ಸೋಮವಾರ, ಜೂನ್ 21, 2021
23 °C

ಪುಂಡಾಟಿಕೆಯ ಪರಮಾವಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ಶುಕ್ರವಾರ ವಕೀಲರ ಗುಂಪೊಂದು ವಿದ್ಯುನ್ಮಾನ ಮಾಧ್ಯಮ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆ ಅತ್ಯಂತ ಅಮಾನುಷ.ಕರ್ತವ್ಯ ನಿರ್ವಹಣೆಗೆ ತೆರಳಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ವಕೀಲರಿಗೆ ಕಾರಣಗಳೇ ಇರಲಿಲ್ಲ. ಅವರನ್ನು ಪ್ರಚೋದಿಸುವಂತಹ ಘಟನೆಗಳೂ ನಡೆಯಲಿಲ್ಲ.ಆದರೂ ವಕೀಲರು ಅಕ್ಷರಶಃ ಸಮೂಹ ಸನ್ನಿಗೆ ಒಳಗಾದವರಂತೆ ವರ್ತಿಸಿದರು. ಮಾಧ್ಯಮ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರತ್ತ ಕಲ್ಲು, ಇಟ್ಟಿಗೆ ಎಸೆದು ಪುಂಡಾಟಿಕೆ ಮೆರೆದರು. ಪೊಲೀಸರ ಮೇಲೂ ಹಲ್ಲೆ ಮಾಡಿದರು. ಹಲ್ಲೆ ಮಾಡಿದ್ದು ಮಾತ್ರವಲ್ಲ ಅವರಲ್ಲಿ ಕೆಲವರನ್ನು ಕೋರ್ಟ್ ಆವರಣದಲ್ಲಿಯೇ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಅವರ ಈ ವರ್ತನೆ ಬೀದಿ ರೌಡಿಗಳಿಗಿಂತ ಕೆಟ್ಟದಾಗಿತ್ತು.ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಕೈ ಜೋಡಿಸಬೇಕಿದ್ದ ವಕೀಲರೇ ಮಾಧ್ಯಮದವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆ ಹಲ್ಲೆ ಮಾಡಿದ್ದು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಈ ಘಟನೆ ರಾಜ್ಯದಲ್ಲಿರುವ ಅರಾಜಕ ಪರಿಸ್ಥಿತಿಯ ಸೂಚಕ.

 

ಕೆಲವೇ ಮಂದಿ ವಕೀಲರು ತಮ್ಮ ವೃತ್ತಿಯ ಘನತೆಯನ್ನೇ ಮಣ್ಣುಪಾಲು ಮಾಡಿದರು. ವಕೀಲರ ಪುಂಡಾಟಿಕೆ ಹೊಸದಲ್ಲ. ಕಳೆದ ಜನವರಿಯಲ್ಲಿ ಇದೇ ವಕೀಲರು ಪೊಲೀಸರ ವಿರುದ್ಧ ಬೀದಿಗಿಳಿದು ರಸ್ತೆ ತಡೆ ನಡೆಸಿದಾಗಲೂ ಸಾರ್ವಜನಿಕರೊಂದಿಗೆ ಹೀಗೇ ವರ್ತಿಸಿದ್ದರು. ಆಗಲೂ ಪೊಲೀಸರು ಪುಂಡ ವಕೀಲರನ್ನು ನಿಯಂತ್ರಿಸಲಿಲ್ಲ.

 

ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನಷ್ಟೇ ನೀಡಿ ತಮ್ಮ ಕರ್ತವ್ಯ ಮರೆತರು. ಈ ಪ್ರಕರಣದ ಆರಂಭದ್ಲ್ಲಲೂ ಪೊಲೀಸರು ಅಸಹಾಯಕತೆ ಪ್ರದರ್ಶಿಸಿದ್ದರಿಂದ ವಕೀಲರ ಪುಂಡಾಟಿಕೆ ಹೆಚ್ಚಾಯಿತು.ಇಡೀ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಹೊಣೆಗೇಡಿಗಳಂತೆ ವರ್ತಿಸಿದ್ದಾರೆ. ಸಚಿವ ಅಶೋಕ್ ಗೃಹ ಖಾತೆಯ ನಿರ್ವಹಣೆಗೆ ಅನರ್ಹರು ಎಂಬುದನ್ನು ಅವರ ಮಾತು, ವರ್ತನೆಗಳೇ ಸಾಬೀತು ಮಾಡಿದವು. ಮುಖ್ಯಮಂತ್ರಿಗಳಿಗೆ ತಮ್ಮ ಸಹೋದ್ಯೋಗಿಗಳ ಮೇಲೆಯೇ ಯಾವುದೇ ನಿಯಂತ್ರಣ ಇಲ್ಲವಾದರೆ, ಗೃಹ ಸಚಿವರು ತಮ್ಮ ಇಲಾಖೆಗೆ ದಕ್ಷ ನಾಯಕತ್ವ ಕೊಡುವಲ್ಲಿ ವಿಫಲರಾಗಿದ್ದಾರೆ.ಹೀಗಾಗಿ ಕೆಲವೇ ಮಂದಿ ಪುಂಡ ವಕೀಲರನ್ನು ನಿಯಂತ್ರಿಸಲಾಗದಂಥ ಸ್ಥಿತಿಗೆ ಪೊಲೀಸರು ಮುಟ್ಟಿದರು. ಮುಖ್ಯಮಂತ್ರಿ ಮತ್ತು ಗೃಹಸಚಿವರ ಈ ನಿಷ್ಕ್ರಿಯತೆ ಇಡೀ  ಪೊಲೀಸ್ ಇಲಾಖೆಯ ಸ್ಥೈರ್ಯವನ್ನೇ ಕುಂದಿಸುವಂಥದು ಮತ್ತು ದೂರಗಾಮಿಯಾದ ಕೆಟ್ಟ ಪರಿಣಾಮ ಬೀರುವಂಥದು ಎನ್ನದೆ ವಿಧಿಯಿಲ್ಲ. ಇಂಥ ಸರ್ಕಾರದಿಂದ ಸಾರ್ವಜನಿಕರ ರಕ್ಷಣೆ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದರೆ ಅದು ವಿನಾಕಾರಣವಾದುದೇನೂ ಅಲ್ಲ.ಮಾಧ್ಯಮ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ವಕೀಲರನ್ನು ತಕ್ಷಣವೇ ಬಂಧಿಸಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲ. ಆರಂಭದಲ್ಲಿ ನಿಷ್ಕ್ರಿಯರಾಗಿದ್ದ ಪೊಲೀಸರು ಆನಂತರ, ಹಿಂಸಾಚಾರದಲ್ಲಿ ತೊಡಗಿದ್ದ ವಕೀಲರನ್ನು ನಿಯಂತ್ರಿಸಲು ಬಂದ ಒಬ್ಬಿಬ್ಬರು ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಸೇರಿದಂತೆ ನ್ಯಾಯಾಲಯದ ಆವರಣದಲ್ಲಿದ್ದವರನ್ನೆಲ್ಲ ಹಿಗ್ಗಾಮುಗ್ಗಾ ಥಳಿಸಿದ್ದು ಸಮರ್ಥನೀಯ ಅಲ್ಲ.ಈ ಘಟನೆ ಕುರಿತಂತೆ ನ್ಯಾಯಾಂಗ ವಿಚಾರಣೆ ನಡೆಸುವ ಮುಖ್ಯಮಂತ್ರಿಯವರ ನಿರ್ಧಾರ, ರೌಡಿತನ ಪ್ರದರ್ಶಿಸಿದ ವಕೀಲರ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳಲಾಗದ ಪಲಾಯನ ತಂತ್ರ. ನ್ಯಾಯಾಂಗ ವಿಚಾರಣೆಯಿಂದ ತಪ್ಪಿತಸ್ಥರಿಗೆ ಶಿಕ್ಷೆ ಆದೀತು ಎಂಬ ನಂಬಿಕೆ ಯಾರಿಗೂ ಇಲ್ಲ.ಏಕೆಂದರೆ ಯಾವ ನ್ಯಾಯಾಂಗ ವಿಚಾರಣೆಯ ವರದಿಯ ಮೇಲೂ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ಇಂಥ ಅಪನಂಬಿಕೆ ಸಾಮಾನ್ಯವಾಗಿದೆ. ಸರ್ಕಾರ ಈ ಘಟನೆಯನ್ನು ನ್ಯಾಯಾಂಗ ವಿಚಾರಣೆಗೆ ವಹಿಸಿ ಆಯೋಗದ ವರದಿ ಮೇಲೆ ಕ್ರಮ ತೆಗೆದು ಕೊಳ್ಳುವುದಾದರೆ ಅದು ಸ್ವಾಗತಾರ್ಹ. ಅದಕ್ಕಿಂತ ಮುಖ್ಯವಾಗಿ ಹಲ್ಲೆಕೋರ  ವಕೀಲರನ್ನು ಬಂಧಿಸಿ ಕಾನೂನು ಪ್ರಕಾರ ತನಿಖೆ ಮಾಡಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.ಕೆಲವೇ ವಕೀಲರ ದುಡುಕಿನ ವರ್ತನೆಯಿಂದ ಇಡೀ ವಕೀಲ ಸಮೂಹಕ್ಕೆ ಕೆಟ್ಟ ಹೆಸರು ಬಂದಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಹೊಣೆ ವಕೀಲರ ಸಂಘದ ಮೇಲಿದೆ. ಆದರೆ, ಸಂಘದಲ್ಲಿ ಅನಾಯಕತ್ವವೇ ರಾರಾಜಿಸುತ್ತಿರುವಾಗ ಅವರು ತಮ್ಮ ಹೊಣೆಯನ್ನು ಪ್ರದರ್ಶಿಸಿಯಾರೇ ಎಂಬುದು ಅನುಮಾನ. ಆ ಅನುಮಾನವನ್ನು ಶುಕ್ರವಾರದ ಘಟನೆ ನಿಜ ಮಾಡಿದೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.