ಬುಧವಾರ, ಏಪ್ರಿಲ್ 14, 2021
31 °C

ಪಿಲಿಕುಳ: ಹುಲಿಗೆ ಪ್ರಾಣಿಪಾಲಕ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಹೊರವಲಯದ ಪಿಲಿಕುಳ ಜೈವಿಕ ಉದ್ಯಾನದ ಪ್ರಾಣಿ ಪಾಲಕನನ್ನು ಅಸ್ವಾಸ್ಥ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಹುಲಿಯೊಂದು ಮಂಗಳವಾರ ರಾತ್ರಿ ಪಂಜರದೊಳಗೆ ಕೊಂದು ಹಾಕಿದೆ. ವಿಟ್ಲ ಕಳೆಂಜ ಗ್ರಾಮದ ಕುಶಾಲಪ್ಪ ಗೌಡ (36) ದಾಳಿಗೆ ಒಳಗಾಗಿ ಮೃತಪಟ್ಟವರು. ಹುಲಿ `ರಾಜ~ ನಾಲ್ಕು ದಿನಗಳಿಂದ ಅನಾರೋಗ್ಯಕ್ಕೆ (ಡಯೊರಿಯಾ) ಒಳಗಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿತ್ತು. ಹುಲಿ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ನೀಡಿದ್ದ ಮಾಂಸ ಸೇವಿಸಿತ್ತು. ಅಸ್ವಸ್ಥಗೊಂಡಿದ್ದ ಹುಲಿ ನೋಡಿಕೊಂಡು ಬರುವ ಸಲುವಾಗಿ ಕುಶಾಲಪ್ಪ ಗೌಡ ರಾತ್ರಿ ಸುಮಾರು 8.30ರ ವೇಳೆಗೆ ಪಂಜರದ ಬಳಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೃತದೇಹದ ಸೊಂಟದಲ್ಲಿ ಹುಲಿಯ ಮುಂಗಾಲಿನ ಏಟಿನ ಗುರುತು ಹಾಗೂ ಕತ್ತಿನಲ್ಲಿ ಉಗುರಿನಿಂದ ಗೀರಿದ ಗಾಯಗಳಿವೆ. ಅವರ ದೇಹವನ್ನು ಹುಲಿ ತಿಂದಿಲ್ಲ. ಏಟಿನಿಂದ ತೀವ್ರ ಗಾಯಗೊಂಡ ಅವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.`ಸಾಮಾನ್ಯವಾಗಿ ರಾತ್ರಿ ವೇಳೆ ಹುಲಿಗಳನ್ನು ನೋಡಿಕೊಂಡು ಬರಲು 2-3 ಮಂದಿ ಪಾಲಕರು ಜತೆಯ್ಲ್ಲಲಿ ತೆರಳುತ್ತಾರೆ. ಅವರು ಪಂಜರದ ಹೊರಗಿನಿಂದಲೇ ಟಾರ್ಚ್ ಹಾಕಿ ಹುಲಿ ನೋಡಿ ಮರಳಬೇಕು ಎಂಬ ಸೂಚನೆ ಇದೆ. ಕುಶಾಲಪ್ಪ ಗೌಡ ಅವರು ಏಕಾಂಗಿಯಾಗಿ ಪಂಜರದೊಳಗೆ ಏಕೆ ಹೋದರೋ ತಿಳಿಯುತ್ತಿಲ್ಲ~ ಎಂದು ಪಿಲಿಕುಳ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ `ಪ್ರಜಾವಾಣಿ~ಗೆ ತಿಳಿಸಿದರು.ಪಂಜರದ ಬಾಗಿಲನ್ನು ಹುಲಿಯೇ ತೆಗೆದು ಹೊರಬಂದಿದೆಯೋ ಅಥವಾ ಕುಶಾಲಪ್ಪ ಗೌಡ ಅವರೇ ಪಂಜರದ ಬಾಗಿಲನ್ನು ತೆಗೆದು ಒಳಗೆ ಹೋದರೋ ಎಂಬುದೂ ಸ್ಪಷ್ಟವಾಗಿಲ್ಲ.`ಮಂಗಳವಾರ ರಾತ್ರಿ ವೇಳೆ ಮಳೆಯಾಗುತ್ತಿದ್ದುದರಿಂದ ಕಿರುಚಾಟ ಕೇಳಿಸಿಲ್ಲ. ರಾತ್ರಿ 12 ಗಂಟೆಯಾದರೂ ಕುಶಾಲಪ್ಪ ಅವರ ಸುಳಿವು ಇಲ್ಲದ ಕಾರಣ ನಾವು ಅವರಿಗಾಗಿ ಹುಡುಕಾಟ ನಡೆಸಿದೆವು. ಆಗ ಅವರ ಮೃತದೇಹ ಪಂಜರದ ಬಾಗಿಲಿನ ಬಳಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು~ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.ಹುಲಿಗೆ ಕಾಯಿಲೆ ಇರಲಿಲ್ಲ: `ಹುಲಿಗೆ ಹೇಳುವಂಥ ಕಾಯಿಲೆ ಏನೂ ಇರಲಿಲ್ಲ. ಕೆಲವೊಮ್ಮೆ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೆ ಹುಲಿಗಳಿಗೆ ಭೇದಿ ಆಗುವುದು ಸಾಮಾನ್ಯ. ಹುಲಿಗೆ ರೋಗ ಪ್ರತಿರೋಧಕ  ಔಷಧಿ ನೀಡುತ್ತಿದ್ದೆವು. ಚಿಕಿತ್ಸೆಯ ಬಳಿಕ ಹುಲಿ ಚೇತರಿಸಿಕೊಂಡಿತ್ತು.  ಅದರ ವರ್ತನೆಯೂ ಸಹಜವಾಗಿತ್ತು. ಎಷ್ಟೆಂದರೂ ವ್ಯಾಘ್ರ ವನ್ಯಪ್ರಾಣಿ. ಅವು ಕೆಲವೊಮ್ಮೆ ವ್ಯಗ್ರವಾಗಿ ವರ್ತಿಸುತ್ತವೆ~ ಎಂದು ಹುಲಿಗೆ ಚಿಕಿತ್ಸೆ ನೀಡುತ್ತಿದ್ದ ಪಶುವೈದ್ಯೆ ವಿಭಾ `ಪ್ರಜಾವಾಣಿ~ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.