ಗುರುವಾರ , ಮಾರ್ಚ್ 4, 2021
18 °C

ಪುಂಗಿಯಲ್ಲಿ ವಿಕ್ಟರಿ ಸ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಂಗಿಯಲ್ಲಿ ವಿಕ್ಟರಿ ಸ್ವರ

‘ರ್‍್ಯಾಂಬೊ’ ನಿರ್ದೇಶಿಸಿ, ‘ವಿಕ್ಟರಿ’ಗೆ ಕಥೆ ಕೊಟ್ಟು ಯಶಸ್ವಿಯಾದ ಎಂ.ಎಸ್. ಶ್ರೀನಾಥ್, ಮತ್ತೊಂದು ಹಾಸ್ಯಮಯ ಸಿನಿಮಾವನ್ನು ಸಿದ್ಧಪಡಿಸಿಕೊಂಡು ತಂದಿದ್ದಾರೆ. ಈ ಸಲ ಅವರಿಗೆ ಜತೆಯಾಗಿರುವವರು ಕೋಮಲ್.ಇದೇ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ‘ಪುಂಗಿದಾಸ’ ಚಿತ್ರದ ಬಗ್ಗೆ ವಿವರ ನೀಡಲು ಕರೆದಿದ್ದ  ಸುದ್ದಿಗೋಷ್ಠಿಯಲ್ಲಿ ಮಾಹಿತಿ ಪೂರೈಕೆ ಹೊಣೆ ಹೊತ್ತಿದ್ದು ಕೋಮಲ್ ಅವರೇ. ಚಿತ್ರ ನಿರ್ಮಾಣದ ಕಷ್ಟ–ಸುಖಗಳನ್ನು ನಿರ್ದೇಶಕ ಅಥವಾ ನಿರ್ಮಾಪಕರಿಗಿಂತ ಕೋಮಲ್ ಅವರೇ ನಯವಾದ ಮಾತುಗಳಲ್ಲಿ ತೆರೆದಿಟ್ಟರು.ಹಿರಿಯ ಕಲಾವಿದರು ‘ಪುಂಗಿದಾಸ’ದಲ್ಲಿ ಪಾಲ್ಗೊಂಡಿರುವುದು ಸಿನಿಮಾದ ಶಕ್ತಿ ಹೆಚ್ಚಿಸಲಿದೆ ಎಂಬ ನಿರೀಕ್ಷೆ ನಿರ್ದೇಶಕ ಶ್ರೀನಾಥ್ ಅವರದು. ‘ತಬಲಾ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಶ್, ಪದ್ಮಜಾ ರಾವ್ ತಾರಾಗಣದಲ್ಲಿದ್ದಾರೆ. ಹಿರಿಯ ಕಲಾವಿದರಾದ ಸುದರ್ಶನ್ ಹಾಗೂ ಸಾಹುಕಾರ ಜಾನಕಿ ಅವರು ಹೆಜ್ಜೆ ಹಾಕಿರುವ ಬ್ಲ್ಯಾಕ್ ಅಂಡ್ ವೈಟು ಎಂಬ ರೆಟ್ರೋ ಶೈಲಿಯ ಹಾಡು ಈಗಾಗಲೇ ಯೂಟ್ಯೂಬಿನಲ್ಲಿ ಹಿಟ್ ಆಗಿದೆ. ಇದು ಸಿನಿಮಾ ಗೆಲ್ಲುವ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ’ ಎಂದ ಅವರು, ಬಿ.ಸಿ. ಪಾಟೀಲ್ ಅವರಿಗೆ ‘ಪುಂಗಿದಾಸ’ದಲ್ಲಿ ವಿಶಿಷ್ಟ ಪಾತ್ರ ನೀಡಿರುವುದಾಗಿ ಹೇಳಿಕೊಂಡರು.ಜೀವನದಲ್ಲಿ ನಡೆದ ಅಹಿತಕರ ಘಟನೆಗಳಿಂದ ಸೋತು ಹೋಗಿದ್ದ ಫರ್ಹಾನ್ ರೋಶನ್ ಅವರಿಗೆ ಹುರುಪು ತುಂಬಿದ್ದು ಕೋಮಲ್. ‘ಪುಂಗಿದಾಸಕ್ಕೆ ನೀನೇ ಸಂಗೀತ ಸಂಯೋಜಿಸುವಂತೆ ಬಾ’ ಅಂತ ಆಹ್ವಾನಿಸಿ ಕರೆದುಕೊಂಡು ಬಂದಿದ್ದಾರೆ. ಇದನ್ನು ಸ್ವತಃ ಹೇಳಿಕೊಂಡಿದ್ದು ರೋಶನ್. ಚಿತ್ರದ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಅವರಿಗೆ, ಸುದರ್ಶನ್–ಸಾಹುಕಾರ್ ಜಾನಕಿ ಅಭಿನಯಿಸಿದ ಹಾಡು ಹೆಚ್ಚು ಖುಷಿ ಕೊಟ್ಟಿದೆಯಂತೆ.ಈವರೆಗೆ ವಿತರಕರಾಗಿದ್ದ ಸದಾಶಿವ ಅವರು, ‘ಪುಂಗಿದಾಸ’ಕ್ಕೆ ಬಂಡವಾಳ ಹಾಕಿದ್ದಾರೆ. ಈಗಾಗಲೇ ಎರಡು ಚಿತ್ರ ಗೆಲುವು ಪಡೆಯಲು ಕಾರಣರಾದ ಶ್ರೀನಾಥ್, ಈ ಚಿತ್ರದೊಂದಿಗೆ ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂಬ ಆಶಾವಾದ ಅವರದು. ರಾಜ್ಯದ 120 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಅವರು ನೀಡಿದರು.ಶೂಟಿಂಗ್‌ಗೆ ಬರುವ ಕಲಾವಿದರು ಪ್ರಚಾರಕ್ಕೆ ಮಾತ್ರ ಬರುವುದಿಲ್ಲ ಎಂಬ ನೋವು ಕೋಮಲ್ ಅವರನ್ನು ಕಾಡಿದಂತಿತ್ತು. ನಾಯಕಿ ಆಸ್ಮಾ ಸೇರಿದಂತೆ ಎಲ್ಲ ಕಲಾವಿದರ ಪೈಕಿ ಕೋಮಲ್‌ ಒಬ್ಬರೇ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ‘ಕಲಾವಿದರು ಬಂದರೆ ಚಿತ್ರತಂಡಕ್ಕೆ ಸ್ಫೂರ್ತಿ ಹಾಗೂ ಸಿನಿಮಾಕ್ಕೆ ಪ್ರಚಾರ ಸಿಗುತ್ತದೆ. ಆದರೆ...’ ಎಂದು ಕೋಮಲ್ ತಮ್ಮ ಮಾತನ್ನು ಅಷ್ಟಕ್ಕೇ ನಿಲ್ಲಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.