ಸೋಮವಾರ, ನವೆಂಬರ್ 18, 2019
21 °C
ಏಳು ದಿನಕ್ಕೊಮ್ಮೆ ನೀರು ಪೂರೈಕೆ

ಪೀಪಾಯಿ ಖರೀದಿಗೆ ಮುಗ್ಗಿಬಿದ್ದ ಜನತೆ

Published:
Updated:

ಗಜೇಂದ್ರಗಡ: ಜೀವಜಲಕ್ಕೆ ತತ್ವಾರ ಉಂಟಾದ ಪರಿಣಾಮ ಪೀಪಾಯಿ  (ನೀರು ಸಂಗ್ರಹಿಸಿಟ್ಟುಕೊಳ್ಳುವ ಪ್ಲಾಸ್ಟಿಕ್ ಡ್ರಮ್ಮು) ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.ನಿರಂತರ ಬರದ ಹಿನ್ನೆಲೆಯಲ್ಲಿ ಜಲದಾಹ ನೀಗಿಸಲು ಸಹಕಾರಿಯಾಗಿದ್ದ ಕೊಳವೆ ಬಾವಿಗಳು ಬತ್ತಿ ಹೋಗಿವೆ. ತಲೆಮಾರುಗಳಿಂದಲೂ ಕೊಳವೆ ಬಾವಿಗಳಲ್ಲಿನ ಜೀವಜಲದಿಂದಲೇ ಜಲದಾಹ ನೀಗಿಸಿಕೊಳ್ಳುತ್ತಿದ್ದ ನಾಗರಿಕರಿಗೆ ಜಲಕ್ಷಾಮ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಅಂತರ್ಜಲ ಕುಸಿತದಿಂದಾಗಿ ತಾಲ್ಲೂಕು ಕೇಂದ್ರ ಗಜೇಂದ್ರಗಡ ನಗರದಲ್ಲಿ ಏಳು ದಿನ ಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ ನಾಗರಿಕರು ದೈನಂದಿನ ಬದುಕಿಗೆ ಅವಶ್ಯವಿರುವ ನೀರು ಸಂಗ್ರಹಿಸಿಕೊಳ್ಳಲು ಪಿಪಾಯಿಗಳ ಮೊರೆ ಹೋಗಿದ್ದಾರೆ.ಬೇಸಿಗೆ ಆರಂಭಕ್ಕೂ ಮುನ್ನ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ನಿತ್ಯ ನೀರು ಪೂರೈಕೆಯಾಗುತ್ತಿತ್ತು. ಗಜೇಂದ್ರಗಡ ನಗರದಲ್ಲಿ ಎರಡು ದಿನಕ್ಕೊಮ್ಮೆ ಸಮರ್ಪಕ ನೀರು ಪೂರೈಕೆಯಾಗುತ್ತಿತ್ತು. ಆದರೆ, ಕಳೆದ ಒಂದು ತಿಂಗಳಿನಿಂದ ತಾಲ್ಲೂಕಿನಲ್ಲಿ 35 ರಿಂದ 39 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವಿರುವುದರಿಂದ 300 ಅಡಿ ಆಳದಲ್ಲಿದ್ದ ಅಂತರ್ಜಲ 800 ಅಡಿ ಆಳಕ್ಕೆ ಕುಸಿದಿದೆ. ಮತ್ತೆ ಕೆಲ ಕೊಳವೆ ಬಾವಿಗಳು ಜಲವನ್ನೇ ಕಳೆದು ಕೊಂಡು ಬರಡಾಗಿ ನಿಂತಿವೆ. ಹೀಗಾಗಿ ಸದ್ಯ ತಾಲ್ಲೂಕಿನ ನಾಗರಿಕರಿಗೆ ಅವಶ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ಲ.ಪಿಪಾಯಿ ಖರೀದಿಗೆ ಮುಗ್ಗಿ ಬಿದ್ದ ಜನತೆ: ಒಬ್ಬ ವ್ಯಕ್ತಿಯ ದೈನಂದಿನ ಬದುಕಿಗೆ ಕನಿಷ್ಠ 40 ಲೀಟರ್ ನೀರು ಬೇಕು. ಆದರೆ, ಸ್ಥಳೀಯ ಆಡಳಿತಗಳು ಏಳು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿವೆ.  ಒಂದು ಕುಟುಂಬದಲ್ಲಿ ಕನಿಷ್ಠ ಆರೇಳು ಜನ ಇರುತ್ತಾರೆ. ಹೀಗಾಗಿ ಒಂದು ಕುಟುಂಬಕ್ಕೆ ಏಳು ದಿನಕ್ಕೆ 1,960  ಲೀಟರ್ ನೀರಿನ ಅವಶ್ಯಕತೆ ಇದೆ. ಸದ್ಯ ಸ್ಥಳೀಯ ಆಡಳಿತಗಳು ಒದಗಿಸುವ ನೀರು ಎರಡು ದಿನಕ್ಕೂ ಸಾಕಾಗುತ್ತಿಲ್ಲ.  ಹೀಗಾಗಿ ನೀರು ಸಂಗ್ರಹದ ಉದ್ದೇಶದಿಂದ ಪಿಪಾಯಿಗಳನ್ನು ಖರೀದಿಸುತ್ತಿದ್ದಾರೆ.ಆಂಧ್ರ ಪೀಪಾಯಿಗಳಿಗೆ ಬೇಡಿಕೆ: ತಾಲ್ಲೂಕಿನಲ್ಲಿ ಜಲಕ್ಷಾಮ ತೀವ್ರಗೊಂಡ ಹಿನ್ನೆಲೆಯಲ್ಲಿ ಆಂಧ್ರದ ನಾಲ್ಗೊಂಡಾ ಜಿಲ್ಲೆಯ ಬೋನರಿರಾ ತಾಲ್ಲೂಕಿನ ಪೊಚಂಪಲ್ಲಿ ಗ್ರಾಮದ ನೂರಾರು ಕುಟುಂಬಗಳು ಗಜೇಂದ್ರಗಡ ತಾಲ್ಲೂಕಿನಾದ್ಯಂತ ಪಿಪಾಯಿ ಮಾರಾಟ ಮಾಡುತ್ತಿವೆ.

ಗಜೇಂದ್ರಗಡ ನಗರದ ರೋಣ ರಸ್ತೆಯಲ್ಲಿನ ಪುರಸಭೆಯ ಬಯಲು ಜಾಗದಲ್ಲಿ ನೆಲೆಸಿರುವ ಈ ಕುಟುಂಬಗಳು ಲಾರಿಗಳ ಮೂಲಕ ಲಕ್ಷಾಂತರ ಪಿಪಾಯಿಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿವೆ.ಕಡಿಮೆ ಬೆಲೆಗೆ ಪಿಪಾಯಿ: ಗಜೇಂದ್ರಗಡ ನಗರದ ಪಿಪಾಯಿ ಮಾರಾಟಗಾರರು 500 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಪಿಪಾಯಿಯನ್ನು ರೂ. 700 ರಿಂದ 800ಗೆ ಮಾರಾಟ ಮಾಡುತ್ತಿದ್ದರು. ಆದರೆ, ಆಂಧ್ರದ ಪಿಪಾಯಿ ಮಾರಾಟಗಾರರು 500 ಲೀಟರ್ ಸಾಮರ್ಥ್ಯದ ಪಿಪಾಯಿ, 100 ಲೀಟರ್ ಸಾಮರ್ಥ್ಯದ  ಪಿಪಾಯಿ ಹಾಗೂ ಎರಡು ಕೊಡಗಳನ್ನು ಕೇವಲ ರೂ. 1,000ಗೆ ನೀಡುತ್ತಿದ್ದಾರೆ.`ಗಜೇಂದ್ರಗಡ ಮಾರುಕಟ್ಟೆಯಲ್ಲಿ ಒಂದು ಕೊಡದ ಬೆಲೆ 80 ರೂಪಾಯಿ ಇದೆ.  ಇಲ್ಲಿ ಎರಡು ಪಿಪಾಯಿ, ಎರಡು ಕೊಡಗಳು ಕೇವಲ ಒಂದು ಸಾವಿರ ರೂಪಾಯಿಗೆ ದೊರೆಯುತ್ತಿವೆ. ಇವುಗಳನ್ನೇ ಮರುಕಟ್ಟೆಯಲ್ಲಿ ಖರೀದಿಸಲು ಹೋದರೆ ಕನಿಷ್ಠ ರೂ. 2,000 ಬೇಕು. ಆದ್ದರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆ ಯುವ ಪಿಪಾಯಿ, ಕೊಡಗಳನ್ನು ಖರೀದಿಸಲು ಇಲ್ಲಿಗೆ ಬಂದಿದ್ದೇವೆ' ಎನ್ನುತ್ತಾರೆ ಕಾಲಕಾಲೇಶ್ವರ ಗ್ರಾಮದ ಶಶಿಧರ ಹೂಗಾರ.ಗಜೇಂದ್ರಗಡವನ್ನು ಕೇಂದ್ರ ಸ್ಥಳವನ್ನಾಗಿಸಿಕೊಂಡ ಈ ಪಿಪಾಯಿ ವ್ಯಾಪಾರ ಸ್ಥರು ಟಂಟಂಗಳಲ್ಲಿ ಪಿಪಾಯಿಗಳನ್ನು ಹೇರಿಕೊಂಡು ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ತೆರಳಿ ವ್ಯಾಪಾರ ನಡೆಸುತ್ತಿದ್ದಾರೆ.`ಈವರೆಗೂ ಎರಡು ಲಕ್ಷಕ್ಕೂ ಅಧಿಕ ಪಿಪಾಯಿ ಸೆಟ್‌ಗಳನ್ನು ಮಾರಾಟ ಮಾಡಿದ್ದೇವೆ. ಪಿಪಾಯಿಗೆ ತಾಲ್ಲೂಕಿನಲ್ಲಿ ಭಾರೀ ಬೇಡಿಕೆ ಇದೆ. ಹೀಗಾಗಿ ವ್ಯಾಪಾರವೂ ಜೋರಾಗಿದೆ' ಎಂದು ಪಿಪಾಯಿ ಮಾರಾಟಗಾರ ಸರಿಸ್ ಸರಿಕೊಂಡ `ಪ್ರಜಾವಾಣಿ'ಗೆ ವಿವರಿಸಿದರು.

ಚಂದ್ರಕಾಂತ ಬಾರಕೇರ

ಪ್ರತಿಕ್ರಿಯಿಸಿ (+)