ಪುಂಡಾಟಿಕೆ ಅತಿಯಾಯ್ತು

7

ಪುಂಡಾಟಿಕೆ ಅತಿಯಾಯ್ತು

Published:
Updated:

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಭಾನುವಾರ ವಿಹಾರಕ್ಕೆ ಬಂದಿದ್ದ ಗಡಿ ಭದ್ರತಾ ಪಡೆಯ ಕೆಲವು ಯೋಧರು ನಡೆಸಿದ ಪುಂಡಾಟವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಉದ್ಯಾನದ ಒಳಗೆ ಮದ್ಯಪಾನ ಮಾಡಿದ್ದಲ್ಲದೇ, ವಾಯುವಿಹಾರಕ್ಕೆ ಬಂದಿದ್ದ ಮಹಿಳೆಯರ ಮೇಲೆ  ಹೂಗಳನ್ನು ಮತ್ತು ಮದ್ಯವನ್ನು ಎರಚಿದ್ದು ಅಸಭ್ಯ, ಅನಾಗರಿಕ ನಡ­ವಳಿಕೆ. ಈ ಬಗ್ಗೆ ಪ್ರಶ್ನಿಸಲು ಬಂದ ಉದ್ಯಾನದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರನ್ನೇ ಹಿಗ್ಗಾಮುಗ್ಗಾ ಥಳಿಸಿ  ದುಂಡಾವರ್ತನೆ ತೋರಿಸಿದ್ದಾರೆ.ಗಡಿ­ಯಲ್ಲಿ ಕಾವಲು ಕಾಯುವುದಕ್ಕೆ ನೇಮಕಗೊಂಡು ತರಬೇತಿ ಪಡೆಯುತ್ತಿ­ರುವ ಮತ್ತು ಶಿಸ್ತಿಗೆ ಹೆಸರಾದ ಪಡೆಗೆ ಸೇರಿದ ಯೋಧರಿಂದ ಇಂಥ ನಡ­ವಳಿಕೆ­ಯನ್ನು ನಾಗರಿಕ ಸಮಾಜ ನಿರೀಕ್ಷಿಸಿರಲಿಲ್ಲ. ಇದು ಕ್ಷಮೆಗೆ ಅರ್ಹವಲ್ಲ. ನೂರಾರು ಜನ ಓಡಾಡುವ ಸ್ಥಳದಲ್ಲಿಯೇ ಮಹಿಳೆಯರ ಜತೆ ಕೆಟ್ಟದಾಗಿ ನಡೆದುಕೊಳ್ಳುವವರು ಇನ್ನು ಗಡಿಗಳಲ್ಲಿ ಗ್ರಾಮಸ್ಥರ ಜತೆ ಅದರಲ್ಲೂ ವಿಶೇಷ­ವಾಗಿ ಮಹಿಳೆಯರ ಜತೆ ಇದೇ ರೀತಿ ಅಸಹ್ಯವಾಗಿ ವರ್ತಿಸುವುದಿಲ್ಲ ಎಂಬ ಖಾತರಿ ಏನಿದೆ? ಇದನ್ನು ಊಹಿಸಿಕೊಂಡರೇ ಆತಂಕವಾಗುತ್ತದೆ.ಸಮವಸ್ತ್ರದ ಪಡೆಗಳಿಗೆ ಸೇರಿದ ಸಿಬ್ಬಂದಿ ಸಾರ್ವಜನಿಕರ ಜತೆ ಜಗಳ ಕಾದ ಪ್ರಸಂಗಗಳು ಆಗಾಗ ನಡೆಯುತ್ತಲೇ ಇವೆ. ಸೇನೆ ಮತ್ತಿತರ ಸಶಸ್ತ್ರ ಪಡೆಗಳ ತರಬೇತಿ ಕೇಂದ್ರಗಳಿರುವ ಕಡೆ ಇವುಗಳ ಸಂಖ್ಯೆ ಹೆಚ್ಚು. ಬೆಳಗಾವಿಯಲ್ಲಂತೂ  ಇಂಥ ಪುಂಡಾಟಿಕೆಗಳು ಅನೇಕ ಸಲ ನಡೆದಿವೆ. ಬೆಂಗಳೂರು ನಗರದಲ್ಲಿ ಸಹ ಈ ಹಿಂದೆ  ಯೋಧರು ಜನರ ಮೇಲೆರಗಿದ, ಗುಂಪು ಕಟ್ಟಿಕೊಂಡು ಠಾಣೆ­ಯೊಳಗೆ ನುಗ್ಗಿ ಪೊಲೀಸರನ್ನೂ ಹೊಡೆದ ಘಟನೆಗಳು ವರದಿಯಾಗಿದ್ದವು. ರಾಷ್ಟ್ರೀಯ ಮಟ್ಟದ ಭದ್ರತಾ ಪಡೆಗಳಿಗೆ ಸೇರಿದ ತಮ್ಮನ್ನು ಯಾರೂ ಏನೂ ಮಾಡಲಾರರು ಎಂಬ ದಾರ್ಷ್ಟ್ಯದ ಮನೋಭಾವ, ಅಹಮಿಕೆಯೇ ಇದಕ್ಕೆಲ್ಲ ಕಾರಣ ಎನ್ನಬಹುದು.  ಇಂಥ ಪ್ರಸಂಗಗಳು ದೇಶ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಭದ್ರತಾ ಪಡೆಗಳಿಗೆ ಕಳಂಕ ತರುತ್ತವೆ. ಅವುಗಳ ಬಗ್ಗೆ ಜನರಿಗೆ ಇರುವ ಅಭಿಮಾನ, ಸಹಾನು­ಭೂತಿಗೆ ಧಕ್ಕೆ ಉಂಟು ಮಾಡುತ್ತವೆ. ಇದನ್ನೆಲ್ಲ ನೋಡಿದಾಗ, ಸೇನೆ, ಗಡಿ ಭದ್ರತಾ ಪಡೆ, ಪೊಲೀಸ್‌ ಮತ್ತಿತರ ಸಮವಸ್ತ್ರ ಸಿಬ್ಬಂದಿಗೆ ನೀಡುವ ತರಬೇತಿ­ಯಲ್ಲಿಯೇ ಏನಾದರೂ ಲೋಪವಿದೆಯೇ ಎಂಬ ಅನುಮಾನ ಬರುವುದು ಸಹಜ.ಶಿಸ್ತಿಗೆ ಹೆಸರಾದವರು, ಜನರ ಪ್ರಾಣ, ಮಾನ, ಗೌರವ ರಕ್ಷಿಸುವ ಕರ್ತವ್ಯ ಹೊತ್ತವರು ಸಾರ್ವಜನಿಕ ಸ್ಥಳಗಳಲ್ಲಿ ಇನ್ನಷ್ಟು ಗೌರವದಿಂದ ನಡೆದು­ಕೊಳ್ಳುವುದು ಅಪೇಕ್ಷಣೀಯ. ಅವರಿಗೆ ಈ ಬಗ್ಗೆ ತರಬೇತಿ ಅವಧಿ­ಯಲ್ಲಿಯೇ ಸೂಕ್ತ ತಿಳಿವಳಿಕೆ ನೀಡಬೇಕು. ಅನುಚಿತ ವರ್ತನೆಗಳನ್ನು ಸಹಿಸಿ­ಕೊಳ್ಳುವುದಿಲ್ಲ ಎಂಬುದನ್ನು ಮನದಟ್ಟು ಮಾಡಬೇಕು. ಅದೇ ರೀತಿ ಈ ಪುಂಡಾಟವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕು.ಇದೆಲ್ಲದರ ಜತೆಗೆ ಮಹಿಳೆಯರ ಜತೆ, ನಾಗರಿಕ ಸಮಾಜದ ಜತೆ ಹೇಗೆ ಗೌರವದಿಂದ ವರ್ತಿಸಬೇಕು ಎಂಬುದರ ಪಾಠ ಹೇಳಿಕೊಡಬೇಕು. ಇಂಥ ವಿಷಯದಲ್ಲಿ ದಯೆ, ದಾಕ್ಷಿಣ್ಯ ಸಲ್ಲದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry