ಬುಧವಾರ, ಅಕ್ಟೋಬರ್ 16, 2019
28 °C

ಪುಟಾಣಿಯ ಮ್ಯಾಜಿಕ್ ಲೋಕ

Published:
Updated:

ಅದೊಂದು ಪುಟ್ಟ ಖಾಲಿ ಡಬ್ಬ. ಅದರ ಮುಚ್ಚಳವನ್ನು ಹಾಕಿ ಮತ್ತೆ ತೆರೆದರೆ ಅಲ್ಲೊಂದು ಕಾಯಿನ್ ಪ್ರತ್ಯಕ್ಷ, ಮತ್ತೊಮ್ಮೆ ಹೂಗುಚ್ಛ, ಸಿಹಿತಿಂಡಿ ... ಕೈಯಲ್ಲಿ ಹಿಡಿದ ಎಲೆಗಳ ಮಧ್ಯೆ ಥಟ್ಟನೆ ಕೆಂಪಗೆ ಅರಳಿ ಬಿಚ್ಚಿಕೊಳ್ಳುವ ಗುಲಾಬಿ ಹೂ...ಇಂಥ ಹಲವಾರು ಕೈಚಳಕಗಳ ರೂವಾರಿ ಮೂರರ ಬಾಲೆ ಶ್ರೇಯಾ! ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಈಕೆ ಇದೇ ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಲಿದ್ದಾಳೆ.ತಂದೆ ಶಿವಕುಮಾರ್ ಆಸ್ಪತ್ರೆ ಲ್ಯಾಬ್‌ವೊಂದರಲ್ಲಿ ಉದ್ಯೋಗಿ. 7-8ವರ್ಷಗಳ ಹಿಂದೆ ಕಲಿತಿದ್ದ ಮ್ಯಾಜಿಕ್ ಅನ್ನು ಇದೀಗ ಮಗಳಿಗೆ ಕಲಿಸಿಕೊಡುತ್ತಿದ್ದಾರೆ. ಎರಡೂವರೆ ವರ್ಷಕ್ಕೆ ತೊದಲು ನುಡಿ ಮಾತನಾಡುತ್ತಲೇ ಶ್ರೇಯಾ ಮ್ಯಾಜಿಕ್‌ನ ಮೂಲ ಮಂತ್ರಗಳನ್ನು ಕಲಿತಿದ್ದಾಳೆ. ಅಷ್ಟೇ ಏಕೆ ಮೂರು ವರ್ಷಕ್ಕೆ ವೇದಿಕೆ ಮೇಲೆ ಒಬ್ಬಂಟಿಯಾಗಿ ನಿಂತು ಪ್ರದರ್ಶನ ನೀಡುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾಳೆ.`ವೃತ್ತಿಯಿಂದ ನೇಕಾರರಾದ ನಮ್ಮ ಸಂಸಾರ ನನ್ನೊಬ್ಬನ ದುಡಿಮೆಯನ್ನೇ ನೆಚ್ಚಿಕೊಂಡಿದೆ. ವೃದ್ಧ ತಂದೆ ದುಡಿಯುವ ಸ್ಥಿತಿಯಲ್ಲಿಲ್ಲ. ನ್ಯೂಯಾರ್ಕ್ ಹುಡುಗನೊಬ್ಬ ತನ್ನ 4ನೇ ವಯಸ್ಸಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. ಮಗಳು ಶ್ರೇಯಾ ಮೂರನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದರೂ ಅದನ್ನು ಗಿನ್ನಿಸ್ ಪುಸ್ತಕದಲ್ಲಿ ಅಚ್ಚಾಗುವಂತೆ ಮಾಡುವುದು ಹೇಗೆಂದು ತಿಳಿದಿಲ್ಲ ಎನ್ನುತ್ತಾರೆ ಪುಟಾಣಿ ಶ್ರೇಯಾಳ ತಂದೆ ಶಿವಕುಮಾರ್.ಮಗಳ ಸಾಧನೆ ಬಗ್ಗೆ ತಂದೆಗೆ ಹೆಮ್ಮೆ ಇದೆ. `ನಾನು ಅಭ್ಯಾಸ ಮಾಡುವಾಗೆಲ್ಲ ಬಳಸುವ ಸಾಮಾಗ್ರಿಗಳೊಂದಿಗೆ ಪುಟ್ಟ ಮಗಳು ಆಟವಾಡುತ್ತಿದ್ದಳು. ಅವಳ ಆಸಕ್ತಿಯನ್ನು ಗಮನಿಸಿ ಒಂದೊಂದು ಚಮತ್ಕಾರಗಳನ್ನು ಹೇಳಿಕೊಟ್ಟೆ. ಬಟ್ಟೆ, ಟೊಪ್ಪಿ ಬಳಸಿ ಮಾಡುವ ಕೆಲವಷ್ಟು ಜಾದುಗಳನ್ನು ಮೊದಲಿಗೆ ಕಲಿಸಿದೆ. ಒಂದೆರಡು ಸ್ಥಳೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಲೇ ಜನರಿಂದ ಹೊಗಳಿಕೆಯ ಮಾತುಗಳು ಕೇಳಿಬಂದುವು. ಆಗಿನ್ನೂ ಮೂರು ವರ್ಷ ತುಂಬಿರದ ಮಗು ವೇದಿಕೆಯ ಮೇಲೇರಿ ಪ್ರದರ್ಶನ ನೀಡುವುದಕ್ಕೆ ಮನೆಯಿಂದಲೂ ಅಸಮ್ಮತಿ ದೊರೆತಿತು. ಈ ಕಾರಣಕ್ಕೆ ಹೆಚ್ಚು ಪ್ರದರ್ಶನ ನೀಡುವ ಗೋಜಿಗೆ ಹೋಗಿಲ್ಲ ಎನ್ನುತ್ತಾರೆ ಅವರು.ಆಕೆಯ ಹುಟ್ಟುಹಬ್ಬ (18-1-2008)ದ ದಿನ ಅಂಗನವಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸ್ಥಳೀಯ ಸಂಘ ಸಂಸ್ಥೆಗಳ ಜೊತೆ ಸೇರಿ ಮ್ಯಾಜಿಕ್ ಪ್ರದರ್ಶನ ಏರ್ಪಡಿಸಿದೆ. ಇಳಕಲ್ ದಸರಾ ಸಂದರ್ಭ ಮ್ಯಾಜಿಕ್ ಪ್ರದರ್ಶಿಸಿದ್ದ ಶ್ರೇಯಾ ಜನಮನ ಗೆಲ್ಲುವಲ್ಲಿ ಸಫಲವಾಗಿದ್ದಳು. ಇದೀಗ ಬೆಂಗಳೂರಿನಲ್ಲಿ ಹಲವಾರು ಪ್ರದರ್ಶನ ನೀಡಲು ಕೋರಿಕೆಗಳು ಬಂದಿದ್ದರೂ ಮನೆಯಿಂದ ಬಹುದೂರ ಎಂಬ ಕಾರಣಕ್ಕೆ ಮನೆಯವರು ಅವನ್ನೆಲ್ಲಾ ತಳ್ಳಿ ಹಾಕಿದ್ದಾರೆ.ಗಿಡದಿಂದ ಹೂ ಹೊರತರುವುದು, ಕೋಲು ತೋರಿಸಿ ಅದರ ತುದಿಯಿಂದ ಕಾಯಿನ್ ಹೊರಬರುವಂತೆ ಮಾಡುವುದು, ಕರ್ಚಿಫ್ ಹೊದೆಸಿ ಬೊಕ್ಕೆ ಹೊರತೆಗೆಯುವುದು, ಮ್ಯಾಜಿಕ್ ಬಾಕ್ಸ್‌ಗೆ ಕೇಸರಿ ಬಿಳಿ ಹಸಿರು ಬಣ್ಣದ ಬಟ್ಟೆ ತುರುಕಿ ರಾಷ್ಟ್ರಧ್ವಜವನ್ನು ಹೊರತರುವುದು ಆಕೆಗೆ ಇಷ್ಟವಾದ ಮ್ಯಾಜಿಕ್‌ಗಳು. ಭಾರದ ವಸ್ತುಗಳನ್ನು ಹಿಡಿದುಕೊಳ್ಳಲು ಆಕೆಗೆ ಸಾಧ್ಯವಿಲ್ಲದ್ದರಿಂದ ಇತರ ಮ್ಯಾಜಿಕ್‌ಗಳನ್ನು ಹೇಳಿಕೊಡಲು ತುಸು ನಿಧಾನವಾಗುತ್ತಿದೆ ಎನ್ನುತ್ತಾರೆ ತಂದೆ ಶಿವಕುಮಾರ್. ಪ್ರೋತ್ಸಾಹಕರ ಕೊರತೆಯೂ ಈ ಪ್ರತಿಭೆಯ ಪ್ರಚಾರಕ್ಕೆ ತೊಡಕಾಗಿ ಪರಿಣಮಿಸಿದೆ.ಸಂಪರ್ಕಕ್ಕೆ: 9686878088

  -

Post Comments (+)