ಗುರುವಾರ , ನವೆಂಬರ್ 14, 2019
22 °C

ಪುಂಡಾನೆಗಳು ಬಂಡೀಪುರ ಅರಣ್ಯಕ್ಕೆ ರವಾನೆ

Published:
Updated:

ಮೈಸೂರು:  ಕಾಡಿನಿಂದ ಬಂದು ದಾಂಧಲೆ ನಡೆಸಿ ಸಾಂಸ್ಕೃತಿಕ ನಗರಿಯನ್ನೇ ಬೆಚ್ಚಿ ಬೀಳಿಸಿದ್ದ ಎರಡು ಆನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ  ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ರವಾನಿಸಿದರು.ಪಳಗಿದ ಆನೆಗಳಾದ ಅಭಿಮನ್ಯು, ಗಜೇಂದ್ರ, ಶ್ರೀರಾಮ ಹಾಗೂ ಅರ್ಜುನನ ಸಹಾಯದಿಂದ ಕಾರ್ಯಾಚರಣೆ ನಡೆಸಿ ಎರಡೂ ಆನೆಗಳನ್ನು ಲಾರಿಗೆ  ಹತ್ತಿಸಲಾಯಿತು.ಬೆಂಗಳೂರು -ಮೈಸೂರು ರಸ್ತೆಯ ನಾಯ್ಡು ಫಾರಂನಲ್ಲಿ ಹಿಡಿದ ಆನೆಯನ್ನು ಕಾಡಿಗೆ ಸಾಗಿಸಲು ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 5.30ಕ್ಕೆ ಕಾರ್ಯಾಚರಣೆ ಆರಂಭಿಸಿ, 8.30ಕ್ಕೆ ಪೂರ್ಣಗೊಳಿಸಿದರು. ಆನೆಯು ಲಾರಿ ಏರಲು ಸತಾಯಿಸಿತು. ಇದರಿಂದ ಕಾರ್ಯಾಚರಣೆ ತಡವಾಯಿತು.ಸರಸ್ವತಿಪುರಂ ಧೋಬಿ ಘಾಟ್ ಬಳಿ ಹಿಡಿದ  ಮರಿ ಗಂಡಾನೆಯನ್ನು ಚಂದ್ರವನದಲ್ಲಿ ಕಾಲಿಗೆ ಸರಪಳಿ, ಹಗ್ಗ ಹಾಕಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಇದನ್ನೂ ಸಹ ಸಿಬ್ಬಂದಿ ಲಾರಿಗೆ ಹತ್ತಿಸಲು ತಿಣುಕಾಡಿದರು. ಅರಿವಳಿಕೆ ಮದ್ದು ನೀಡಿದ್ದರೂ ಸಹ ಈ ಆನೆಯ ಆರ್ಭಟ ಕಡಿಮೆಯಾಗಿರಲಿಲ್ಲ. ಅಭಿಮನ್ಯು ಈ  ತುಂಟ ಆನೆಯನ್ನು ಲಾರಿಗೆ ಹತ್ತಿಸುವಲ್ಲಿ ಯಶಸ್ವಿಯಾದ. ಈ ತುಂಟ ಆನೆಯು ಅಭಿಮನ್ಯುವನ್ನೇ ಒಂದೆರಡು ಬಾರಿ ತಿವಿಯಲು ಮುಂದಾದಾಗ ಸಿಬ್ಬಂದಿ  ಗಾಬರಿಗೊಂಡರು.ಅರಣ್ಯ ಇಲಾಖೆ ಸಹಾಯಕ ಪ್ರಧಾನ ಕಾರ್ಯದರ್ಶಿ ಸ್ವಾಮಿ, ಎಡಿಜಿಪಿ ಚಿಕ್ಕೆರೂರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್ ಮಿಶ್ರ, ಹುಲಿ ಯೋಜನೆ  ನಿರ್ದೇಶಕ ಬಿ.ಜೆ.ಹೊಸಮಠ, ಎಸಿಎಫ್ ರವಿ ಕಾರ್ಯಾಚರಣೆ ವೇಳೆ ಹಾಜರಿದ್ದರು.ಜನತೆ ನಿರಾಳ: ಸೆರೆ ಹಿಡಿದ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟಲು ನಡೆದ ಕಾರ್ಯಾಚರಣೆಯನ್ನು ನೂರಾರು ಮಂದಿ ವೀಕ್ಷಿಸಿದರು. ಆನೆಗಳನ್ನು ಮತ್ತೆ ಕಾಡಿಗೆ ಕಳುಹಿಸಿದ ಸುದ್ದಿ ತಿಳಿದು ಜನತೆ ನಿಟ್ಟುಸಿರು ಬಿಟ್ಟರು.ಬುಧವಾರ ಬೆಳ್ಳಂಬೆಳಿಗ್ಗೆಯೇ ಕಾಣಿಸಿಕೊಂಡಿದ್ದ ಎರಡು ಆನೆಗಳ ಪೈಕಿ ಗಂಡಾನೆ ಮರಿ ಭದ್ರತಾ ಸಿಬ್ಬಂದಿ ರೇಣುಕಾಸ್ವಾಮಿ  ಹಾಗೂ ಮೂರು ಹಸುಗಳನ್ನು ಬಲಿ ತೆಗೆದುಕೊಂಡಿತ್ತು.

ಪ್ರತಿಕ್ರಿಯಿಸಿ (+)