ಗುರುವಾರ , ನವೆಂಬರ್ 21, 2019
25 °C

ಪಿಸಿಒಎಸ್: ಅಮ್ಮನಾಗುವ ಕನಸಿಗೆ ತಡೆ?

Published:
Updated:

ಗರ್ಭ ಧರಿಸುವಲ್ಲಿ ವಿಳಂಬ, ಗರ್ಭ ಧರಿಸಿದರೂ ಪದೇ ಪದೇ ಗರ್ಭಪಾತ ಆಗುವುದು, ದೇಹದ ತೂಕದಲ್ಲಿ ಹೆಚ್ಚಳ, ಮುಖದ ಮೇಲೆ ಅಸಹನೀಯ ಮೊಡವೆ ಮತ್ತು ರೋಮಗಳ ಕೀಟಲೆ, ಜೊತೆಗೆ ತಲೆಯ ಕೂದಲು ಉದುರುವುದು ಎಲ್ಲವೂ ಸೇರಿಕೊಂಡು ಖಿನ್ನತೆಗೆ ಒಳಗಾದ ಸಂಜನಾ ಹತಾಶೆಯಿಂದಲೇ ಆಸ್ಪತ್ರೆಗೆ ಬಂದಿದ್ದರು.ಪ್ರಾಥಮಿಕ ತಪಾಸಣೆಯ ನಂತರ ಇದು ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಸಿಓಎಸ್) ಎನ್ನುವ ಅಂಡಾಶಯ ಸಂಬಂಧಿ ತೊಂದರೆ ಎಂದು ತಿಳಿಸಿದಾಗ ಕ್ಷಣಕಾಲ ಆಕಾಶವೇ ಕಳಚಿ ಬಿದ್ದಂತೆ ಬೆಚ್ಚಿದರು.ಆದರೆ `ಇದು ಹೆದರುವಂತಹ ರೋಗವಲ್ಲ, ಇದಕ್ಕೆ ಪರಿಹಾರ ನಿಮ್ಮ ಕೈಯಲ್ಲೇ ಇದೆ. ಸರಿಯಾದ ಚಿಕಿತ್ಸೆಯ ಜೊತೆಗೆ ಸೂಕ್ತ ಆಹಾರ ಕ್ರಮ, ಯೋಗ, ವ್ಯಾಯಾಮದಂತಹ ಜೀವನಶೈಲಿಯನ್ನು ರೂಢಿಸಿಕೊಂಡರೆ ಅಮ್ಮನಾಗುವ ನಿಮ್ಮ ಕನಸು ಈಡೇರುತ್ತದೆ' ಎಂದು ತಿಳಿಸಿ ಹೇಳಿದಾಗ ದಂಪತಿ ಹಸನ್ಮುಖರಾದರು.ಏನಿದು ಪಿಸಿಒಎಸ್ ಸಿಂಡ್ರೋಮ್?

ಪಿಸಿಒಎಸ್ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ (12ರಿಂದ 45) ಕಂಡುಬರುವ ಒಂದು ಅಂಡಾಶಯ ಸಂಬಂಧಿ ತೊಂದರೆ. ಇದು ಮಹಿಳೆಯ ಇನ್ಸುಲಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಹಾರ್ಮೋನ್‌ನ ಅಸಮತೋಲನವಾಗಿದ್ದು, ಅನಿಯಮಿತ ಮುಟ್ಟು ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ.ಶೇ 70ರಷ್ಟು ಭಾರತೀಯ ಮಹಿಳೆಯರು ಅನಿಯಮಿತವಾಗಿ ಋತುಚಕ್ರದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವರಲ್ಲಿ ಶೇ 35ರಷ್ಟು ಮಂದಿ ಪಿಸಿಒಎಸ್ ಹೊಂದಿರುತ್ತಾರೆ. ಸಾಮಾನ್ಯವಾಗಿ 20ರಿಂದ 40ನೇ ವರ್ಷದೊಳಗಿನ ಮಹಿಳೆಯರು ಈ ಸಮಸ್ಯೆಗೆ ಗುರಿಯಾಗುತ್ತಾರೆ.ಪಿಸಿಒಎಸ್ ಲಕ್ಷಣಗಳನ್ನು ಹೊಂದಿರುವ ಮಹಿಳೆಯರು ಗರ್ಭ ಧರಿಸುವುದು ವಿಳಂಬವಾಗುತ್ತದೆ. ಒಂದೊಮ್ಮೆ ಗರ್ಭ ಧರಿಸಿದರೂ ಮುಖ್ಯವಾಗಿ ಎರಡು ರೀತಿಯ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗರ್ಭಪಾತ ಆಗುವ ಅಪಾಯ ಹೆಚ್ಚಾಗಿರುತ್ತದೆ. ಎರಡನೇ ಅಪಾಯ ಗರ್ಭಧಾರಣೆಯ ಮಧುಮೇಹಕ್ಕೆ ಸಂಬಂಧಿಸಿದ್ದು. ಸೂಕ್ತ ಚಿಕಿತ್ಸೆ ಪಡೆದರೆ ಪಿಸಿಒಎಸ್ ಲಕ್ಷಣವಿರುವ ಮಹಿಳೆಯರು ಕೂಡ ಆರೋಗ್ಯವಂತ ಮಗುವನ್ನು ಪಡೆಯಬಹುದು.ಪಿಸಿಒಎಸ್ ಸಿಂಡ್ರೋಮ್‌ಗೆ ಇಂತದ್ದೇ ನಿರ್ದಿಷ್ಟ ಕಾರಣ ಎಂದು ಗುರುತಿಸುವುದು ಕಷ್ಟ. ಆದಾಗ್ಯೂ ಇದೊಂದು ಆನುವಂಶಿಕ ಕಾಯಿಲೆಯಾಗಿದ್ದು, ನಿಮ್ಮ ಮನೆಯಲ್ಲಿ ನಿಮ್ಮ ಸಹೋದರಿ ಅಥವಾ ತಾಯಿ ಈ ತೊಂದರೆಯನ್ನು ಎದುರಿಸಿದ್ದರೆ ನೀವೂ ಅದಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಜೊತೆಗೆ ಜೀವನಶೈಲಿ ಕೂಡ ತನ್ನದೇ ಆದ ಪಾತ್ರ ಹೊಂದಿದೆ.ತೊಂದರೆ-ತೊಡಕುಗಳು

ಮುಟ್ಟಿನಲ್ಲಿ ವೈಪರೀತ್ಯ: ಪಿಸಿಒಎಸ್‌ನಿಂದ ಎದುರಾಗುವ ಮೊದಲ ಲಕ್ಷಣ ಮುಟ್ಟಿನಲ್ಲಿ ವೈಪರೀತ್ಯ ಉಂಟಾಗುವುದು. ಅಂದರೆ ಮುಟ್ಟಿನ ಮಧ್ಯೆ 35 ದಿನಗಳಿಗಿಂತಲೂ ಹೆಚ್ಚು ಅಂತರ, ಒಂದು ವರ್ಷದಲ್ಲಿ ಎಂಟಕ್ಕಿಂತಲೂ ಕಡಿಮೆ ಮುಟ್ಟಿನ ಚಕ್ರಗಳು, ನಾಲ್ಕು ತಿಂಗಳು ಅಥವಾ ದೀರ್ಘಕಾಲ ಮುಟ್ಟಾಗದಿರುವುದು ಇತ್ಯಾದಿ.

ಹೆಚ್ಚುವರಿ ಆಂಡ್ರೊಜನ್: ಅಂದರೆ ತಲೆಗೂದಲು ಉದುರುವುದು ಹಾಗೂ ಮುಖದ ಮೇಲೆ ಅಸ್ವಾಭಾವಿಕ ರೋಮ ಬೆಳೆಯುವುದು, ಮೊಡವೆ ಮುಂತಾದ ಬದಲಾವಣೆಗಳಿಗೆ ಕಾರಣವಾಗುವ `ಆಂಡ್ರೊಜನ್' ಹೆಚ್ಚಾಗಿ ಸ್ರವಿಸುವುದು.ಪಾಲಿಸಿಸ್ಟಿಕ್ ಅಂಡಾಶಯ: ಅಂದರೆ ಅಂಡಾಶಯದ ಕಾರ್ಯ ನಿರ್ವಹಣೆಯಲ್ಲಿ ತೊಡಕುಂಟಾಗುತ್ತದೆ. ಇದು ಅಲ್ಟ್ರಾಸೌಂಡ್ ಪರೀಕ್ಷೆಯಿಂದ ಮಾತ್ರ ತಿಳಿದು ಬರುವ ಲಕ್ಷಣವಾಗಿದೆ.ಇತರ ಸಮಸ್ಯೆ

2ನೇ ಹಂತದ ಮಧುಮೇಹ ಅಥವಾ ಗರ್ಭಧಾರಣೆಯ ಮಧುಮೇಹ

ಅಧಿಕ ರಕ್ತದೊತ್ತಡ

ಹೃದಯ ಸಂಬಂಧಿ ಕಾಯಿಲೆ

ಸಹಜ ಭ್ರೂಣದ ಬೆಳವಣಿಗೆ

ಕೊಲೆಸ್ಟರಾಲ್ ಮತ್ತು ಮೇದಸ್ಸಿನ ವೈಪರೀತ್ಯಗಳು

ಮೆಟಬಾಲಿಕ್ ಸಿಂಡ್ರೋಮ್

ನಿದ್ರಾಶ್ವಾಸ ಬಂಧನ

ಅಸಹಜ ಗರ್ಭಾಶಯದ ರಕ್ತಸ್ರಾವ

ಗರ್ಭಾಶಯದ ಒಳಪದರದ ಕ್ಯಾನ್ಸರ್ಚಿಕಿತ್ಸೆ- ಪರಿಹಾರ

ಮೊದಲು ನಿಮ್ಮ ಮಾಸಿಕ ಋತುಚಕ್ರ, ಕುಟುಂಬ ಇತಿಹಾಸ, ವೈದ್ಯಕೀಯ ಇತಿಹಾಸ, ತೂಕ ಹೆಚ್ಚಳ ಮುಂತಾದ ಅಂಶಗಳ ಬಗ್ಗೆ ಅರಿಯಲು ಪರೀಕ್ಷೆ ಮಾಡಿಸಬೇಕಾಗುತ್ತದೆ. ನಂತರ ಪೆಲ್ವಿಕ್ ತಪಾಸಣೆ ಮಾಡಿ ನಿಮಗಿರುವ ಅವಕಾಶಗಳು ಮತ್ತು ಸಾಧ್ಯತೆಗಳ ಬಗ್ಗೆ ಚರ್ಚಿಸಬಹುದು.ಪರಿಹಾರವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ:

1. ನೈಸರ್ಗಿಕ ವಿಧಾನ (ಆಹಾರ, ಪಥ್ಯ, ವ್ಯಾಯಾಮ ಸೇರಿದಂತೆ ಜೀವನಶೈಲಿ ಬದಲಾವಣೆ)

2. ಸಂತಾನೋತ್ಪತ್ತಿ ವೃದ್ಧಿಸುವ ಔಷಧ- ಮಾತ್ರೆಗಳು

3. ಶಸ್ತ್ರಚಿಕಿತ್ಸೆ

ನೈಸರ್ಗಿಕ ವಿಧಾನ

ತೂಕ ಇಳಿಕೆ: ನಿಮ್ಮ ಮುಂದಿರುವ ಮೊದಲ ಅವಕಾಶ ಎಂದರೆ ತೂಕ ಇಳಿಸುವುದು. ಇದರಿಂದ ನಿಮ್ಮ ಹಾರ್ಮೋನ್ ಅಸಮತೋಲನವನ್ನು ಸುಸ್ಥಿತಿಗೆ ತರಬಹುದು. ಹಾರ್ಮೋನ್ ಸರಿಯಾಗಿ ಸ್ರವಿಸಲು ಆರಂಭಿಸಿದರೆ ಋತುಚಕ್ರವೂ ತಹಬಂದಿಗೆ ಬರುತ್ತದೆ.ಆಹಾರ-ಪಥ್ಯ: ಕಡಿಮೆ ಕಾರ್ಬೋಹೈಡ್ರೇಟ್ ಸೇವಿಸಿ. ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಬದಲು ನಾರಿನಾಂಶ ಹೆಚ್ಚಾಗಿರುವ ಕಾರ್ಬೋಹೈಡ್ರೇಟ್‌ಗಳನ್ನು, ಅಂದರೆ ಧಾನ್ಯ, ಬಾರ್ಲಿ, ಬೀನ್ಸ್, ಕಂದು ಅಕ್ಕಿ, ತಾಜಾ ಹಣ್ಣು, ತರಕಾರಿ ಇತ್ಯಾದಿ ಬಳಸಿ.ದೈಹಿಕ ವ್ಯಾಯಾಮ: ವ್ಯಾಯಾಮ ಅಥವಾ ದೈನಂದಿನ ಚಟುವಟಿಕೆಯನ್ನು ಮರೆಯಬೇಡಿ.

ಔಷಧ-ಮಾತ್ರೆ

ಕೆಲವು ಔಷಧಗಳು ನಿಮ್ಮ ದೇಹದಲ್ಲಿ ರಚನೆಯಾಗುವ ಪುರುಷ ಹಾರ್ಮೋನುಗಳನ್ನು ಕಡಿಮೆ ಮಾಡಿ ಗರ್ಭ ಧರಿಸುವ ಅವಕಾಶವನ್ನು ಹೆಚ್ಚಿಸುತ್ತವೆ. ಫಲವತ್ತತೆಯ ಔಷಧಗಳಿಗಿಂತಲೂ ಈ ಔಷಧಗಳು ಉತ್ತಮ ಫಲಿತಾಂಶ ನೀಡುತ್ತವೆ. ಆದರೆ ಇವುಗಳನ್ನು ಸೇವಿಸುವ ಮುನ್ನ ವೈದ್ಯರಿಗೆ ನಿಮ್ಮ ವೈದ್ಯಕೀಯ ಇತಿಹಾಸ ತಿಳಿಸುವುದು ಬಹಳ ಮುಖ್ಯ. ಏಕೆಂದರೆ ಕೆಲವು ಔಷಧಗಳು ಎಲ್ಲರ ದೇಹಸ್ಥಿತಿಗೂ ಹೊಂದುವುದಿಲ್ಲ. ಕೆಲವು ಚುಚ್ಚುಮದ್ದುಗಳು ಅಂಡೋತ್ಪತ್ತಿಯನ್ನು ಉತ್ತೇಜಿಸುತ್ತವೆ.

ಶಸ್ತ್ರಚಿಕಿತ್ಸೆ

ಅಂಡಾಶಯದ ಕೊರೆಯುವಿಕೆ (Ovarian drilling):  ಇಲ್ಲಿ ಒಂದು ಸಣ್ಣ ಎಲೆಕ್ಟ್ರಾನಿಕ್ ಸೂಜಿಯನ್ನು ಬಳಸಿ ಅಂಡಾಶಯದಲ್ಲಿ ಸಣ್ಣ ರಂಧ್ರಗಳನ್ನು ಕೊರೆಯಲಾಗುತ್ತದೆ. ಇದರಿಂದ ಪುರುಷ ಹಾರ್ಮೋನುಗಳ ಮಟ್ಟವನ್ನು ತಗ್ಗಿಸುವ ಮೂಲಕ ಅಂಡೋತ್ಪತ್ತಿಯ ಮರುಸ್ಥಾಪನೆ ಸಾಧ್ಯವಾಗುತ್ತದೆ.ಪ್ರನಾಳ ಶಿಶು (ಟೆಸ್ಟ್ ಟ್ಯೂಬ್ ಬೇಬಿ ವಿಧಾನ): ಇದರಲ್ಲಿ ಐವಿಎಂ (ಪ್ರನಾಳೀಯ ಪಕ್ವಗೊಳಿಸುವಿಕೆ) ಅಥವಾ ಐವಿಎಫ್ (ಪ್ರನಾಳೀಯ ಫಲೀಕರಣ) ಎನ್ನುವ ವಿಧಾನಗಳನ್ನು ಅನುಸರಿಸಬಹುದು. ಐವಿಎಂನಲ್ಲಿ ಮಹಿಳೆಯ ಅಪಕ್ವ ಮೊಟ್ಟೆಗಳನ್ನು ಪ್ರಯೋಗಾಲಯದಲ್ಲಿ ಪಕ್ವಗೊಳಿಸಲಾಗುತ್ತದೆ, ನಂತರ ಅದನ್ನು ಗರ್ಭಧಾರಣೆಗೆ ಬಳಸಲಾಗುತ್ತದೆ.ಐವಿಎಫ್‌ನಲ್ಲಿ ಮಹಿಳೆಯ ಅಂಡಾಶಯದಿಂದ ಪಕ್ವ ಮೊಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಫಲವತ್ತ ಮೊಟ್ಟೆಗಳನ್ನು ಗರ್ಭಕೋಶಕ್ಕೆ ಅಳವಡಿಸಲಾಗುತ್ತದೆ. ಔಷಧ ಚಿಕಿತ್ಸೆಗೆ ಸ್ಪಂದಿಸದ ಸಂದರ್ಭದಲ್ಲಿ ಮಾತ್ರ ಈ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.ಗರ್ಭಪಾತ

ಗರ್ಭಪಾತಕ್ಕೆ ಒಳಗಾಗುವ ಮಹಿಳೆಯರಲ್ಲಿ ಪಿಸಿಒಎಸ್ ಅಸ್ವಸ್ಥತೆ ಹೊಂದಿರುವವರ ಸಂಖ್ಯೆ ಹೆಚ್ಚು. ಇದಕ್ಕೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ, ಆದಾಗ್ಯೂ, ಕೆಲ ಹಾರ್ಮೋನು, ಇನ್ಸುಲಿನ್ ಅಥವಾ ಗ್ಲೂಕೋಸ್‌ಗಳ ಏರಿಕೆ ಇದಕ್ಕೆ ಕಾರಣ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಪಿಸಿಒಎಸ್ ಹಾಗೂ ಮಾನಸಿಕ ಸಮಸ್ಯೆ

ಇದೊಂದು ದೈಹಿಕ ಸಮಸ್ಯೆಯಾದರೂ ಅನೇಕ ವೇಳೆ ಮನೋಕ್ಲೇಶಕ್ಕೂ ಕಾರಣವಾಗುತ್ತದೆ. ಮೊದಲ ಬಾರಿಗೆ ಈ ಅಸ್ವಸ್ಥತೆ ಪತ್ತೆಯಾದಾಗ ಹೆಚ್ಚಿನ ಯುವತಿಯರು ಗೊಂದಲಕ್ಕೆ ಬೀಳುತ್ತಾರೆ. ತಮಗೆ ಗುಣವಾಗದ ಹೊಸ ಕಾಯಿಲೆ ಮುತ್ತಿಕೊಂಡಿದೆ ಎನ್ನುವಂತೆ ಆತಂಕಕ್ಕೆ ಒಳಗಾಗುತ್ತಾರೆ. ಮುಖದ ಮೇಲೆ ಕೂದಲು ಬೆಳೆಯುವುದು, ಮೊಡವೆ, ತಲೆಗೂದಲು ಉದುರುವುದು, ದೇಹದ ತೂಕ ಹೆಚ್ಚುವುದು... ಇಂತಹ ಲಕ್ಷಣಗಳು ಅವರನ್ನು ಹತಾಶೆಗೆ ನೂಕುವ ಸಾಧ್ಯತೆ ಇರುತ್ತದೆ.ಆದರೆ ಇದು ಶಾಶ್ವತ ಕಾಯಿಲೆ ಅಲ್ಲ. ವೈದ್ಯರ ಸಲಹೆ- ಶಿಫಾರಸಿನಂತೆ ಸರಿಯಾದ ಜೀವನ ಪದ್ಧತಿ ರೂಢಿಸಿಕೊಳ್ಳುವ ಮೂಲಕ ಎಷ್ಟು ಬೇಗ ಗುಣಮುಖರಾಗಬಹುದು ಎಂಬುದನ್ನು ಅವರೇ ನಿರ್ಧರಿಸಬಹುದು. ಏಕೆಂದರೆ ಇಲ್ಲಿ ಔಷಧಿಗಿಂತ ಮುಖ್ಯವಾದುದು ಆರೋಗ್ಯಕರ ಜೀವನ ಪದ್ಧತಿ.

ಬಂಜೆತನ ಹೇಗೆ?

ನೀವು ಪಿಸಿಒಎಸ್ ಸಿಂಡ್ರೋಮ್ ಹೊಂದಿದ್ದರೆ, ನಿಮ್ಮ ದೇಹದಲ್ಲಿ ರಚನೆಯಾಗುತ್ತಿರುವ ಪುರುಷ ಹಾರ್ಮೋನು ನಿಮ್ಮ ಸ್ತ್ರೀ ಹಾರ್ಮೋನುಗಳ ಉತ್ಪಾದನೆಯ ಮಧ್ಯ ಪ್ರವೇಶಿಸಬಹುದು. ಇದರ ಪರಿಣಾಮವಾಗಿ ಅನಿಯಮಿತ ಋತುಚಕ್ರ ಅಥವಾ ಋತುಚಕ್ರದ ಅನುಪಸ್ಥಿತಿಯಿಂದ ಅಂಡೋತ್ಪತ್ತಿ ಮತ್ತು ರಜಃಸ್ರಾವದ ಕೊರತೆ ಉಂಟಾದಾಗ ಗರ್ಭಧಾರಣೆ ಸಾಧ್ಯವಾಗುವುದಿಲ್ಲ.

ಪ್ರತಿಕ್ರಿಯಿಸಿ (+)