ಶುಕ್ರವಾರ, ನವೆಂಬರ್ 15, 2019
22 °C

ಪಿಸಿಐನಲ್ಲಿ ಉಲ್ಬಣಿಸಿದ ವಿವಾದ: ಸತ್ಯನಾರಾಯಣ ವಜಾ

Published:
Updated:

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ನೀತಿಯನ್ನು ಗಾಳಿಗೆ ತೂರಿದ ಆಪಾದನೆಯ ಮೇಲೆ ಭಾರತ ಪ್ಯಾರಾಲಿಂಪಿಕ್ ಸಂಸ್ಥೆ (ಪಿಸಿಐ) ಹಂಗಾಮಿ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.ಪಿಸಿಐ ವಿಶೇಷ ಕಾರ್ಯಕಾರಿ ಮಂಡಳಿಯು, ಪಿಸಿಐ ಹಂಗಾಮಿ ಅಧ್ಯಕ್ಷ ಬಿಷ್ಣು ಚರಣ್ ಸಾಹೂ ನೇತೃತ್ವದಲ್ಲಿ ಅಹಮದಾಬಾದ್‌ನಲ್ಲಿ ಮಂಗಳವಾರ (ಏಪ್ರಿಲ್ 23) ಸೇರಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.`ಮಂಡಳಿಯ ಸಭೆಯಲ್ಲಿ ಕರ್ನಾಟಕದ ಸತ್ಯನಾರಾಯಣ ಅವರನ್ನು ವಜಾ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಇದರ ಜೊತೆಗೆ ಪಿಸಿಐ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶಂಕರ್ ಅಯ್ಯರ್ ಮತ್ತು  ಕರ್ನಾಟಕದ ಎಂ. ಮಹಾದೇವ ಅವರನ್ನೂ ಕಿತ್ತು ಹಾಕಲು ಸಭೆ ತೀರ್ಮಾನಿಸಿದೆ. ಇವರಿಬ್ಬರಿಗೂ ಶೀಘ್ರದಲ್ಲಿಯೇ ಷೋಕಾಸ್ ನೋಟಿಸ್ ಜಾರಿ ಮಾಡಲಾಗುವುದು. 2011ರ ರಾಷ್ಟ್ರೀಯ ಕ್ರೀಡಾ ನೀತಿ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸತ್ಯನಾರಾಯಣ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ವಿಶ್ವಸನೀಯ ಮೂಲಗಳು  ತಿಳಿಸಿವೆ.ಈ ಮೊದಲು ಪ್ರಧಾನ ಕಾರ್ಯದರ್ಶಿಯಾಗಿದ್ದ ರತನ್ ಸಿಂಗ್ ಅವರಿಗೆ ಇತ್ತೀಚಿಗೆ ಯುವಜನ ಸೇವಾ ಹಾಗೂ ಕ್ರೀಡಾ ಸಚಿವಾಲಯ ಷೋಕಾಸ್ ನೋಟಿಸ್ ಜಾರಿ ಮಾಡಿ ಹುದ್ದೆ ತೆರವು ಮಾಡುವಂತೆ ಸೂಚನೆ ನೀಡಿತ್ತು. ಬೆಂಗಳೂರಿನಲ್ಲಿ ವಾಸವಾಗಿರುವ ರತನ್‌ಸಿಂಗ್ ವಯೋಮಿತಿ ಮೀರಿದರೂ ಹುದ್ದೆಯಲ್ಲಿ ಮುಂದುವರಿದಿದ್ದ ಕಾರಣ ಕ್ರೀಡಾ ಸಚಿವಾಲಯ ನೋಟಿಸ್ ನೀಡಿತ್ತು. ಹೀಗೆ ತೆರವುಗೊಂಡ ಸ್ಥಾನಕ್ಕೆ ಸತ್ಯನಾರಾಯಣ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.ಪಿಸಿಐ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ನವದೆಹಲಿಯಲ್ಲಿ ಮೇ 26ರಂದು ಚುನಾವಣೆ ನಡೆಸಲು ಸಹ ಸಭೆ ನಿರ್ಣಯ ಕೈಗೊಂಡಿದೆ. ಸತ್ಯನಾರಾಯಣ ಬದಲು ವಿಜಯ್ ಬಿ ಮುನೀಶ್ವರ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)