್ ಕಿಶೋರ ಕೇಂದ್ರದ ಎಂ. ದೀಪಾ (593), ವಾಣಿಜ್ಯ ವಿಭಾಗದಲ್ಲಿ ನಗರದ ಜೈನ್ ಕಾಲೇಜಿನ ರವೀನಾ ಬಿ.ಜೈನ್ (591) ಮತ್ತು ಕಲಾ ವಿಭಾಗದಲ್ಲಿ ಕುಂದಗೋಳ ತಾಲ್ಲೂಕಿನ ಕುಬಿಹಾಳದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರು ಪದವಿ ಪೂರ್ವ ಕಾಲೇಜಿನ ಶಶಿಕಲಾ ಎಸ್.ಡಪಲಿ (569) ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದ 5,95,197 ವಿದ್ಯಾರ್ಥಿಗಳ ಪೈಕಿ 3,39,421 ಮಂದಿ ಪಾಸಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿನಿಯರು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

 

ಶೇ 85.70ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಶೇ 32.21ರಷ್ಟು ಫಲಿತಾಂಶ ಪಡೆದಿರುವ ಯಾದಗಿರಿ ಜಿಲ್ಲೆ ಈ ವರ್ಷವೂ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಮೊದಲ ಮತ್ತು ಎರಡನೇ ಸ್ಥಾನ ಈ ಬಾರಿ ಅದಲು -ಬದಲಾಗಿವೆ.ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈ ಸಲ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮೊದಲ ಸ್ಥಾನದಲ್ಲಿದ್ದ ಉಡುಪಿ ಎರಡನೇ ಸ್ಥಾನಕ್ಕೆ ಇಳಿದಿದೆ. ನಾಲ್ಕನೇ ಸ್ಥಾನದಲ್ಲಿದ್ದ ಕೊಡಗು ಮೂರನೇ ಸ್ಥಾನಕ್ಕೆ ಏರಿದೆ.ಕಳೆದ ಬಾರಿ 21 ಕಾಲೇಜುಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿತ್ತು.  ಈ ಬಾರಿ ಒಟ್ಟು 32 ಪದವಿ ಪೂರ್ವ ಕಾಲೇಜುಗಳು ಶೇ 100ರಷ್ಟು ಸಾಧನೆ ತೋರಿವೆ. ಈ ಪೈಕಿ ಎರಡು ಸರ್ಕಾರಿ, ನಾಲ್ಕು ಅನುದಾನಿತ ಹಾಗೂ 26 ಅನುದಾನ ರಹಿತ ಕಾಲೇಜುಗಳಾಗಿವೆ.ಹಿಂದಿನ ವರ್ಷ 40 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿತ್ತು. ಈ ಬಾರಿ 27 ಕಾಲೇಜುಗಳು ಶೂನ್ಯ ಫಲಿತಾಂಶದ ಪಟ್ಟಿಯಲ್ಲಿವೆ.  ಒಂದು ಸರ್ಕಾರಿ ಮತ್ತು 26 ಅನುದಾನ ರಹಿತ ಕಾಲೇಜುಗಳ ಸಾಧನೆ ಶೂನ್ಯ ಎಂದು ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ತಿಳಿಸಿದರು.ಫಲಿತಾಂಶ ಹೆಚ್ಚಲು ಕಾರಣಗಳು: ಎರಡು ವರ್ಷಗಳ ಹಿಂದೆ 2,700 ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಯಿತು. 8 ಮತ್ತು 9ನೇ ತರಗತಿಗೆ ಸೆಮಿಸ್ಟರ್ ಪದ್ಧತಿ ರದ್ದು ಮಾಡಲಾಯಿತು.ಸಮಯಕ್ಕೆ ಸರಿಯಾಗಿ ಪಠ್ಯಕ್ರಮವನ್ನು ಪೂರ್ಣಗೊಳಿಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಕಾಲಾವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಪರೀಕ್ಷಾ ವೇಳಾಪಟ್ಟಿ ಕೂಡ ಫಲಿತಾಂಶ ಹೆಚ್ಚಳಕ್ಕೆ ಪೂರಕವಾಯಿತು ಎಂದು ಕಾಗೇರಿ ಅಭಿಪ್ರಾಯಪಟ್ಟರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದೆ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತಿತ್ತು. ಆದರೆ ಈ ಪದ್ಧತಿಯನ್ನು ಬದಲಾಯಿಸಿ, ವಿವರಣಾತ್ಮಕ ಪದ್ಧತಿಯನ್ನು ಪುನಃ ಜಾರಿ ಮಾಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ವಿದ್ಯಾರ್ಥಿಗಳೇ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತಂದಿದ್ದರಿಂದ ಪಿಯುಸಿ ಫಲಿತಾಂಶದಲ್ಲಿ ಏರಿಕೆಯಾಗಿದೆ ಎಂದು ಅವರು ವಿಶ್ಲೇಷಿಸಿದರು.`ದಾಖಲೆ ಫಲಿತಾಂಶ ಬಂದಿದೆ ಎಂದು ಸುಮ್ಮನೆ ಕೂರುವಂತಿಲ್ಲ. ಮುಂದಿನ ವರ್ಷಗಳಲ್ಲಿ ಶೇ 70ರಷ್ಟು ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ.  ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಅಧ್ಯಾಪಕರು, ಶಿಕ್ಷಣ ಸಂಸ್ಥೆಗಳು ಕೆಲಸ ಮಾಡಬೇಕು~ ಎಂದು ಸಚಿವರು ಕೋರಿದರು. ಕೆಲ ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಮತ್ತು ಮೌಲ್ಯಮಾಪನ ಬಹಿಷ್ಕಾರ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದಿದ್ದಾರೆ.ಮೊದಲ ಬಾರಿಗೆ ಪರೀಕ್ಷೆ ಎದುರಿಸಿದವರಲ್ಲಿ ಶೇ 69.59ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಲ್ಲಿ ಶೇ 25.01ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಮೊದಲ ಬಾರಿಗೆ ಪರೀಕ್ಷೆ ಬರೆದ ಬಾಲಕರಲ್ಲಿ ಶೇ 54.58ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.ಮೊದಲ ಸಲ ಪರೀಕ್ಷೆ ಎದುರಿಸಿದ ಬಾಲಕಿಯರಲ್ಲಿ ಶೇ 74.30ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಬಾಹ್ಯ ಮತ್ತು ಖಾಸಗಿಯಾಗಿ ಪರೀಕ್ಷೆ ಬರೆದ ಬಾಲಕರಲ್ಲಿ ಶೇ 23.13ರಷ್ಟು ಮಂದಿ ಉತ್ತೀರ್ಣರಾಗಿದ್ದರೆ, ಬಾಲಕಿಯರಲ್ಲಿ ಶೇ 28.86ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ.ಅತಿ ಹೆಚ್ಚು ಅಂಕ: ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 593 (ಶೇ 98.83), ವಾಣಿಜ್ಯ ವಿಭಾಗದಲ್ಲಿ 591 (ಶೇ 98.57) ಮತ್ತು ಕಲಾ ವಿಭಾಗದಲ್ಲಿ 569 (ಶೇ 94.83) ಅಂಕಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪಡೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು  ಕಲಾ ವಿಭಾಗದಲ್ಲಿ 554(ಶೇ 92.33), ವಾಣಿಜ್ಯ ವಿಭಾಗದಲ್ಲಿ 582 (ಶೇ 97.00), ವಿಜ್ಞಾನ ವಿಭಾಗದಲ್ಲಿ 584(97.33). ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ 554 (ಶೇ 92.33), ವಾಣಿಜ್ಯ-579 (ಶೇ 96.50) ಹಾಗೂ ವಿಜ್ಞಾನ ವಿಭಾಗದಲ್ಲಿ 575 (ಶೇ 95.83) ಅಂಕಗಳನ್ನು ಪಡೆದಿದ್ದಾರೆ.ಒಟ್ಟು 19,269 ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ. 1,54,296 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 81,224 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 84,634 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಪರೀಕ್ಷೆ ಬರೆದಿದ್ದ 330 ಅಂಧ ವಿದ್ಯಾರ್ಥಿಗಳ ಪೈಕಿ 177 (ಶೇ 53.64) ಮಂದಿ ಹಾಗೂ 1,657 ಅಂಗವಿಕಲರ ಪೈಕಿ 690 (ಶೇ 41.64) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಸಬರಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 65.41ರಷ್ಟಿದ್ದರೆ, ಆಂಗ್ಲಮಾಧ್ಯಮ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 73.42ರಷ್ಟಿದೆ.ವಿಜ್ಞಾನ ವಿಭಾಗದಲ್ಲಿ ಶೇ 58.24, ವಾಣಿಜ್ಯ ವಿಭಾಗದಲ್ಲಿ ಶೇ 65.68 ಮತ್ತು ಕಲಾ ವಿಭಾಗದಲ್ಲಿ ಶೇ 50.68ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರಿಶಿಷ್ಟ ಜಾತಿ (ಶೇ 45.51), ಪರಿಶಿಷ್ಟ ಪಂಗಡ (ಶೇ 48.79), ಪ್ರವರ್ಗ-1 (ಶೇ 55.65) ಹಾಗೂ ಇತರೆ ವರ್ಗಗಳಲ್ಲಿ ಶೇ 60.86ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry