ಸೋಮವಾರ, ಜೂನ್ 21, 2021
21 °C

ಪುಟಿದೇಳುವ ‘ಪುಟ್ಟಿಯರು’!

- ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

ನನಗೆ ನೃತ್ಯ ಕಲಿಯುವ ಆಸೆ. ಈಗ ನನಗೆ ೫೦ರ ವಯಸ್ಸು. ಒಂದು ದಿನ ನಾನೇ ಮನಸ್ಸು ಮಾಡಿ ಹತ್ತಿರದ ಡಾನ್ಸ್ ಕ್ಲಾಸಿಗೆ ಹೋದೆ. ಅಲ್ಲಿನ ಟೀಚರ್ ಕೇಳಿದ್ರು ‘ಮಗಳಿಗಾ?’,  ‘ಇಲ್ಲ, ನಾನೇ ಸೇರ್ಬೇಕು’. ‘ಸರಿ, ಸೇರ್ಕೊಳ್ಳಿ’ ಅಂದ್ರು. ಜೊತೆಯ ಮಕ್ಕಳೆಲ್ಲಾ ನನಗಿಂತ ‘ಸೀನಿಯರ್ಸ್’. ‘ನೀನು ಈಗ ಡಾನ್ಸ್ ಮಾಡ್ತೀಯಾ’ ಅಂತ ನಗುತ್ತಿದ್ದ  ಸ್ನೇಹಿತೆಯರಲ್ಲಿ ಕೆಲವರಿಗೂ ನನ್ನಿಂದ  ಸ್ಫೂರ್ತಿ ಬಂತು ಅನಿಸುತ್ತೆ. ಸರಿ, ಅವರೂ ಸೇರಿದರು.ಈಗ ನಾವೆಲ್ಲರೂ ಡಾನ್ಸ್‌ಗೆ ಸೇರಿ ೪ ವರ್ಷ! ಮೊನ್ನೆ ಜೂನಿಯರ್ ಪರೀಕ್ಷೆಗೆ ಹೋದರೆ ಇನ್‌ವಿಜಿಲೇಟರ್ ‘ಪೇರೆಂಟ್ಸ್ ಪರೀಕ್ಷೆ ಹಾಲಲ್ಲಿ ಕೂತ್ಕೊಳ್ಳುವ ಹಾಗಿಲ್ಲ ಮೇಡಂ ಎನ್ನಬೇಕೇ?’ ನಾನೇ ನಗುತ್ತಾ ‘ನಾನೇ ಪರೀಕ್ಷೆ ಕಟ್ಟಿರೋದು ಸಾರ್’ ಎಂದೆ!  ಯಾರೇನೇ ಹೇಳಲಿ, ನನಗೆ ಈಗ, ನೃತ್ಯ ಮಾಡುವುದೇ ಒಂದು ಸಂತೋಷ. ಅಡುಗೆ-ಮನೆ ಕೆಲಸ-, ಕಾಯಿಲೆ -ಮಕ್ಕಳು- ಗಂಡ- ಶಾಪಿಂಗ್ ಇವುಗಳ ಮಧ್ಯೆ ನನಗೆ ಈಗ ನನ್ನದೇ ಆದ ಸಮಯ-  ಸಿಕ್ಕಂತೆ.-ಇದು ನನ್ನ ಬಳಿ ನೃತ್ಯ ಕಲಿಯಲು ಬರುವ ‘ಹಿರಿಯ’ ಅಂದರೆ ವಯಸ್ಸಿನಲ್ಲೂ ಹಿರಿಯ ವಿದ್ಯಾರ್ಥಿಯೊಬ್ಬರ ಅನುಭವ. ಬಾಲ್ಯದಲ್ಲಿ ಎಂದೋ ನೃತ್ಯ ಕಲಿತ, ಅಥವಾ ಆಸೆಯಿದ್ದೂ ಕಲಿಯಲಾರದೆ ಇದ್ದ ೩೫ರ ಮೇಲ್ಪಟ್ಟ ‘ಮಹಿಳೆ’ಯರ ಒಂದು ಗುಂಪೇ ಇಂದು ನನ್ನ ಶಿಷ್ಯವರ್ಗದಲ್ಲಿದೆ. ಯಾವ ವಯಸ್ಸಿನಲ್ಲೂ ವಿದ್ಯೆ ಕಲಿಯಬಹುದು ಎಂದು ನಾವು ಹೇಳುವುದೇನೋ ನಿಜ. ಆದರೇ ‘ನೃತ್ಯ’ ದ ವಿಷಯಕ್ಕೆ  ಬಂದಾಗ ಅದು ಸುಲಭ ಸಾಧ್ಯವಲ್ಲ.ನೃತ್ಯ ಒಂದು ಪ್ರದರ್ಶನ ಕಲೆ. ಅದನ್ನು ಕಲಿಯಲಾದರೂ ಅಷ್ಟೆ. ದೈಹಿಕವಾಗಿ ಸದೃಢರಾಗಿರುವುದು ಒಳಿತು. ಭರತನಾಟ್ಯದಂಥ ಶಾಸ್ತ್ರೀಯ ನೃತ್ಯದಲ್ಲಂತೂ ಅರೆ ಮಂಡಿ, ಪೂರ್ತಿ ಮಂಡಿ ಇಂಥ ಭಂಗಿಗಳು, ಸತತವಾಗಿ ಮಾಡುವ ನೃತ್ಯ ಭಾಗಗಳು. ಒಂದು ವಯಸ್ಸಿನ ನಂತರ ಆರೋಗ್ಯದ ತೊಂದರೆಗಳಿದ್ದರೆ ಕಷ್ಟದ ಸವಾಲನ್ನೇ ಒಡ್ಡುತ್ತವೆ. ಹೆಚ್ಚಿನ ಮಹಿಳೆಯರು ಮನಸ್ಸಿದ್ದರೂ ಈ ಕಲಿಕೆಯಿಂದ ದೂರವೇ ಉಳಿಯುತ್ತಾರೆ.ತಮಗೆ ಕಷ್ಟವಾಗುತ್ತದೆ ಎಂಬ ಕಾರಣದ ಜೊತೆಗೇ ನೃತ್ಯ ಕಲಿಯುವಲ್ಲಿ ಮಹಿಳೆಯರಿಗೆ ಹಲವು ರೀತಿಯ ಮುಜುಗರಗಳೂ ಎದುರಾಗುತ್ತವೆ. ದೇಹ ಬಾಗದಿರುವುದು, ಗ್ರಹಿಕೆಯಲ್ಲಿ ನಿಧಾನ, ಮಾಡುವಾಗ ತಾವು ಹೇಗೆ ಕಾಣುತ್ತೇವೆಯೋ ಏನೋ? ಎಂಬ ಅನುಮಾನ, ತಮಗಿಂತ ಕಿರಿಯ ಸಹಪಾಠಿಗಳು, ನರ್ತಿಸುವಾಗ ಅಕಸ್ಮಾತ್ ಮೂಳೆಯೇ ಮುರಿದು ಹೋದರೆ? ಎಂಬ ಹೆದರಿಕೆ, ಬೇರೆಯವರು ತಮ್ಮನ್ನು ನೋಡಿ ನಗುತ್ತಾರೆ ಎಂಬ ಸಂದೇಹ ಈ ಎಲ್ಲವೂ ಸೇರಿ ಹೆಚ್ಚಿನ ಮಹಿಳೆಯರು ಒಂದೋ ನೃತ್ಯ ಕಲಿಯುವ ಗೋಜಿಗೇ ಹೋಗುವುದಿಲ್ಲ, ಇಲ್ಲವೇ ಆರಂಭಶೂರತ್ವದಿಂದ ಸೇರಿದರೂ  ಒಂದೆರಡು ತಿಂಗಳಲ್ಲಿ ಬಿಟ್ಟುಬಿಡುತ್ತಾರೆ.‘ನೃತ್ಯ’ ಕಲೆಗಳ ಪ್ರಕಾರದಲ್ಲಿಯೇ ಒಂದು ರೀತಿಯ ‘ಶಿಸ್ತು’ ಅಪೇಕ್ಷಿಸುವಂಥದ್ದು. ದೇಹದ- ಮನಸ್ಸಿನ ಸಾಮರ್ಥ್ಯ, ತರಗತಿಯ ಸಮಯದ ಶಿಸ್ತು, ಕ್ರಮಬದ್ಧವಾಗಿ ಕಲಿಯಬೇಕಾದ ಅಗತ್ಯ  ಇವು ನೃತ್ಯ ಕಲಿಕೆಯ ಅಂಗಗಳು. ಹಾಗಾಗಿ ಸಂಸಾರೀ -ಉದ್ಯೋಗಿ ಮಹಿಳೆಗೆ ಇದು ಒಡ್ಡುವ ತಡೆಗಳೂ ಅಧಿಕವೇ. ತರಗತಿಗೆ ನಿಯಮಿತವಾಗಿ ಬರಲು ಸಾಧ್ಯವಾಗದಿರುವುದು, ಕುಟುಂಬದ ಜವಾಬ್ದಾರಿಗಳು, ಆರೋಗ್ಯದ ಸಮಸ್ಯೆಗಳು ಇವು ನೃತ್ಯ ಕಲಿಕೆಯನ್ನು ಕಷ್ಟವೆನಿಸುವಂತೆ ಮಾಡಬಹುದು.ಆದರೆ ಈ ಎಲ್ಲವನ್ನೂ ಮೀರಿ ತಮ್ಮ ಆನಂದಕ್ಕಾಗಿ ಕಲಿಯುವ ನನ್ನ ಈ ‘ಹಿರಿಯ’ ಶಿಷ್ಯೆಯರನ್ನು ನೋಡಿದಾಗ ಮನೋವೈದ್ಯೆಯಾಗಿ ನಾನು  ಕಂಡುಕೊಂಡದ್ದು ಈ ಅಂಶಗಳನ್ನು.ಈ ಮಹಿಳೆಯರು ನೃತ್ಯ ಕಲಿಕೆಯಿಂದ ಒಂದು ಶಿಸ್ತಿಗೆ ಒಳಗಾಗಿದ್ದಾರೆ. ಮಕ್ಕಳನ್ನು ಒಳಗೆ  ಕಲಿಯಲು ಬಿಟ್ಟು., ತಾವು ಹೊರಗೆ ಬೇಡದ ಗಾಸಿಪ್ ಮಾಡುವ ತಾಯಂದಿರಿಗೆ ಮಾದರಿಯಾಗಿದ್ದಾರೆ.ತಾವೇ ಸ್ವತಃ ವಿದ್ಯೆ ಕಲಿಯುವುದು ಆ ತಾಯಂದಿರನ್ನು ಮಕ್ಕಳ ಮೇಲೆ ತಮ್ಮ ಆಸೆಗಳ ಒತ್ತಡ ಹೇರದಂತೆ ತಡೆಯುತ್ತದೆ. ಮಕ್ಕಳು ‘ಬೋಧಿಸುವುದನ್ನು ಬದುಕಿ ತೋರಿಸುವ’ ತಾಯಿಯನ್ನು ಅನುಸರಿಸುವ ಸಾಧ್ಯತೆ ಹೆಚ್ಚು.‘ನೀನು ಡಾನ್ಸ್ ಮಾಡ್ತೀಯಾ?’ ಎಂದು ಮೊದ ಮೊದಲಲ್ಲಿ ಕೇಳುವ ಗಂಡ- ಅತ್ತೆ- ಮಾವ -ಮಕ್ಕಳೂ ಕ್ರಮೇಣ ನೃತ್ಯ ನೋಡಲು ತೊಡಗುತ್ತಾರೆ. ಪತ್ನಿ/ಸೊಸೆ/ಅಮ್ಮನ ‘ವರ್ಷಕ್ಕೊಂದು’ ಕಾರ್ಯಕ್ರಮಕ್ಕೂ ಅತಿ ಉತ್ಸಾಹದಿಂದ ಬರುತ್ತಾರೆ, ತಮ್ಮವರನ್ನು ಸೇರಿಸುತ್ತಾರೆ. ಇದು ಆ ಮಹಿಳೆಗೆ ತರುವ ಸಂತೋಷ ಹೇಳಲಾರದಷ್ಟು ಅಮೂಲ್ಯ.ಈ ಮಹಿಳೆಯರು ಗ್ರಹಿಕೆಯಲ್ಲಿ ಸಹಪಾಠಿ ಮಕ್ಕಳಿಗಿಂತ ಹಿಂದಿದ್ದರೂ, ಜೀವನಾನುಭವದಿಂದ ನೃತ್ಯದ ಅಭಿನಯ-ಸಾಹಿತ್ಯವನ್ನು ಹೆಚ್ಚು ಅರ್ಥ ಮಾಡಿಕೊಳ್ಳಬಲ್ಲರು,  ಅಭಿನಯಿಸಬಲ್ಲರು. ‘ಅಮ್ಮ’ನಿಗೆ ತಾನೇ ‘ಪೋಗದಿರಲೋ ರಂಗ’ ದಿನನಿತ್ಯ ಮಾಡಿ ಮಾಡಿ ಅನುಭವವಿರುವುದು? !“ನಮ್ಮದೇ ಬ್ಯಾಚ್ ಮಾಡಿಬಿಡಿ, ನಮಗೆ ದೊಡ್ಡವ್ರಿಗೆ ಚಿಕ್ಕ ಮಕ್ಕಳ ಜೊತೆಗೆ ಮಾಡೋದು ‘ಒಂಥರಾ’ ಅನ್ನಿಸುತ್ತೆ” ಎಂಬ ಬೇಡಿಕೆ ಸಾಮಾನ್ಯ. ಆದರೆ ಮಕ್ಕಳ ಜೊತೆ ಕಲಿಯುವುದು, ನಮಗಿಂತ ಕಿರಿಯ ವಯಸ್ಸಿನವರ ಜೊತೆ ‘ಸ್ಪರ್ಧಿಸುವುದು ನಮ್ಮ ವಯಸ್ಸನ್ನೂ ‘ಚಿಕ್ಕ’ದಾಗಿಸುತ್ತದೆ. ಪರಿಣಾಮ, ಬುದ್ಧಿ-ಮೈ-ಮನಸ್ಸು ಚುರುಕಾಗುತ್ತವೆ.‘ನಾವೇನು ಸ್ಟೇಜ್ ಆರ್ಟಿಸ್ಟ್ ಆಗಬೇಕೆ, ನೋಡೋವ್ರಾದ್ರೂ ಯಾರು?’ ಎಂದುಕೊಳ್ಳುವ ಮಹಿಳೆಯರೂ ಇಲ್ಲದಿಲ್ಲ. ವಾರ್ಷಿಕೋತ್ಸವದ ಕಾರ್ಯಕ್ರಮವಷ್ಟೇ ಆದರೂ ನೃತ್ಯ ‘ಮೇಕಪ್’ ಕಲಿಸುತ್ತದೆ, ಬಿಡುವಿಲ್ಲದ ತರಬೇತಿ ಜೀವನೋತ್ಸಾಹ ಹೆಚ್ಚಿಸುತ್ತದೆ, ವೇದಿಕೆಯ ಮೇಲೆ ಜನರೆದುರು ನರ್ತಿಸುವುದು ದೇಹ-ಮನಸ್ಸುಗಳ ಕೀಳರಿಮೆ ತೆಗೆಯುತ್ತದೆ.ನನ್ನ ‘ಹಿರಿಯ’ ಶಿಷ್ಯೆಯರಲ್ಲಿ ಮಧುಮೇಹಿಗಳಿದ್ದಾರೆ, ಬಿ.ಪಿ. ಇರುವವರಿದ್ದಾರೆ, ಥೈರಾಯಿಡ್‌ ತೊಂದರೆ ಇದ್ದವರೂ ಇದ್ದಾರೆ. ಅದು ನಿಯಂತ್ರಣದಲ್ಲಿರಲು, ಔಷಧಿ ಬೇಕು. ‘ನೃತ್ಯ’ ಈ ಎಲ್ಲಕ್ಕೂ ಒಂದು ಚಿಕಿತ್ಸಾ ಕ್ರಮ ಎಂಬ ಸಂಶೋಧನೆಗಳಿವೆ. ನೃತ್ಯ ಮನಸ್ಸು- ದೇಹದ ವ್ಯಾಯಾಮ. ಈ ಎಲ್ಲಾ ಕಾಯಿಲೆಗಳಿಗೂ ವ್ಯಾಯಾಮ ಬೇಕೇ ಬೇಕು. ಈ ಎಲ್ಲರಿಗೂ ನೃತ್ಯ ಒಂದು ‘ಹೆಲ್ತ್ ಟಾನಿಕ್’.ಮೊನ್ನೆ ‘ಜೂನಿಯರ್’ ಕಟ್ಟಿದ ಈ ‘ಸೀನಿಯರ್’ ವಿದ್ಯಾರ್ಥಿಗಳಲ್ಲಿ ಒಬ್ಬರು ಹೇಳಿದ್ದು “ಮೊನ್ನೆ ಪರೀಕ್ಷೆಯಲ್ಲಿ ನನ್ನ ಪಕ್ಕ ಒಂದು ಪುಟ್ಟ  ಹುಡುಗ ಬರೆಯಲು ಕೂತಿದ್ದ. ನನ್ನ ಹತ್ತಿರ ನೀವು ಎಕ್ಸಾಮಿನರ್ರಾ? ಅಂದ. ‘ಇಲ್ಲ ನಾನೂ ಬರೆಯುವವಳೇ’ ಎಂದೆ. ಆ ಮೇಲೆ ತುಂಬಾ ಸಲ ಅವನು ಅಂದಿದ್ದು “ಇದು ಜೂನಿಯರ್, ಸುಲಭ, ಸೀನಿಯರ್ ಕಷ್ಟ!” ನಾನು ನಕ್ಕು, ಸೀನಿಯರ್‌ಗೆ ಸಿಗ್ತೀನಿ” ಅಂತ ಹೇಳಿ ಬಂದೆ”!  ‘ಸೋಮಾರಿ ಆಂಟಿ’ ಯರಾಗುವ ಬದಲು ‘ಪುಟಿದೇಳುವ ಪುಟ್ಟಿ’ ಯರಾಗಿರುವ ಈ ನೃತ್ಯ-ಸಂಗೀತ- ಮತ್ಯಾವುದೋ ವಿದ್ಯೆ ಕಲಿಯುವ ಮಹಿಳೆಯರ ಪ್ರವೃತ್ತಿ ಮಹಿಳಾ ಪ್ರಗತಿ-ಸುಖೀ ಸ್ತ್ರೀತನದ ಒಂದು ಮೆಟ್ಟಿಲು ಜಿಗಿದಂತೆ ಅಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.