ಪುಂಡರ ಮೇಲೆ ಪೊಲೀಸ್ ಹದ್ದಿನ ಕಣ್ಣು

ಶುಕ್ರವಾರ, ಮೇ 24, 2019
23 °C

ಪುಂಡರ ಮೇಲೆ ಪೊಲೀಸ್ ಹದ್ದಿನ ಕಣ್ಣು

Published:
Updated:

ಬೆಳಗಾವಿ: ನಗರದಲ್ಲಿ ಅಡ್ಡಾದಿಡ್ಡಿ ವಾಹನ ಓಡಿಸುವ ಪುಂಡರೇ, ಸಿಗ್ನಲ್ ಲೆಕ್ಕಿಸದೇ ಮುನ್ನುಗ್ಗುವ ಭಂಡರೇ. ಇನ್ನು ಮೇಲೆ ಸ್ಥಳದಲ್ಲಿರುವ ಸಂಚಾರಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಬಹುದು ಎಂದುಕೊಂಡರೆ ಅದು ನಿಮ್ಮ ಮೂರ್ಖತನ!ಹುಶಾರ್..! ನಗರದ ಪ್ರಮುಖ ವೃತ್ತಗಳಲ್ಲಿ ಇದೀಗ ಪೊಲೀಸ್ ಹದ್ದಿನ ಕಣ್ಣು ವಾಹನ ಸಂಚಾರರ ಚಲನ-ವಲನಗಳನ್ನು ಎಡೆಬಿಡದೆ ವೀಕ್ಷಿಸುತ್ತಿದೆ. ನಗರದ ಆಯ್ದ ಸ್ಥಳಗಳಲ್ಲಿ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೀಗಾಗಿ ಸಂಚಾರಿ ನಿಯಮ ಉಲ್ಲಂಘಿಸಿ ನೀವು ಪರಾರಿಯಾಗಲು ಯತ್ನಿಸಿದರೂ, ಈ ಹದ್ದಿನ ಕಣ್ಣಿನಲ್ಲಿ ದಾಖಲಾದ ದೃಶ್ಯವನ್ನು ಆಧರಿಸಿ ನಿಮ್ಮನ್ನು ಪೊಲೀಸರು ಸುಲಭವಾಗಿ ಹಿಡಿದುಬಿಡುತ್ತಾರೆ.ಸಂಚಾರಿ ನಿಯಮ ಉಲ್ಲಂಘಿಸುವವರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಗಲಾಟೆ ಮಾಡಿ ಬಿಗುವಿನ ವಾತಾವರಣ ಸೃಷ್ಟಿಸುವವರ ಮೇಲೆ ನಿಗಾ ಇಡಲು ಪೊಲೀಸ್ ಇಲಾಖೆ ನಗರದಲ್ಲಿ ಈ ವಿನೂತನ ಕ್ರಮವನ್ನು ಕೈಗೊಳ್ಳುತ್ತಿದೆ.ನಗರದ ಆಯ್ದ 5 ಕಡೆಗಳಲ್ಲಿ ಒಂದು ತಿಂಗಳ ಹಿಂದೆಯೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಪೊಲೀಸ್ ಇಲಾಖೆ, ಪ್ರಾಯೋಗಿಕವಾಗಿ ಇದರ ಪರಿಶೀಲನೆ ನಡೆಸುತ್ತಿತ್ತು. ಇದರ ಯಶಸ್ಸನ್ನು ಕಂಡು, ಇದೀಗ ನಗರದ ಇನ್ನಿತರ ಪ್ರಮುಖ ಸ್ಥಳಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಿದೆ.ನಿತ್ಯ ಒಂದಲ್ಲ ಒಂದು ಪ್ರತಿಭಟನೆ ನಡೆಯುವ ಚನ್ನಮ್ಮ ವೃತ್ತ, ಸದಾ ಜನಸಂದಣಿ ಹೆಚ್ಚಿರುವ ಬಸ್‌ನಿಲ್ದಾಣ, ಕಾಕತಿವೇಸ್ ರಸ್ತೆ ಮತ್ತು ಸೂಕ್ಷ್ಮ ಪ್ರದೇಶವಾದ ದರ್ಬಾರ್‌ಗಲ್ಲಿ ಹಾಗೂ ಚವಾಟೆಗಲ್ಲಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ನಿರಂತರವಾಗಿ ವಾಹನಗಳ ಚಲನವಲನಗಳ ದೃಶ್ಯಗಳನ್ನು ದಾಖಲಿಸುತ್ತವೆ.ಏನಿದರ ವಿಶೇಷ?: ನಗರದ ಪ್ರಮುಖ ವೃತ್ತಗಳಲ್ಲಿ ಎತ್ತರದ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಅತ್ಯಾಧುನಿಕವಾಗಿದ್ದು, ಇದು 24 ಗಂಟೆಗಳ ಕಾಲ 360 ಡಿಗ್ರಿಯಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತದೆ. ಇಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಚಿತ್ರೀಕರಿಸುವ ದೃಶ್ಯಗಳು ಇಂಟರ್‌ನೆಟ್ ಸಂಪರ್ಕದ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಮ್‌ನಲ್ಲಿರುವ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿಕೊಳ್ಳುತ್ತದೆ.ಕಂಟ್ರೋಲ್ ರೂಮ್‌ನಲ್ಲೇ ಕುಳಿತು ಕ್ಯಾಮೆರಾ ಜೂಮ್ ಮಾಡಲು ಅವಕಾಶ ಇರುವುದರಿಂದ ನಿಯಮ ಉಲ್ಲಂಘಿಸುವ ವಾಹನಗಳ ಗುರುತು ಪತ್ತೆ ಹಚ್ಚಲು ಸುಲಭ ಸಾಧ್ಯ. ಕಂಟ್ರೋಲ್ ರೂಮ್‌ನಲ್ಲಿರುವ ಸಿಬ್ಬಂದಿ ತಕ್ಷಣ ವಾಕಿಟಾಕಿ ಮೂಲಕ ನಿಯಮ ಉಲ್ಲಂಘಿಸಿದವರ ವಿವರಗಳನ್ನು ಸ್ಥಳದಲ್ಲಿದ್ದ ಪೊಲೀಸ್‌ಗೆ ನೀಡಿ, ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲು ಸೂಚಿಸುತ್ತಾರೆ.ಇದರಿಂದಾಗಿ ನಿಯಮ ಉಲ್ಲಂಘಿಸುವ ವಾಹನ ಸಂಚಾರರು, ಸ್ಥಳದಲ್ಲಿದ್ದ ಪೊಲೀಸರಿಗೆ `ಕೈ ಬಿಸಿ~ ಮಾಡಿ  ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇಡೀ ದೃಶ್ಯವು ಕ್ಯಾಮೆರಾದಲ್ಲಿ ದಾಖಲಾಗುತ್ತಿರುವುದರಿಂದ ಪೊಲೀಸರು ಮುಲಾಜಿಲ್ಲದೇ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಬೇಕಾಗುತ್ತದೆ.“ನಗರದಲ್ಲಿ ಪ್ರಾಯೋಗಿಕವಾಗಿ ಐದು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದು ಯಶಸ್ವಿಯಾಗಿರುವುದರಿಂದ ಆರ್‌ಪಿಡಿ ವೃತ್ತ, ಗಣಪತಗಲ್ಲಿ, ರೈಲ್ವೆನಿಲ್ದಾಣ, ರವಿವಾರ ಪೇಟೆ, ಅಶೋಕಸ್ತಂಭ ವೃತ್ತ, ಬಾಜಿ ಮಾರ್ಕೆಟ್ ಸೇರಿದಂತೆ ಇನ್ನೂ 15 ಕಡೆ ಕ್ಯಾಮೆರಾ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.ಈ ಅತ್ಯಾಧುನಿಕ ಒಂದು ಕ್ಯಾಮೆರಾ ಅಳವಡಿಸಲು ಸುಮಾರು 5 ಲಕ್ಷ ರೂಪಾಯಿ ತಗಲುತ್ತದೆ. ಇನ್ನೂ 15 ಕ್ಯಾಮೆರಾ ಅಳವಡಿಸಲು ಸುಮಾರು 75 ಲಕ್ಷ ರೂಪಾಯಿ ಅಗತ್ಯವಿದ್ದು, ಈ ಬಗ್ಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೇವೆ.ಜೊತೆಗೆ ನೆರವು ನೀಡುವಂತೆ ಮಹಾನಗರ ಪಾಲಿಕೆಯನ್ನೂ ಕೋರಲಾಗುವುದು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.“ಕ್ಯಾಮೆರಾ ಅಳವಡಿಸಿದ ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ನಿತ್ಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡುತ್ತಿದ್ದೇವೆ.ವೃತ್ತಗಳಲ್ಲಿ ನಿಲುಗಡೆ ಗುರುತಿಸುವ ಗೆರೆಗಳು ಮಳೆಯಿಂದಾಗಿ ಮಾಸಿಹೋಗಿವೆ. ಈ ಗೆರೆ ಹಾಕಿದ ಬಳಿಕ ಕಟ್ಟುನಿಟ್ಟಿನಿಂದ ದಂಡ ಹಾಕುತ್ತೇವೆ” ಎಂದು ಚನ್ನಮ್ಮ ವೃತ್ತದಲ್ಲಿ ಕರ್ತವ್ಯನಿತರ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry