ಪಿಯು ಕಾಲೇಜಿಗೆ ಸೌಕರ್ಯಗಳ ಕೊರತೆ

7

ಪಿಯು ಕಾಲೇಜಿಗೆ ಸೌಕರ್ಯಗಳ ಕೊರತೆ

Published:
Updated:

ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಕಾಲೇಜಿನಲ್ಲಿ ಸೌಕರ್ಯಗಳ ಕೊರತೆಯಿಂದ ತೊಂದರೆ ಎದುರಿಸುತ್ತಿದ್ದಾರೆ. ಕುಡಿಯಲು ನೀರು ಸಿಗುವುದಿಲ್ಲ, ಶೌಚಾಲಯ ಸೌಲಭ್ಯ ಸಮರ್ಪಕವಾಗಿಲ್ಲ. ಪ್ರಾಂಶುಪಾಲರ ಹುದ್ದೆ ಸೇರಿದಂತೆ ವಿಷಯವಾರು ಉಪನ್ಯಾಸಕರ ಹುದ್ದೆಗಳ ಕೊರತೆಯಿದೆ. ಈ ಎಲ್ಲ ಕಾರಣದಿಂದ ವಿದ್ಯಾರ್ಥಿಗಳ ಶಿಕ್ಷಣ ಮೇಲೆ ಪರಿಣಾಮ ಬೀರುತ್ತಿದೆ.ಕಲಾ ವಿಭಾಗದಲ್ಲಿ ಪ್ರಥಮ ಪಿಯುಸಿ-254, ದ್ವಿತೀಯ ಪಿಯುಸಿ-187, ವಿಜ್ಞಾನ ವಿಭಾಗದಲ್ಲಿ ಪ್ರಥಮ ಪಿಯುಸಿ-14, ದ್ವಿತೀಯ ಪಿಯುಸಿ-17, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ-68 ಮತ್ತು ದ್ವಿತೀಯ ಪಿಯುಸಿ-48 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಕಾಲೇಜು ವಿಭಾಗಕ್ಕೆ 5 ಕೊಠಡಿಗಳು ಇವೆ. ಇದಲ್ಲದೆ 15 ಕೊಠಡಿಗಳ ಅವಶ್ಯಕತೆ ಇದೆ. ಇದೇ ಕಾಲೇಜಿನ ಕೊಠಡಿಗಳಲ್ಲಿ ಸರ್ಕಾರಿ ಪ್ರೌಢಶಾಲೆ ತರಗತಿಗಳೂ ಇವೆ. ಕಾಲೇಜಿನ ವಿಭಾಗಕ್ಕೆ ಬೆಳಗಿನ ಅವಧಿ 8 ರಿಂದ 11.30ರವರೆಗೆ, ನಂತರದ ಅವಧಿ ಪ್ರೌಢಶಾಲೆ ವಿಭಾಗದ ತರಗತಿಗಳಿಗೆ ಮೀಸಲು. ಕಾಲೇಜಿನ ವಿಭಾಗದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 23 ಹುದ್ದೆ ಮಂಜೂರಾಗಿದೆ.ಇದರಲ್ಲಿ ಪ್ರಾಂಶುಪಾಲ-1, ಕನ್ನಡ-1, ಇಂಗ್ಲಿಷ್-2, ಇತಿಹಾಸ-1, ಅರ್ಥಶಾಸ್ತ್ರ-2, ಸಮಾಜಶಾಸ್ತ್ರ-2, ರಾಜ್ಯಶಾಸ್ತ್ರ-2, ವಾಣಿಜ್ಯ ಅಧ್ಯಯನ/ಲೆಕ್ಕಶಾಸ್ತ್ರ-1, ಭೌತಶಾಸ್ತ್ರ-1, ಜೀವಶಾಸ್ತ್ರ-1, ದೈಹಿಕ ಶಿಕ್ಷಣ ನಿರ್ದೇಶಕರು-1, ದ್ವಿತೀಯ ದರ್ಜೆ ಸಹಾಯಕರು-1, ಡಿ ಗ್ರೂಪ್-1 ಸೇರಿದಂತೆ ಸುಮಾರು 16 ಖಾಲಿ ಹುದ್ದೆಗಳು ಖಾಲಿ ಇದೆ. `ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರ ಜೊತೆ ಅತಿಥಿ ಉಪನ್ಯಾಸಕರ ಕೊರತೆ ಇದೆ. 13 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರಾದರೂ ಅವರಿಗೆ ನಿಯಮಿತವಾಗಿ ವೇತನ ಸಿಗುತ್ತಿಲ್ಲ. ಅವರಿಗೆ ಗೌರವ ಧನ, ಮಾಸಿಕ ವೇತನ ನೀಡಲು ಆದೇಶಿಸಲಾಗಿದೆ. ಒಂದು ಗಂಟೆಗೆ 150 ರೂಪಾಯಿ ಗೌರವ ಧನದ ರೂಪದಲ್ಲಿ 32 ಗಂಟೆಗೆ 4,800 ರೂಪಾಯಿ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಅತಿಥಿ ಉಪನ್ಯಾಸಕರು ವಾರದಲ್ಲಿ 16 ಗಂಟೆ ಕೆಲಸ ಮಾಡಬೇಕು. ಗೊಂದಲಮಯ ಆದೇಶಗಳಿಂದ ಗೌರವ ಧನ ಬಾರದೆ 4 ತಿಂಗಳು ಕಳೆದಿದೆ' ಎಂದು ಕಾಲೇಜಿನ ಅತಿಥಿ ಉಪನ್ಯಾಸಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಅತಿ ಹಿಂದುಳಿದ ಮತ್ತು ಗಡಿ ಪ್ರದೇಶದ ತಾಲ್ಲೂಕಿನಲ್ಲಿರುವ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಪ್ರಾಂಶುಪಾಲ ಸೇರಿದಂತೆ ವಿಷಯವಾರು ಉಪನ್ಯಾಸಕರ ಕೊರತೆ ಇದೆ. ಇತರ ಕಾಲೇಜುಗಳಲ್ಲೂ ಇದೇ ರೀತಿ ಸಮಸ್ಯೆಗಳು ಇವೆ. ಒಂದು ಕೊಠಡಿಯಲ್ಲಿ 80 ವಿದ್ಯಾರ್ಥಿಗಳು ಕುಳಿತು ವ್ಯಾಸಂಗ ಮಾಡಬೇಕಿದೆ. ಒಂದು ಬೆಂಚ್‌ನಲ್ಲಿ 7 ಮಂದಿ ಕೂರವ ಪರಿಸ್ಥಿತಿವಿದೆ. ಹಲವು ರೀತಿ ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ' ಎಂದು ಅವರು ಹೇಳಿದರು.`ಕಾಲೇಜಿನಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಬೇಕು. ಮೂಲಸೌಕರ್ಯ ಕಲ್ಪಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು. ಕಾಲೇಜಿಗೆ ಸಂಬಂಧಿಸಿದಂತೆ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು' ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಜಿಲ್ಲಾ ಮುಖಂಡ ಶ್ರೀನಿವಾಸ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry