ಪೀಠವೇರಲು ಸಜ್ಜಾಗುತ್ತಿರುವ ಗಣಪತಿ

7

ಪೀಠವೇರಲು ಸಜ್ಜಾಗುತ್ತಿರುವ ಗಣಪತಿ

Published:
Updated:

ಕೊಪ್ಪಳ: ಗಣೇಶ ಚತುರ್ಥಿಗೆ ಇನ್ನು ಒಂದು ವಾರವಷ್ಟೇ ಬಾಕಿ ಇದೆ. ನಗರದಲ್ಲಿ ಪುಟ್ಟ, ದೊಡ್ಡ ಗಣೇಶ ಮೂರ್ತಿಗಳು ಅಲಂಕೃತ ಪೀಠವೇರಲು ಬಣ್ಣ ಬಳಿದುಕೊಂಡು ಸಜ್ಜಾಗಿ ನಿಂತಿವೆ.ಗಣೇಶ ಹಬ್ಬದ ಸಂಭ್ರಮಕ್ಕೆ ಮುಖ್ಯವಾಗಿ ಬೇಕಾದ ಗಣೇಶ ವಿಗ್ರಹದ ಸಿದ್ಧತೆ ಎರಡು ಮೂರು ತಿಂಗಳ ಹಿಂದೆಯೇ ನಡೆದಿರುತ್ತದೆ.

ಎಲ್ಲ ನಗರಗಳಂತೆಯೇ ಕೊಪ್ಪಳದಲ್ಲಿಯೂ ಸಾಕಷ್ಟು ಗಣೇಶ ವಿಗ್ರಹಗಳು ಸಿದ್ಧಗೊಳ್ಳುತ್ತಿವೆ. ಕಲಾವಿದರ ಮನೆಯಂಗಳದಲ್ಲಿ ಸಾಲಾಗಿ ಕುಳಿತು `ಮೇಕಪ್' ಮಾಡಿಕೊಳ್ಳುತ್ತಿವೆ. ಮುಖ್ಯರಸ್ತೆಯ ಬಳಿಯ ಅಂಗಡಿಯಲ್ಲಿಯೂ ಬೃಹತ್ ಗಣೇಶ ವಿಗ್ರಹಗಳನ್ನು ಕಾಣಬಹುದು.ಕಿನ್ನಾಳ ರಸ್ತೆಯ ಕಲ್ಯಾಣ ನಗರದಲ್ಲಿ ಸಂಗಯ್ಯ ವಸ್ತ್ರದ್ ಕುಟುಂಬದವರು ಸುಮಾರು 24 ವರ್ಷಗಳಿಂದ ಗಣೇಶ ವಿಗ್ರಹ ತಯಾರಿಸುತ್ತಿದ್ದಾರೆ. ಹಿಂದೆ ಸರ್ಕಾರಿ ಅಧಿಕಾರಿಯಾಗಿದ್ದ ವಸ್ತ್ರದ್ ನಿವೃತ್ತಿಯ ನಂತರವೂ ಗಣೇಶ ತಯಾರಿಕೆಯನ್ನು ಮುಂದುವರಿಸಿದ್ದಾರೆ. ಪುತ್ರರಾದ ವಿಜಯ ವಸ್ತ್ರದ್, ಲಲಿತಕಲಾ ಪದವೀಧರ ಮನೋಜ್ ವಸ್ತ್ರದ್, ವಿನೋದ್, ಸಂಜಯ್ ವಸ್ತ್ರದ್ ಜತೆಗೆ ಮನೆಮಂದಿಯೆಲ್ಲಾ ಸೇರಿ ಗಣೇಶ ತಯಾರಿಸುವುದು ವಿಶೇಷ.ಹಿಂದೆ ಮಣ್ಣಿನ ಗಣೇಶ ತಯಾರಿಸುತ್ತಿದ್ದೆವು. ಈಗ ಪ್ಲಾಸ್ಟರ್ ಆಫ್ ಪ್ಯಾರೀಸ್‌ನ್ನು ಬಳಕೆ ಮಾಡುತ್ತಿದ್ದೇವೆ. ಇದು ಹಗುರ ಮತ್ತು ಒಯ್ಯಲು ಸುಲಭ, ಜನರಿಂದ ಈ ಮೂರ್ತಿಗಳಿಗೆ ಹೆಚ್ಚು ಬೇಡಿಕೆಯಿದೆ ಎನ್ನುತ್ತಾರೆ ವಿಜಯ್‌ಕುಮಾರ್ ವಸ್ತ್ರದ್.ಮಣ್ಣಿನ ಗಣೇಶನನ್ನೇ ತಯಾರಿಸಬೇಕು, ಹಾನಿಕಾರಕ ಬಣ್ಣ ಬಳಸಬಾರದು ಎಂದು ಸರ್ಕಾರದ ಆದೇಶವಿದೆಯಲ್ಲಾ ಎಂದು ಪ್ರಶ್ನಿಸಿದರೆ, ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ನೀರಿಗೆ ಹಾನಿಯಿಲ್ಲ. ಕರಗುವುದು ಸ್ವಲ್ಪ ನಿಧಾನ ಅಷ್ಟೇ. ನಾವು ವಾಟರ್‌ಕಲರ್ ಮಾತ್ರ ಬಳಸುತ್ತೇವೆ. ಹಾಗಾಗಿ ಅದರಲ್ಲಿ ವಿಷಕಾರಕ ಅಂಶಗಳು ಇರುವುದಿಲ್ಲ ಎಂದು ವಿಜಯಕುಮಾರ್ ನುಡಿಯುತ್ತಾರೆ. ಮೂರು ತಿಂಗಳ ಮೂರ್ತಿ ತಯಾರಿಕೆ ಕಾಯಕದ ನಂತರ ಅಲಂಕಾರ, ಛಾಯಾಗ್ರಹಣ ಸೇರಿದಂತೆ ಇತರ ಕಲಾ ವೃತ್ತಿಗಳಲ್ಲಿ ಈ ಕುಟುಂಬ ತೊಡಗಿಕೊಳ್ಳುತ್ತದೆ.ಕೊಪ್ಪಳ ನಗರವೊಂದರಲ್ಲೇ ಸುಮಾರು 50ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೊಳ್ಳುತ್ತವೆ. ಅಲ್ಲದೇ ಮನೆಗಳಲ್ಲಿ ಆರಾಧಿಸುವವರೂ ಇದ್ದಾರೆ. ಹಾಗಾಗಿ ನಮ್ಮಲ್ಲಿ ಸುಮಾರು 125ರಿಂದ 150 ಮೂರ್ತಿಗಳು ತಯಾರಾಗಿ ಮಾರಾಟಗೊಳ್ಳುತ್ತವೆ. ಪುಟ್ಟ ಗಣೇಶನಿಂದ ಹಿಡಿದು 12 ಅಡಿ ಗಾತ್ರದವರೆಗೂ ಗಣೇಶ ತಯಾರಾಗುತ್ತದೆ. ಗಾತ್ರದ ಆಧಾರದಲ್ಲಿ ರೂ 3 ಸಾವಿರದಿಂದ 14 ಸಾವಿರದವರೆಗೆ ಬೆಲೆಯಿದೆ ಎಂದು ವಸ್ತ್ರದ್ ವಿವರಿಸಿದರು.ಕೊಪ್ಪಳ, ಭಾಗ್ಯನಗರ, ಹೊಸಪೇಟಿ, ಗಂಗಾವತಿ, ಗದಗ ಜಿಲ್ಲೆಯ ಅಣ್ಣಿಗೇರಿ, ಸಂಡೂರಿನಿಂದ ಗ್ರಾಹಕರು ಬಂದು ಗಣೇಶ ವಿಗ್ರಹ ಕೊಂಡೊಯ್ಯುತ್ತಾರೆ.ಮಣ್ಣಿನ ಗಣೇಶನಿಗೆ ಕೊನೇ ಕ್ಷಣದ

ಬೇಡಿಕೆ
: ಇಲ್ಲಿನ ಜವಾಹರ ರಸ್ತೆಯಲ್ಲಿ (ಕೆನರಾ ಬ್ಯಾಂಕ್ ಹಿಂಭಾಗ) ಮಾಧವ ಪಾಲ್ ಅವರು ಕೋಲ್ಕತಾದಿಂದ ಬಂದು ಇಲ್ಲಿ ಮಣ್ಣಿನ ವಿಗ್ರಹ ತಯಾರಿಸುತ್ತಾರೆ. ಒಂದಕ್ಕಿಂತ ಒಂದು ಅದ್ಭುತವಾದ ಮಣ್ಣಿನ ಕಲಾಕೃತಿಗಳು ಇಲ್ಲಿ ಅರಳಿವೆ. ಗೀತೋಪದೇಶ ಮಾಡುತ್ತಿರುವ ಗಣೇಶ, ಶಿವರೂಪಿ ಗಣೇಶ, ವೀಣಾಧಾರಿ ಗಣೇಶ, ಬಾಲ ಗಣಪ, ನಾಟ್ಯಗಣಪ... ಹೀಗೆ ಒಂದಕ್ಕಿಂತ ಒಂದು ಸೊಗಸಾದ ಮೂರ್ತಿಗಳು ಇಲ್ಲಿವೆ. ಸ್ವಲ್ಪಮಟ್ಟಿಗೆ ಉತ್ತರ ಭಾರತದ ಶೈಲಿ ಇಲ್ಲಿ ಇಣುಕುತ್ತದೆ.ಆಶ್ಚರ್ಯವೆಂದರೆ ಮಾಧವ ಪಾಲ್ ಹೇಳುವ ಪ್ರಕಾರ ಇಲ್ಲಿ ಮೇಧಾರ ಜನಾಂಗದವರು ಪ್ರತಿಷ್ಠಾಪಿಸುವ ಗಣೇಶನನ್ನು ಹೊರತುಪಡಿಸಿ ಯಾವ ಮೂರ್ತಿಗಳಿಗೂ ಇದುವರೆಗೆ ಮುಂಗಡ ಬುಕ್ಕಿಂಗ್ ಆಗಿಲ್ಲ. ಕಳೆದ ವರ್ಷವೂ ಹೀಗೇ ಆಗಿತ್ತು. ಆದರೆ, ಕೊನೇ ಘಳಿಗೆಯಲ್ಲಿ ಎಲ್ಲವೂ ಮಾರಾಟ ಆಗಿತ್ತು. ಎಲ್ಲವೂ ಗಣೇಶನ ಕೃಪೆ ಎಂದು ನಕ್ಕುಬಿಟ್ಟರು ಮಾಧವ್ ಪಾಲ್.ಇಲ್ಲಿ ಗಣೇಶನ ಹಬ್ಬದ ಬಳಿಕ ಕೋಲ್ಕತಾಕ್ಕೆ ವಾಪಸಾಗಿ ದುರ್ಗಾ ಮೂರ್ತಿ ತಯಾರಿಕೆಯಲ್ಲಿ ಮಗ್ನರಾಗುತ್ತಾರೆ. ಇವರ ಜತೆಗೂ ಐವರು ಕೆಲಸ ಮಾಡುತ್ತಾರೆ.ಒಟ್ಟಿನಲ್ಲಿ ಆಧುನಿಕತೆಯ ಭರಾಟೆ ಗಣೇಶನಿಗೂ ತಟ್ಟಿದೆ. ಸ್ಪರ್ಧೆ ಇಲ್ಲಿಯೂ ಇದೆ. ಅಂತಿಮವಾಗಿ ಭಕ್ತರಿಗೆ ಗಣೇಶನ ಕೃಪೆ ಬೇಕು. ಕಲಾವಿದರಿಗೆ ಅವನ ಭಕ್ತರ `ಕೃಪೆ' ಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry