ಪೀಠದವನಿಂದ ಪಡೆಯಲು ಹೊಂದಾಣಿಕೆ

ಗುರುವಾರ , ಜೂಲೈ 18, 2019
24 °C

ಪೀಠದವನಿಂದ ಪಡೆಯಲು ಹೊಂದಾಣಿಕೆ

Published:
Updated:

ಕಾಸರಗೋಡಿನ ಅಧ್ಯಾಪಕ, ಪತ್ರಕರ್ತರೊಬ್ಬರು ಹೇಳಿದರು, `ಒಂದು ವೇಳೆ ಇಂದು 191 ಕನ್ನಡ ಮಾಧ್ಯಮ ಶಾಲೆಗಳ 1,630 ಅಧ್ಯಾಪಕರು, 40ಸಾವಿರ ವಿದ್ಯಾರ್ಥಿಗಳು ಒಬ್ಬರೂ ಬಿಡದೆ ಬಂದು ಕಾಸರಗೋಡಿನಲ್ಲಿ ಒಟ್ಟಾಗಿ ಸೇರಿದರೆ ಇಡಿಕ್ಕಿಡೀ ನಗರ ಸ್ತಬ್ಧವಾದೀತು~ಆದರೆ, ಇಂದಿನ ಶನಿವಾರ ಹಾಗಾಗುತ್ತದೆಯೇ? ಗೊತ್ತಿಲ್ಲ. ಬಹುಶಃ ಆಗಲಾರದು. ಈ ರೀತಿ ಪ್ರತಿಭಟಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಕಾರಣವು ತುಂಬಾ ಸರಿಯಾಗಿದೆ. ಹದಿನಾಲ್ಕು ಜಿಲ್ಲೆಗಳ ಸುಂದರ ರಾಜ್ಯ ಕೇರಳ.ಅದರ ತುತ್ತತುದಿ ಜಿಲ್ಲೆ ಕಾಸರಗೋಡಿನಲ್ಲೆದ್ದ ಈ ಸಮಸ್ಯೆ ನಿಜವಾಗಿ ಇಲ್ಲಿಯ ಕನ್ನಡಕ್ಕಿರುವ ಬದುಕು ಸಾವಿನ ಪ್ರಶ್ನೆಯಾಗಿದೆ. ಯಾಕೆಂದರೆ, ಇಲ್ಲಿ ಶಾಲೆಗಳೊಂದೇ ಕನ್ನಡ ಬಿತ್ತುವ ಬೀಜ. ಕನ್ನಡ ಕರಾವಳಿಯ ಈ ಕಾಲು ಭಾಗವನ್ನು ಮರೆತು ನಡೆಸುವ ನಮ್ಮ ವರ್ಣಲೋಕದ ಚಿಂತನೆ ಮಣ್ಣಿಂದ ದೂರವಾಗಿ ಎಲ್ಲೋ, ಆಕಾಶದಲ್ಲಿ ವಿಹರಿಸುವ ಹೈಡ್ರೋಜನ್ ಬೆಲೂನು ಆಗಿಬಿಟ್ಟೀತು! ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿದ್ದ ಕನ್ನಡವು ಕೇರಳ ಸರ್ಕಾರದ ಹೊಸ ಆಜ್ಞೆ ಪ್ರಕಾರ ನಾಳೆ ನಾಲ್ಕನೆಯದಾಗುತ್ತದೆ.ಎತ್ತರದ ಪೀಠದಲ್ಲಿ ಕುಂಡೆಯೂರಿ, ಬಾಲವನ್ನು ಲಹರಿಯಲ್ಲಿ ತೂಗಾಡಿಸುತ್ತಾ ಕುಳಿತ ರೋಮ ನಿಮಿರಿಸಿದ ಮಂಗ! ಅದು ಚೆಂಡು ನೀಡುವ ಠೀವಿಯನ್ನು ನೋಡಿ. ಈ `ಬಾಲನ್ನು~ ಪಡೆಯಬೇಕೋ? ಸಹಜ ಅಂಗೈ ಚಾಚಿದರೆ ಸಾಲದು, ನಿಮ್ಮ ನಿಜ ಅಂಗೈಯನ್ನು ಮುಚ್ಚುವಂತೆ ವಿಚಿತ್ರ ಕೈಗವುಸಿನ ವೇಷ ತೊಡಬೇಕು. ಹೀಗೆ ಅಧಿಕಾರಸ್ಥ ಮಂಗನಿಂದ ಪಡೆಯುವುದಕ್ಕೆ ಎಷ್ಟೊಂದು ಹೊಂದಾಣಿಕೆ ಮಾಡಿಕೊಳ್ಳಬೇಕು! ಇದು ಗಡಿನಾಡಿನ ಪಡಿಪಾಟಲು.

ಕಳೆದ ನೂರೈವತ್ತು ವರ್ಷಗಳಿಂದ ಬಾಸೆಲ್ ಮಿಶನ್ನಿನ ಹಳೆಯ ಶಾಲೆಗಳೂ ಸೇರಿ ಕಾಸರಗೋಡಿನ ಚಂದ್ರಗಿರಿ ನದಿಯ ಉತ್ತರದಲ್ಲಿ ಲಕ್ಷಾಂತರ ಮಕ್ಕಳು ಕಲಿತುದು ಕನ್ನಡದಲ್ಲಿ. ಹೌದು ಕರಾವಳಿಯ ಬಹುಪಾಲು ಜನರ ಮನೆಮಾತು ಕನ್ನಡ ಅಲ್ಲ; ಇತಿಹಾಸ ಕೆದಕಿದರೆ ಅದು ಈ ನೆಲವನ್ನಾಳಿದ ಘಟ್ಟದ ಮೇಲಿನ ಚಕ್ರವರ್ತಿಗಳ ಆಡಳಿತ ಭಾಷೆ.ಹೀಗೆ ಬಂದ ಕನ್ನಡವೇ ಮುಂದೆ ಕರಾವಳಿಯಲ್ಲಿ ಮಿಶನರಿಗಳ ಭಾಷೆಯಾಯಿತು. ಬ್ರಿಟೀಷರಿಗೆ ಬೇಕಾಯಿತು. ಹತ್ತೊಂಬತ್ತು ಇಪ್ಪತ್ತನೆಯ ಶತಮಾನದಲ್ಲಿ `ಆಧುನಿಕ~ ಎನಿಸುವ ಎಲ್ಲ ಹೊಸ ಬೆಳಕುಗಳು ಕರಾವಳಿಗೆ ಕನ್ನಡದಲ್ಲಿ ಬಂತು. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎಂಬುದಾಗಿ ಟಿಪ್ಪುವನ್ನು ಗೆದ್ದು ಬ್ರಿಟೀಷರು ಪಡೆದ ಈ ಉದ್ದ ದಂಡೆಗೆ ಇರುವುದು ಒಂದೇ ಹೊಸಕತೆ. ಅದು ಆಧುನಿಕತೆಯನ್ನು ಕನ್ನಡದ ಮೂಲಕ ತೋಯಿಸಿಕೊಂಡ ಕತೆ. ಇದು ಕಾಸರಗೋಡಿನಿಂದ ಕಾರವಾರದವರೆಗಿನ ನಿಜ.`ತುಪ್ಪಶನ ಉಂಬಲೆ ತುಳುನಾಡಿಂಗೆ ಹೋಯೆಕ್ಕು~ ಎಂದು ಕನ್ನಡದಲ್ಲಿ ತಮ್ಮ ವಲಸೆಯ ಕನಸನ್ನು ಹಾಡಿದ ಹವ್ಯಕರು ಬಂದು ತಳವೂರಿದ್ದು ಕಾಸರಗೋಡು ಜಿಲ್ಲೆಯಲ್ಲಿ. ಗುಡ್ಡೆಗೆ ಸುರಂಗ ಹೊಡೆವ ತಂತ್ರಜ್ಞಾನ ಗೊತ್ತಿದ್ದ ಮರಾಠೀ ಮೂಲದ ಕರಾಡ್ಹರೂ ಹೀಗೆಯೇ ಬಂದವರು.ಬೇಕಲ ರಾಮನಾಯಕರ ಕತೆಯೊಂದರಲ್ಲಿ ಕೋಟೆಗಳನ್ನು ಕಾಯಲಿಕ್ಕಿರುವ ಕನ್ನಡದ ಸೈನಿಕರು ತುಳುನಾಡಿನಲ್ಲಿ ದಾರಿ ಹಿಡಿದು ಸಾಗುವ ಚಿತ್ರವಿದೆ. ಅವರ ವೇಷ ಭೂಷಣಗಳನ್ನು ಕಂಡ ಸ್ಥಳೀಯ ತುಳುವರು `ಕನ್ನಡೇರ‌್ನ ಅಂಗಿ ಮುಂಡಾಸ್ ಕಣ್ಣ್‌ಗ್ ಬಲ್ ರಂಜನೋ~ ಎಂದು ಹಾಡುತ್ತಿದ್ದರಂತೆ.

 

ಈ ನೆಲದ ಭಾಷೆಯಾದ ತುಳುವಿನಿಂದ ಕರುಳು ಹಂಚಿಕೊಂಡು ಹುಟ್ಟಿದ ಭಾಷೆ `ಬ್ಯಾರಿ~. ಗೋಪಾಲಕೃಷ್ಣ ಪೈಗಳ `ಸ್ವಪ್ನ ಸಾರಸ್ವತ~ ಕಾದಂಬರಿಯಲ್ಲಿ ಗೋವಾದಿಂದ ಚಲ್ಲಾಪಿಲ್ಲಿಯಾಗಿ ಬರುವ ಕೊಂಕಣಿಗರು ಕಾರವಾರ ದಾಟಿ ದಕ್ಷಿಣಕ್ಕೆ ಬಂದಾಗ ಹಣ್ಣು ಅಡಿಕೆಯಂತೆ ಉರುಟುರುಟಾಗಿರುವ ಕನ್ನಡ ಅಕ್ಷರಗಳನ್ನು ಮೊದಲಾಗಿ ಕಂಡು ಮೋಹಕ್ಕೊಳಗಾಗುತ್ತಾರೆ!ಯಾವ ಕತೆ ಕವನಗಳೂ ಹೇಳುವುದು ಒಂದೇ- ತುಳುನಾಡಿನ ಮಣ್ಣಿಗೆ ಇಳಿದುಬಂದ ಎಲ್ಲರೂ ಧಾರೆ ಸುರಿದು ಸರ‌್ರನೆ ಸಣ್ಣ ನದಿಯಾಗಿ ಸಮುದ್ರ ಸೇರುವ ಮಳೆಯಲ್ಲಿ, ಭತ್ತವನ್ನು ಎರಡೆರಡು ಬಾರಿ ಬೇಯಿಸಿ ತಿನ್ನುವ ಕುಚ್ಚಿಲನ್ನದಲ್ಲಿ, ಬೊಂಡದಿಂದ ಝಿಲ್ಲನೆ ಚಿಮ್ಮಿದ ಎಳೆಯ ನೀರಿನಲ್ಲಿ ಹೊಂದಿಕೊಂಡು ಬದುಕಿದ್ದಾರೆ. ಅಪಾರ ಉಪ್ಪಿನಲ್ಲಿ ಈಜಾಡುವ ಇಲ್ಲಿಯ ಬಂಗುಡೆ ಬೂತಾಯಿಗಳನ್ನು ತಿಂದಿದ್ದಾರೆ.ಭಾಷಾವಾರು ಪ್ರಾಂತ್ಯ ಮಾಡುವಾಗ ಕಾಸರಗೋಡು ಜಿಲ್ಲೆಯನ್ನು ಮಲೆಯಾಳಕ್ಕೆ ಸೇರಿಸಿದ್ದು ಯಾಕೆ? ಎಂಬ ಪ್ರಶ್ನೆಗೆ ಸಂಪೂರ್ಣ ಸತ್ಯವೆನಿಸುವ ಉತ್ತರ ಇದುವರೆಗೆ ಯಾರೂ ಹೇಳಿಲ್ಲ. ತುಂಡಾದುದು ಕನ್ನಡ ನಾಡೆಂದು ಕನ್ನಡ ಹೋರಾಟಗಾರರಿಗೆ ಅನಿಸಿದ್ದರೆ, ತುಳುನಾಡು ನಿಜವಾಗಿ ಒಡೆದಿತ್ತು! ಒಂದು `ಪೀಸು~ ಕರ್ನಾಟಕಕ್ಕೂ ಇನ್ನೊಂದು `ತುಂಡು~ ಕೇರಳಕ್ಕೂ ಹೋಗಿತ್ತು.ಉಡುಪಿ, ದಕ್ಷಿಣ ಕನ್ನಡಗಳ ಶಾಲೆಗಳಂತೆಯೇ ಕಾಸರಗೋಡಿನ `ಕನ್ನಡ ಮಾಧ್ಯಮಿ~ ಮಕ್ಕಳು ಕನ್ನಡದಲ್ಲಿಯೇ ರೇಖಾಗಣಿತ ಕಲಿಯುತ್ತಾರೆ. `ಕೇಂದ್ರ~ ಮತ್ತು `ಪರಿಧಿ~ ಅಂತ ಉರುಟು ವೃತ್ತದಲ್ಲಿ ಭಾಗಗಳನ್ನು ಗುರುತಿಸುತ್ತಾರೆ. ಮಣ್ಣಿನ ಒಂದು ತುಂಡಿಗೆ ಅಧಿಕಾರ ಕೇಂದ್ರವು ಓ ಆಚೆ ಬೆಂಗಳೂರಾಯಿತು; ಇನ್ನೊಂದು ಕಾಸರಗೋಡಿನ ತುಂಡಿಗೆ ಪವರ್ ಸೆಂಟರ್ ದಕ್ಷಿಣದ ತುತ್ತತುದಿ ತಿರುವನಂತಪುರದಲ್ಲಾಯಿತು!

ಪರಿಧಿಯೊಂದೇ-ಆದರೆ ಎರಡೆರಡು ದೂರ ನಿಯಂತ್ರಕ ಕೇಂದ್ರಗಳು! ಅಧಿಕಾರದ ಎತ್ತರದಲ್ಲಿ ಕುಳಿತ ಮಂಗನಿಂದ ತಮ್ಮ ಪಾಲಿನ `ಬಾಲು~ ಪಡೆಯಲು ಕೈ ಹೊಂದಾಣಿಕೆ ಮಾಡುವ ಆಟಗಳು ಇಲ್ಲಿನವರಿಗೆ ಎಂದೆಂದಿಗೂ ಉಳಿದುಹೋದವು.`ತುಳು ಅಕಾಡೆಮಿ~ ಸ್ಥಾಪನೆಯಾದ ಕಾಲವನ್ನು ನೆನಪಿಸಿ. ತುಳುವರಾದ ಮಾನ್ಯ ವೀರಪ್ಪ ಮೊಯಿಲಿಯವರಿಗೆ ಕನ್ನಡಕ್ಕೆ ತುಳು ಒಂದು `ಎದುರಂಗಡಿ~ಯ ಸ್ಪರ್ಧಿಯಾಗುವುದು ಬೇಕಿರಲಿಲ್ಲ; ತಾನು ತುಳುವಿನ ಪರವಾಗಿ ಬಿಟ್ಟ ಕರ್ನಾಟಕದ ರಾಜಕಾರಣಿ ಅಂತ ಆಪಾದನೆ ಆಗುವುದೂ ಬೇಕಿರಲಿಲ್ಲ. ಕೊಂಕಣಿ, ಉರ್ದು, ಕೊಡವ, ಮತ್ತು ತುಳು ಅಕಾಡೆಮಿಗಳು ತಳಿವಿಜ್ಞಾನದಲ್ಲಿ ಹುಟ್ಟಿದ ಒಂದೇ ರೂಪದ ಡಾಲಿ ಕುರಿ ಮರಿಗಳಂತೆ ಅಂದು ಏಕಕಾಲದಲ್ಲಿ ಮೂಡಿದುವು.ಸರಿ ಇಷ್ಟಾದರೂ ಸಿಕ್ಕಿತಲ್ಲಾ ಎಂಬ ಸಂತಸ ಎಲ್ಲರಿಗೆ. ಅಧಿಕಾರ ಕೇಂದ್ರದ ರಾಜಕೀಯಕ್ಕೆ ಈ ಹೊಂದಾಣಿಕೆ ಬೇಕಿರುತ್ತದೆ ಹೊರತು ಸಂಸ್ಕೃತಿಯ ಸತ್ಯಗಳು ಇಷ್ಟೊಂದು `ಡಾಲಿ ಏಕರೂಪತೆ~ ಆಗುವುದಿಲ್ಲ. ಇತ್ತೀಚೆಗೆ ಕರಾವಳಿಯ ತುಳು, ಕೊಂಕಣಿ ಅಕಾಡೆಮಿಗಳಿಗೆ `ಬ್ಯಾರಿ~ ಅಕಾಡೆಮಿಯೂ ಸೇರಿಕೊಂಡಿತು.

 

ಸರಿ, ಪ್ರಜಾಪ್ರಭುತ್ವದ ಪ್ರಾತಿನಿಧ್ಯದ ದೃಷ್ಟಿಯಿಂದ ಎಲ್ಲ ಒಳಿತೇ. ಆದರೆ ಒಂದು ಸೂಕ್ಷ್ಮ ಗಮನಿಸಬೇಕು. `ತುಳು~ ಎಂಬುದು ಸರ್ವಜನರ ವ್ಯವಹಾರದ ಭಾಷೆ, ಮನೆಮಾತು ಅಲ್ಲದವರಿಗೆ ಮನೆಮಾತು ಅನಿಸುವ ಭಾಷೆ. ಅದು ತನ್ನೊಳಗೆ ಮಾಡಿಕೊಂಡ ವಿಶಾಲ ಭಾಷಿಕ, ಸಾಂಸ್ಕೃತಿಕ ಮತ್ತು `ಜೀವ ಅವಕಾಶ~ದಲ್ಲಿ ಕನ್ನಡ, ಕೊಂಕಣಿ, ಬ್ಯಾರಿ, ಮಲೆಯಾಳ ಇವುಗಳೆಲ್ಲ ಕೂಡು ಕುಟುಂಬಗಳನ್ನು ಶತಮಾನದಿಂದ ಮಾಡಿವೆ!ಕರಾವಳಿಯ ಈ ಭಾಷಿಕ, ಸಾಂಸ್ಕೃತಿಕ, ಸತ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ದೂರದ ಕೇಂದ್ರವು ಗಡಿಯ ಪರಿಧಿಯನ್ನು ಎಷ್ಟೊಂದು ಸರಳವಾಗಿ ಅರ್ಥೈಸಿತ್ತು! ತುಳು, ಕೊಂಕಣಿ, ಬ್ಯಾರಿ ಭಾಷೆಗಳು ಸಮಪಾಲು ಕೇಂದ್ರದಿಂದ ಪಡೆಯತೊಡಗಿದುವು. `ಕಾಸರಗೋಡು ಏಳು ಭಾಷೆಗಳ ನಾಡು~ ಎಂಬುದು ಕಾಸರಗೋಡಿನ ಜನರು ಕೂಡಾ ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಲೋಗನ್. ಈ ಸ್ಲೋಗನ್ ಹೆಚ್ಚಾದಷ್ಟೂ ತಿರುವನಂತಪುರಕ್ಕೆ ಒಳ್ಳೆಯದಾಗುತ್ತದೆ. ಕಾಸರಗೋಡಿನ ಕನ್ನಡ ಮಾಧ್ಯಮ ಮತ್ತು ಆ ಮಣ್ಣಿನಲ್ಲಿದ್ದ ತುಳುವಿನ ಸಹಜ ಜೀವಂತಿಕೆಗಳು ಮರೆಯಾಗುತ್ತದೆ.

 

ಭಾಷೆಗಳ ಬಹುರೂಪದ ಹೆಗ್ಗಳಿಕೆಯ ಭಾರವೇ ಇಲ್ಲಿಯ ಕನ್ನಡ ಮತ್ತು ತುಳುವನ್ನು ಏಳರಲ್ಲಿ ಒಂದಾಗಿ ಕರಗಿ ಕುಳಿತು ಸಮಪಾಲು, ಸಮಬಾಳು ಪಡೆಯಲು ಒತ್ತಾಯಿಸುತ್ತವೆ. ಕೊನೆಗೆ ಎರಡು ಮಾತುಗಳು ಉಳಿದಿವೆ. `ಇಂಗ್ಲೀಷು~ ಎಲ್ಲೆಡೆ ಮಾಧ್ಯಮವಾಗಿ ಆವರಿಸುವ ಈ ಕಾಲ. ಕಾಸರಗೋಡಿನಲ್ಲಿ ಕನ್ನಡದ ಕತೆ ಮುಗಿಸುವುದು ಮಲೆಯಾಳವೊಂದೇ ಅಲ್ಲ-ಎಂಬುದೇ ಇವುಗಳಲ್ಲಿ ಮೊದಲ ಮಾತು.ಹೌದು, ಜಾಗತೀಕರಣದ, ಆಂಗ್ಲೀಕರಣದ ಭಯದಲ್ಲಿ ಮಲೆಯಾಳವನ್ನು ಕಡ್ಡಾಯ ಮಾಡಿ ಕಾಪಾಡಲು ಕೇರಳ ಮುಂದಾಗುವಾಗ ತನ್ನ ಗಡಿಯ ವಿಶಿಷ್ಟತೆಗಳನ್ನು ಗಮನಿಸುವುದಿಲ್ಲವಲ್ಲಾ? ಅಂಚಿನ ಸಂಸ್ಕೃತಿಗಳ ಪರ ಮಾತಾಡುವ ಎಷ್ಟೊಂದು ಎಡಪಂಥೀಯರು ಚಿಂತಕರು ಕೇರಳದಿಂದ ಬಂದಿಲ್ಲ!

ಆದರೆ ಅವರು ಕಾಸರಗೋಡಿನ ಕನ್ನಡದ ಪರ ಮಾತಾಡಿದ್ದು ನನಗೆ ತಿಳಿದಿಲ್ಲ.`ನಾವು ಬಲಶಾಲಿ ಮಲೆಯಾಳ ಕಲಿತರೆ ಏನು ತಪ್ಪು? ಅಲ್ಲಿ ಆಡಳಿತ, ಸಾರ್ವಜನಿಕ ಸೌಲಭ್ಯ, ಸಮೂಹ ಮಾಧ್ಯಮ ಎಲ್ಲವೂ ಚೆನ್ನಾಗಿದೆ-ವ್ಯವಸ್ಥಿತವಾಗಿದೆ. ಹೊಟ್ಟೆಗೆ ಅನ್ನ ಸಿಗುತ್ತದೆ!~-ಇದು ಎರಡನೆಯ ಮಾತು. ಹೌದು, ಕನ್ನಡದೊಂದಿಗೆ ಚೆನ್ನಾಗಿ ಮಲೆಯಾಳ ಕಲಿತು, ವಿಶಿಷ್ಟ ಕಾಸರಗೋಡಿಗತನವನ್ನು ಮಲೆಯಾಳದಲ್ಲೇ ಕೂಗಿ ಕೂಗಿ ಹೇಳಿದ್ದರೆ ಕೇಂದ್ರಕ್ಕೆ ಕೇಳುತ್ತಿತ್ತು- ಅರ್ಥವಾಗುತ್ತಿತ್ತು! ಈ `ಒಳಸಂಚು~ ಮಾಡಬಹುದೆಂಬ ಜಾಣ್ಮೆ ಪರಿಧಿಯಲ್ಲಿ ಬಾಳುವವರಿಗೆ ಹೊಳೆಯಲಿಲ್ಲ.ಗೊತ್ತಿಲ್ಲ. ಇಂದಿನ ಶನಿವಾರ ಕಾಸರಗೋಡು ನಗರದ ಬೀದಿ ಬೀದಿಗಳನ್ನು ಕನ್ನಡ ಮಾಧ್ಯಮಿಗಳು ಒಂದು ಗಂಟೆ ತಮ್ಮ ಸುಪರ್ದಿಯಲ್ಲಿ ಇಟ್ಟಾರಾ? ಕಾಸರಗೋಡಿನಲ್ಲಿ ಹೋಗೊಂದು ಅನ್ಯಾಯ ನಡೆದು ಹೋಯಿತೆಂದು ಹತ್ತೇ ಕಿ.ಮೀ. ಗಡಿಯ ಈಚೆ ಕರ್ನಾಟಕದಲ್ಲಿ ನೆಮ್ಮದಿಯಲ್ಲಿ ಬಾಳುವವರಿಗೆ ಒಂದು ನೆನಪಾದರೂ ಉಳಿದು ಹೋದೀತಾ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry