ಪಿಯು ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆ

7

ಪಿಯು ಕಾಲೇಜುಗಳಲ್ಲಿ ಮೂಲ ಸೌಕರ್ಯದ ಕೊರತೆ

Published:
Updated:

ರಾಜ್ಯದಲ್ಲಿ 1200ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳಿದ್ದು ಇವುಗಳಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಹಿನ್ನಲೆಯವರು. ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ಎಲ್ಲ ಕಾಲೇಜುಗಳಲ್ಲಿ ಅವಶ್ಯಕ ಮೂಲಸೌಕರ್ಯಗಳ ಕೊರತೆಯಲ್ಲಿಯೇ ಪಿಯು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಬೇಕಾಗಿದೆ.ಗ್ರಾಮೀಣ ಪ್ರದೇಶದ ಬಹುತೇಕ ಕಾಲೇಜುಗಳಲ್ಲಿ ಇಂದಿಗೂ ಸಹ ಪ್ರತ್ಯೇಕ ಶೌಚಾಲಯಗಳು ಮತ್ತು ಅವುಗಳ ಬಳಕೆಗೆ ಬೇಕಾದ ನೀರಿನ ವ್ಯವಸ್ಥೆ ಇಲ್ಲದೆ  ವಿದ್ಯಾರ್ಥಿಗಳು ಕಾಲೇಜು ಆವರಣ ಬಿಟ್ಟು ಆಚೆ ಹೋಗುವುದರೊಂದಿಗೆ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಕೆಲವು ಹೆಣ್ಣುಮಕ್ಕಳು ಕಾಲೇಜು ತೊರೆಯುವ ಮನಸ್ಸು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿಲ್ಲದೆ ಅಕ್ಕಪಕ್ಕದ ಮನೆಗಳಿಗೆ ಅಲೆಯುತ್ತಿದ್ದಾರೆ. ಗ್ರಾಮೀಣ ಭಾಗದ ಕೆಲವು ಕಾಲೇಜುಗಳಿಗೆ ಇಂದಿಗೂ ಸ್ವಂತ ಕಟ್ಟಡಗಳಿಲ್ಲ. ವಿಜ್ಞಾನ ವಿಭಾಗವಿರುವ ಕಡೆ ಕಾಯಂ ಉಪನ್ಯಾಸಕರು ಮತ್ತು ವಿಜ್ಞಾನ ಪ್ರಯೋಗಾಲಯಗಳು ಮತ್ತು ಅವುಗಳಲ್ಲಿ ಬಳಸುವ ಅವಶ್ಯಕ ಉಪಕರಣಗಳ ಸೌಲಭ್ಯ ಇರುವುದಿಲ್ಲ. ಪಿಯು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದವರೆಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರೂ ಬಹುತೇಕ ಎಲ್ಲಾ ಕಾಲೇಜುಗಳಲ್ಲಿ ಕ್ರೀಡಾ ಉಪನ್ಯಾಸಕರು ಹಾಗೂ ಆಟದ ಮೈದಾನವಿಲ್ಲ.ಸುಮಾರು, 700 ಕಾಲೇಜುಗಳಿಗೆ ಗಣಕಯಂತ್ರದ ಸೌಲಭ್ಯವಿದ್ದು ಅವುಗಳ ಬೋಧಕರಿಗೆ ನಿಗದಿತ ಮತ್ತು ಸಮರ್ಪಕ ವೇತನ ನೀಡದೆ ಅವರು ಬೋಧನೆಗೆ ಬರಲು ಹಿಂಜರಿಯುತ್ತಿದ್ದಾರೆ. ಇದರಿಂದ ಲಕ್ಷಾಂತರ ಮೌಲ್ಯದ ಕಂಪ್ಯೂಟರ್‌ಗಳ ನಿರ್ವಹಣೆ ಇಲ್ಲದಂತಾಗಿದೆ. ಬಹುತೇಕ ಕಾಲೇಜುಗಳಲ್ಲಿ ವಾಚನಾಲಯ ಮತ್ತು ಗ್ರಂಥಾಲಯ ಸೌಲಭ್ಯ ಕನಸಿನ ಮಾತಾಗಿದೆ.ಇನ್ನು ಉಪನ್ಯಾಸಕರ ಪರಿಣಾಮಕಾರಿ ಬೋಧನೆಯ ಬಲವರ್ಧನೆಗಾಗಿ ಆಧುನಿಕ ಬೋಧನಾ ವಿಧಾನಗಳ ತರಬೇತಿಯನ್ನು ನಿಯಮಿತವಾಗಿ ನೀಡುತ್ತಿಲ್ಲ.ಈ ಎಲ್ಲಾ ಕಾರಣಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶಗಳಲ್ಲಿ ಏರಿಳಿತಗಳಾಗುತ್ತಿವೆ. ಪದವಿ ಮತ್ತು ವೃತ್ತಿ ಶಿಕ್ಷಣಕ್ಕೆ ಪ್ರಮುಖವೆನಿಸಿರುವ ಪಿಯು ಹಂತದಲ್ಲಿ ಈ ರೀತಿಯ ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಸಮರ್ಪಕ ಮತ್ತು ಗುಣಮಟ್ಟದ ಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳಿಗೆ ನೀಡಲು ಪಿಯು ಉಪನ್ಯಾಸಕರು ಬದ್ಧರಾಗಿದ್ದು ಅವರಿಗೆ ಹೆಚ್ಚಿನ ಪ್ರೋತ್ಸಾಹ ಬೇಕಾಗಿದೆ. ಹಾಗಾಗಿ ಪಿಯು ಗುಣಮಟ್ಟದ ಶಿಕ್ಷಣ ವೃದ್ಧಿಗಾಗಿ ಅವಶ್ಯಕ ಮೂಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ, ಶಿಕ್ಷಣ ಸಚಿವರು, ಸ್ಥಳೀಯ ಶಾಸಕರು ಇತ್ತ ಗಮನ ಹರಿಸಬೇಕಾಗಿ ಮನವಿ.       

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry