ಶುಕ್ರವಾರ, ಮೇ 27, 2022
23 °C

ಪುಟಾಣಿಗಳಿಗೆ ಶಸ್ತ್ರಚಿಕಿತ್ಸೆಯ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬದುಕಿನ ಹಾದಿ ತುಳಿಯಬೇಕಾದ ಆ ಪುಟಾಣಿಗಳಿಗೆ ಎಳವೆಯಲ್ಲಿಯೇ ಅಂಗವೈಕಲ್ಯ. ಮುರುಟಿ ಹೋದ ಪುಟ್ಟ ಕೈ-ಕಾಲುಗಳು. ಆದರೇನಂತೆ ಅರಳು ಮಲ್ಲಿಗೆಗಳು ಬಾಡದಿರಲೆಂದು ವೈದ್ಯರು ಪಣ ತೊಟ್ಟರು. ಪರಿಣಾಮ 200 ಮಕ್ಕಳು ಹಾಗೂ ಅವರ ತಂದೆ ತಾಯಂದಿರಲ್ಲಿ ಮಂದಹಾಸ.ನಗರದ ಸ್ಪರ್ಶ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯು ಸ್ಪರ್ಶ್ ವಚನ ಕಾರ್ಯಕ್ರಮದಡಿ ಆಗಸ್ಟ್ 4ರಿಂದ 8ರವರೆಗೆ ಉಚಿತ ತಪಾಸಣಾ ಶಿಬಿರ ಏರ್ಪಡಿಸಿತ್ತು. ನೆರೆ ರಾಜ್ಯ ಹಾಗೂ ರಾಜ್ಯದ 630 ಮಕ್ಕಳನ್ನು ತಪಾಸಣೆ ಮಾಡಲಾಯಿತು. ಇವರಲ್ಲಿ ತೀವ್ರ ಸ್ವರೂಪದ ಅಂಗವೈಕಲ್ಯಕ್ಕೆ ತುತ್ತಾದ 200 ಮಕ್ಕಳಿಗೆ ಉಚಿತವಾಗಿ ಒಂದು ವಾರಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.ಸೋಮವಾರದಿಂದ ಆರಂಭವಾಗಿರುವ ಶಸ್ತ್ರಚಿಕಿತ್ಸಾ ಶಿಬಿರ ಎಂಟು ವಿವಿಧ ಬಗೆಯ ಅಂಗವೈಕಲ್ಯವನ್ನು ಗುರಿಯಾಗಿರಿಸಿಕೊಂಡಿದೆ. ಡಾ.ಜೇಮ್ಸ ಫರ್ನಾಂಡಿಸ್ ಅವರನ್ನೊಳಗೊಂಡ ಇಂಗ್ಲೆಂಡ್ ತಂಡ ಹಾಗೂ ಡಾ. ಯೋಹನಾನ್ ಜಾನ್ ಅವರನ್ನೊಳಗೊಂಡ ಸ್ಪರ್ಶ್ ಆಸ್ಪತ್ರೆಯ ತಂಡ ದಿನಕ್ಕೆ 25ರಿಂದ 30 ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಸರ್ಜರಿ, ಮೈಕ್ರೊ ವ್ಯಾಸ್ಕುಲರ್ ಮತ್ತು ಅರವಳಿಕೆ ವಿಭಾಗದಲ್ಲಿ ದೇಶದ ತಜ್ಞರು, ಫ್ರಾನ್ಸ್ ಹಾಗೂ ಇಟಲಿ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.ಮೂರು ವರ್ಷ ಒಂದು ತಿಂಗಳಾಗಿರುವ ತರಿಕೆರೆಯ ಪುಟಾಣಿ ಚಂದುವಿಗೆ ಎರಡು ಪಾದಗಳೂ ವಕ್ರವಾಗಿದ್ದವು.  ತಿಪಟೂರಿನ 13 ವರ್ಷದ ಹರ್ಷಿತಾಗೆ ಐದು ವರ್ಷದವಳಿದ್ದಾಗ ಕಾಲಿನ ನ್ಯೂನತೆ ಕಾಣಿಸಿಕೊಂಡಿತು. ಎಂಟು ವರ್ಷಗಳಿಂದ ನಡೆದಾಡಲು ಆಗದ ಸ್ಥಿತಿ. ಇಂಥ ಇನ್ನೂ ಅನೇಕ ಪುಟಾಣಿಗಳಿಗೆ ಈಗ ಶಸ್ತ್ರ ಚಿಕಿತ್ಸೆಯ ಭಾಗ್ಯ.ಕೆಂಗೇರಿ ಉಪ ನಗರದ ಬಾಲಕ ಚೇತನ್‌ನ ತಂದೆ ಮಾದಪ್ಪ, `ಪತ್ರಿಕೆಗಳಲ್ಲಿ ನೀಡಿದ್ದ ಮಾಹಿತಿಯನ್ನು ಆಧರಿಸಿ ಇಲ್ಲಿಗೆ ಬಂದೆವು. ಒಂದು ರೂಪಾಯಿಯನ್ನೂ ಆಸ್ಪತ್ರೆ ಪಡೆದಿಲ್ಲ. ಹಾಗಂತ ಅವರ ಆರೈಕೆಯ ಗುಣಮಟ್ಟವೂ ಕಡಿಮೆ ಇಲ್ಲ. ಇತರರಂತೆ ನಮ್ಮ ಮಕ್ಕಳಿಗೂ ವೈದ್ಯರು ತೋರುವ ಕಾಳಜಿಯನ್ನು ಮರೆಯುವಂತಿಲ್ಲ~ ಎಂದು ತಿಳಿಸಿದರು.ಎರಡನೇ ತರಗತಿ ಓದುತ್ತಿರುವ ಮಾಗಡಿಯ ನೇಹಾ ಅವರ ತಾಯಿ, `ನಮ್ಮಂತಹವರಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಷ್ಟು ಹಣ ಇರುವುದಿಲ್ಲ. ಇದಲ್ಲದೆ ಮತ್ತೆ ಕೆಲವು ಶಸ್ತ್ರಚಿಕಿತ್ಸೆಗಳನ್ನು ಮಗಳಿಗೆ ಮಾಡಬೇಕಿದೆ. ಅದನ್ನೂ ಉಚಿತವಾಗಿ ಮಾಡಿಕೊಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಈ ನೆರವಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು~ ಎಂದರು.ಕಾರ್ಯಕ್ರಮದಲ್ಲಿ ಮಾತನಾಡಿದ ಬಯೋಕಾನ್ ಕಂಪೆನಿಯ ಅಧ್ಯಕ್ಷೆ ಕಿರಣ್ ಮಜೂಂದಾರ್ ಷಾ, `ಇಂಥ ಕಾರ್ಯಕ್ರಮಗಳು ಇಡೀ ದೇಶದಲ್ಲಿ ನಡೆಯಬೇಕಿದೆ. ಕಾರ್ಪೊರೇಟ್ ಸಂಸ್ಥೆಗಳು ಇಂತಹ ಕಾರ್ಯಗಳಿಗೆ ಒತ್ತು ನೀಡಬೇಕಿದೆ. ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಸ್ಪತ್ರೆಯದ್ದು ಅತಿ ದೊಡ್ಡ ಕೊಡುಗೆ~ ಎಂದು ಹೇಳಿದರು.ಆಸ್ಪತ್ರೆಯ ಅಧ್ಯಕ್ಷ ಡಾ. ಶರಣ್ ಪಾಟೀಲ್, `ಮೂರು ವರ್ಷಗಳಿಂದ ಸ್ಪರ್ಶ್- ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈವರೆಗೆ 600 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬೇರೆ ಬೇರೆ ದೇಶಗಳ ತಜ್ಞ ವೈದ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

 

ಇದೊಂದು ಸಮಾಜ ಸೇವೆಯ ಕಾರ್ಯ ಎಂಬಂತೆ ಉತ್ಸಾಹದಿಂದ ಭಾಗವಹಿಸಿದ್ದಾರೆ. ಬೆಳಿಗ್ಗೆಯಿಂದ ರಾತ್ರಿ 11ರವರೆಗೆ ಶಸ್ತ್ರಚಿಕಿತ್ಸೆ ನಡೆಯುತ್ತದೆ~ ಎಂದು ತಿಳಿಸಿದರು. ವೈದ್ಯ ಡಾ. ಡಾ.ಜೇಮ್ಸ ಫರ್ನಾಂಡಿಸ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.