ಪುಟಿದೇಳುವ ವಿಶ್ವಾಸದಲ್ಲಿ ದೋನಿ ಬಳಗ

7
ಕ್ರಿಕೆಟ್: ಇಂದು ಮೊದಲ ಟ್ವೆಂಟಿ-20, ಮತ್ತೊಂದು ಮುಖಭಂಗ ತಪ್ಪಿಸಿಕೊಳ್ಳಲು ಭಾರತದ ಹೋರಾಟ

ಪುಟಿದೇಳುವ ವಿಶ್ವಾಸದಲ್ಲಿ ದೋನಿ ಬಳಗ

Published:
Updated:

ಪುಣೆ (ಪಿಟಿಐ): ಟೆಸ್ಟ್ ಸರಣಿಯಲ್ಲಿ ಎದುರಾದ ಸೋಲು ಅಸಹನೀಯ. ಈ ಅವಮಾನದಿಂದ ಪಾರಾಗಲು ದೋನಿ ಬಳಗ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಬೇಕಾದ ಒತ್ತಡದಲ್ಲಿದೆ. ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಗುರುವಾರ ಮುಹೂರ್ತ ನಿಗದಿಯಾಗಿದೆ.ಆಂಗ್ಲರ ಬಳಗಕ್ಕೆ ಭಾರತದ ನೆಲದಲ್ಲಿ 28 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆಲ್ಲಲು ಅವಕಾಶ ಮಾಡಿಕೊಟ್ಟ ದೋನಿ ಪಡೆಯ ಮೇಲೆ ಕ್ರೀಡಾಪ್ರೇಮಿಗಳು ಟೀಕಾಪ್ರಹಾರ ನಡೆಸಿದ್ದಾರೆ. ಭಾರತ ತಂಡದಲ್ಲಿ ಸಾಕಷ್ಟು ಯುವ ಆಟಗಾರರಿದ್ದು, ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು `ಮಹಿ' ಮಾಡುತ್ತಿದ್ದಾರೆ. ಇದರ ಜೊತೆಗೆ ತವರು ನೆಲದ ಪಿಚ್‌ನ ಲಾಭ ಪಡೆದು ಕಳೆದು ಹೋಗಿರುವ ಚೈತನ್ಯವನ್ನು ಮರಳಿ ಪಡೆಯುವ ಲೆಕ್ಕಾಚಾರ ಭಾರತ ತಂಡದ್ದು.ಆಲ್‌ರೌಂಡರ್ ಸುರೇಶ್ ರೈನಾ, ರೋಹಿತ್ ಶರ್ಮಾ, ಅಂಬಟಿ ರಾಯುಡು ಅವರು ಭಾರತದ ಸೊರಗಿ ಹೋಗಿರುವ ಬ್ಯಾಟಿಂಗ್ ವಿಭಾಗಕ್ಕೆ ಮರುಜೀವ ತುಂಬಬೇಕಿದೆ. ಇದೇ ವರ್ಷ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ಎದುರು 90 ರನ್‌ಗಳ ಗೆಲುವು ಪಡೆದಿತ್ತು. ಆ ಪಂದ್ಯದಲ್ಲಿ ರೋಹಿತ್ ಔಟಾಗದೆ 55 ಗಳಿಸಿದ್ದರು. ಆದ್ದರಿಂದ ಇಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡುವುದು ಅಗತ್ಯವಿದೆ.ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿರುವ ಯುವರಾಜ್ ಸಿಂಗ್ ಲಯ ಕಂಡುಕೊಳ್ಳುವುದು ಅಗತ್ಯವಿದೆ. ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಈ ಸರಣಿಯಲ್ಲಿ ಆಡದ ಕಾರಣ ಅಜಿಂಕ್ಯ ರಹಾನೆಗೆ ಸ್ಥಾನ ನೀಡಲಾಗಿದೆ. ಅನುಭವಿ ಗೌತಮ್ ಗಂಭೀರ್ ಜೊತೆಗೂಡಿ ರಹಾನೆ ಇನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದ ವೇಳೆ ರಹಾನೆ ಉತ್ತಮ ಪ್ರದರ್ಶನ ನೀಡಿದ್ದರು.ಎಡಗೈ ವೇಗಿ ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ಯುವ ಬೌಲರ್‌ಗಳು ಹಿರಿಯ ಆಟಗಾರನ ಸ್ಥಾನವನ್ನು ತುಂಬಬೇಕಿದೆ. ಗಾಯಗೊಂಡ ಕಾರಣ ಕರ್ನಾಟಕದ ಆರ್. ವಿನಯ್ ಕುಮಾರ್ ಬದಲು ಸ್ಥಾನ ಪಡೆದಿರುವ ಇನ್ನೊಬ್ಬ ಕನ್ನಡಿಗ ಅಭಿಮನ್ಯು ಮಿಥುನ್, ಅಶೋಕ್ ದಿಂಡಾ, ಪರ್ವಿಂದರ್ ಅವಾನ, ಭುವನೇಶ್ವರ ಕುಮಾರ್ ಭಾರತದ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರಗಳೆನಿಸಿದ್ದಾರೆ.ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಜಡೇಜಾ, ಅಶ್ವಿನ್ ಹಾಗೂ ಪಿಯೂಷ್ ಚಾವ್ಲಾ ಸ್ಪಿನ್ ವಿಭಾಗದ ಪ್ರಮುಖ `ಮೋಡಿ'ಗಾರರು. ಟೆಸ್ಟ್ ಸರಣಿಯಲ್ಲಿ ಸೋಲು ಕಂಡ ಕಾರಣ ಅಂತಿಮ ಹನ್ನೊಂದರ ಪಟ್ಟಿ ತಯಾರಿಸುವುದು ಸವಾಲಿನ ಕೆಲಸವಾಗಿದೆ.ಗೆಲುವಿನ ಹುಮ್ಮಸ್ಸು: ಸರಣಿ ಗೆದ್ದ ಸಂಭ್ರಮದಲ್ಲಿರುವ ಆಂಗ್ಲರ ಪಡೆ ಟ್ವೆಂಟಿ-20ಯಲ್ಲೂ ಗೆಲುವಿನ ರಸದೂಟ ಸವಿಯುವ ಆಸೆ ಹೊಂದಿದೆ. ಎಯೋನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್‌ನ ಟಿ-20 ತಂಡದ ನಾಯಕ ಸ್ಟುವರ್ಟ್ ಬ್ರಾಡ್ ಗಾಯಗೊಂಡಿರುವ ಕಾರಣ ಮಾರ್ಗನ್ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಬ್ರಾಡ್ ಬದಲು ಯುವ ಆಟಗಾರ ಜೇಮ್ಸ ಹ್ಯಾರಿಸ್‌ಗೆ ಸ್ಥಾನ ನೀಡಲಾಗಿದೆ.ಆಂಗ್ಲರ ಬಳಗದ ಟಿ-20 ಪರಿಣಿತ ಆಟಗಾರರಾದ ಅಲೆಕ್ಸ್ ಹೇಲ್ಸ್, ಜಾಸ್ ಬಟ್ಲರ್, ಜೇಮ್ಸ ಟ್ರೆಡ್‌ವೆಲ್ ಆತಿಥೇಯ ತಂಡಕ್ಕೆ ಅಪಾಯಕಾರಿಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಪಂದ್ಯ ನಡೆಯುವ ಇಲ್ಲಿನ ಸಹಾರಾ ಕ್ರೀಡಾಂಗಣದಲ್ಲಿ 43.000 ಜನರಿಗೆ ಕುಳಿತು ಪಂದ್ಯ ವೀಕ್ಷಿಸಬಹುದು.ಕಳೆದ ವರ್ಷ ಐಪಿಎಲ್ ಟೂರ್ನಿಯ ಪಂದ್ಯಗಳು ಇಲ್ಲಿ ನಡೆದಿದ್ದವು. ಈ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಮೊದಲ ಅಂತರರಾಷ್ಟ್ರೀಯ ಟಿ-20 ಪಂದ್ಯ ಇದು. ಈ ನೆನಪನ್ನು ದೋನಿ ಬಳಗದವರು ಸ್ಮರಣೀಯವನ್ನಾಗಿಸಿಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು.ತಂಡಗಳು

ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಯುವರಾಜ್   ಸಿಂಗ್, ಅಂಬಟಿ ರಾಯಡು, ಆರ್. ಅಶ್ವಿನ್, ರವೀಂದ್ರ ಜಡೇಜಾ, ಪಿಯೂಷ್ ಚಾವ್ಲಾ, ಅಶೋಕ್ ದಿಂಡಾ, ಭುವನೇಶ್ವರ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಪರ್ವಿಂದರ್ ಅವಾನ.ಇಂಗ್ಲೆಂಡ್: ಎಯೋನ್ ಮಾರ್ಗನ್ (ನಾಯಕ), ಜಾನಿ ಬೈಸ್ಟೋವ್, ಟಿಮ್ ಬ್ರೆಸ್ನನ್, ಡ್ಯಾನಿ ಬ್ರಿಗ್ಸ್, ಜಾಸ್ ಬಟ್ಲರ್, ಜೇಡ್ ಡೆರ್ನ್‌ಬಾಚ್, ಅಲೆಕ್ಸ್ ಹೇಲ್ಸ್, ಮೈಕಲ್ ಲಂಬ್, ಸ್ಟುವರ್ಟ್ ಮೀಕರ್, ಸಮಿತ್   ಪಟೇಲ್, ಜೇಮ್ಸ ಟ್ರೆಡ್‌ವೆಲ್, ಲೂಕ್ ರೈಟ್, ಜೋ ರೂಟ್ ಮತ್ತು   ಜೇಮ್ಸ ಹ್ಯಾರಿಸ್.

ಅಂಪೈರ್‌ಗಳು: ಸಿ. ಶಂಶುದ್ದೀನ್ ಹಾಗೂ ಸುಧೀರ್ ಅಸ್ನಾನಿ. ಮೂರನೇ ಅಂಪೈರ್: ವಿನೀತ್ ಕುಲಕರ್ಣಿ.

ಪಂದ್ಯದ ರೆಫರಿ: ಜೆಫ್ ಕೊ್ರೀೀವ್.

ಪಂದ್ಯ ಆರಂಭ: ರಾತ್ರಿ 7ಕ್ಕೆ.ಅಗ್ರಸ್ಥಾನ ಗಳಿಸಲು ಅವಕಾಶ

ದುಬೈ (ಪಿಟಿಐ):
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಕಂಡು ಟೀಕೆಗೆ ಗುರಿಯಾಗಿರುವ ಭಾರತ ತಂಡ ಟ್ವೆಂಟಿ-20 ಕ್ರಿಕೆಟ್‌ನ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಈಗ ಉತ್ತಮ ಅವಕಾಶ ಲಭಿಸಿದೆ.ಈ ವರ್ಷದ ಅಂತ್ಯದ ವೇಳೆಗೆ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ವಿರುದ್ಧ ತಲಾ ಎರಡು ಪಂದ್ಯಗಳನ್ನು ಆಡಲಿರುವ ದೋನಿ ಬಳಗ ಈ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಅಗ್ರಸ್ಥಾನದ ಗೌರವ ಪಡೆಯಲಿದೆ.120 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯಕ್ಕೆ ಮೂರನೇ ಸ್ಥಾನದಲ್ಲಿರುವ ಭಾರತ ನಾಲ್ಕು ಪಂದ್ಯಗಳಲ್ಲಿ ವಿಜಯ ಕಂಡರೆ ಅಗ್ರಸ್ಥಾನ ಪಡೆಯಲಿದೆ. ಭಾರತಕ್ಕೂ ಮೇಲಿನ ಸ್ಥಾನದಲ್ಲಿರುವ ಶ್ರೀಲಂಕಾ 127 ಹಾಗೂ ವೆಸ್ಟ್ ಇಂಡೀಸ್ 122 ರೇಟಿಂಗ್ ಪಾಯಿಂಟ್ ಹೊಂದಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry