ಶನಿವಾರ, ಮಾರ್ಚ್ 6, 2021
29 °C
ಮಕ್ಕಳ ಕಥೆ

ಪುಟ್ಟಜ್ಜಿ ಸೈಬರ್ ಕೆಫೆಗೆ ಹೋದದ್ದು

ಡಾ. ನಾ. ಡಿಸೋಜ Updated:

ಅಕ್ಷರ ಗಾತ್ರ : | |

ಪುಟ್ಟಜ್ಜಿ ಸೈಬರ್ ಕೆಫೆಗೆ ಹೋದದ್ದು

ಮೊನ್ನೆ ಪುಟ್ಟಜ್ಜಿ ಪೇಟೆಗೆ ಹೋದಳು ತನ್ನ ಮೊಮ್ಮಗನ ಜತೆ

ಊರಿಗೆ ರಜೆಯಲಿ ಬಂದಾತ ತೋರಿದ ಅಜ್ಜಿಗೆ ಪೇಟೆಯನು

ಪೇಟೆಯ ಬಿಂಕ ಬಿನ್ನಾಣ ನೋಡೆಂದ ಅಜ್ಜಿಯ ಬಳಿ ನಿಂತು

ತಾನು ಪೇಟೆಯವ ಎಂಬ ಜಂಬವನು ಅವಳ ಎದಿರು ಮೆರೆದು

‘ಅಜ್ಜಿ, ನೀನು ಸೈಬರ್ ಕೆಫೆ ನೋಡಿದ್ದೀಯ?’ ಎಂದು ಕೇಳಿದ ಸೋಮ, ಪೇಟೆಯಲ್ಲಿ ಹೋಗುತ್ತಿರುವಾಗ.

‘ನಂ ಊರಾಗೆ ಕೃಷ್ಣ ಕೆಫೆ ಅಂತ ಒಂದಿದೆ. ಅದಕ್ಕೆ ಯಾವಾಗಾರ ಹೋಗಿನಿ’ ಎಂದಳು ಪುಟ್ಟಜ್ಜಿ.‘ಥು ಅದಲ್ಲ ಕಣಜ್ಜಿ, ಹತ್ತು ಹದಿನೈದು ಕಂಪ್ಯೂಟರುಗಳು ಇರತಾವೆ, ಹುಡುಗರು, ಹುಡುಗಿಯರು ಹೆಂಗಸರು ಎಲ್ಲ ಬರತಾರೆ. ಅಲ್ಲಿ ಕಂಪ್ಯುಟರ್ ಮುಂದೆ ಕೂತು ಗೇಮ್ಸ್‌ ಆಡತಾರೆ...’

‘ಅದೇನು ಹಂಗಂದ್ರೆ?’

‘ಆಟ...’

‘ಆಟ ಆಡೋದು ಬಯಲಿನಾಗೆ ಅಲ್ವಾ?’

‘ಕಂಪ್ಯೂಟರನಾಗು ಆಡ್ತಾರೆ... ಅದಕ್ಕೆ ತುಂಬಾ ಡಿಮ್ಯಾಂಡು....ನಾನೊಂದು ಆಟ ತೋರಸ್ತೀನಿ ಬಾ’.‘ಬೇಡ ಸೋಮಣ್ಣ ಬಸ್ ಬರೋ ಟೈಮು’.

‘ಬಾರಜ್ಜಿ, ಬಸ್ ಬರೋದು ಐದು ಗಂಟೆಗಲ್ವಾ... ಅಲ್ಲಿಗೆ ಮುದುಕೀರೆಲ್ಲ ಬರತಾರೆ.... ಬಾ...’

ಸೋಮಣ್ಣ ಸೈಬರ್ ಕೆಫೆಯೊಂದರೊಳಗೆ ಅಜ್ಜಿಯನ್ನ ಕರೆದೊಯ್ದ. ಅದನ್ನು ನೋಡಿಯೇ ಅಜ್ಜಿ ಬೆರಗಾದಳು. ಕುರ್ಚಿಗಳು ಮೇಜುಗಳು ಒಂದೊಂದರ ಮೇಲೂ ಒಂದೊಂದು ಕರಿ ಪೆಟ್ಟಿಗೆ, ಅದರ ಮುಂದೆ ಕುಳಿತ ಮಕ್ಕಳು ಗಂಡಸರು, ಹೆಂಗಸರು. ಎಲ್ಲ ಕೇಕೆ ಹಾಕುತ್ತಿದ್ದಾರೆ, ಕೂಗುತ್ತಿದ್ದಾರೆ. ತರಹೇವಾರಿ ಸದ್ದು.ಸೋಮಣ್ಣ ಕಾಸು ಕೊಟ್ಟು ಒಂದು ಸೀಟು ಪಡೆದ. ಒಂದು ಕುರ್ಚಿಯ ಮುಂದೆ ಆತ ಹೋಗಿ ಕುಳಿತ. ಅಜ್ಜಿಗೂ ಕುಳಿತುಕೊಳ್ಳಲು ಒಂದು ಮೂರು ಕಾಲಿನ ಕುರ್ಚಿ ಇರಿಸಿದ. ‘ಅಜ್ಜಿ ಈಗ ಗಮ್ಮತ್ತು ನೋಡು’ ಎಂದು ತನ್ನ ಮುಂದಿನ ಕಪ್ಪುಪೆಟ್ಟಿಗೆಯ ಗುಂಡಿ ಒತ್ತಿದ. ಅಜ್ಜಿ ನೋಡಿಯೇ ನೋಡಿದಳು.

ಆಕಾಶಕೆ ತಿವಿಯುವ ಬಿಲ್ಡಿಂಗ್‌ಗಳು, ಹಿಂದೆ ಮುಂದೆ ಕಾರುಗಳು

ಅತ್ತಿಂದಿತ್ತ ತಿರುಗಾಡುವ ಜನ, ಲಾರಿ ಬಸ್ಸು, ಧಾವಿಸಿ ಓಡುವ ರೈಲು

ಇವುಗಳ ನಡುವೆ ಕಾಣಿಸಿ ಕೊಂಡಿತು ಕಪ್ಪನೆಯ ಹೊಸ ಕಾರು

‘ಇದು ನನ್ನದು ಸ್ಯಾಂಟ್ರೋ’ ಅಜ್ಜಿ ಬೆರಗಾದಳು ಸೋಮನ ನುಡಿಗೆ

ಅಜ್ಜಿ ಬೆದರುಗಣ್ಣಿನಲಿ ನೋಡೆ ಸೋಮನ ಸ್ಯಾಂಟ್ರೋ ಹೊರಟಿತ್ತು

ವಾಹನಗಳ ಹಿಂದಿಕ್ಕಿ ಸೇತುವೆಗಳ ದಾಟಿ ಸಿಗ್ನಲ್ ಲೈಟ್‌ಗಳ ಮೀರಿ

ಸ್ಯಾಂಟ್ರೋ ಡಿಕ್ಕಿ ಹೊಡೆಯಿತು ಎದುರಾದ ಲಾರಿ ಕಾರು ಬಸ್ಸಿಗೆ

ರಸ್ತೆ ಪಕ್ಕದ ಬೀದಿಯ ದೀಪ ಪಾಪ ಮಲಗಿತು ಸ್ಯಾಂಟ್ರೋ ರಭಸಕ್ಕೆ

ಅಂಗಡಿಯೊಳಗೆ ನುಗ್ಗಿತು ಕಾರು, ಶಾಲಾ ಮಕ್ಕಳ ದೂರ ಅಟ್ಟಿತು

ಊಟದ ಹೋಟೇಲಿಗೆ ಹೋಗಿ ಊಟ ಮಾಡುವವರ ಹೆದರಿಸಿತು

ರಸ್ತೆ ಪಕ್ಕದ ತರಕಾರಿಯನೆಲ್ಲ ಇಡೀ ರಸ್ತೆಗೆ ತೂರಿ ಮತ್ತೆ ಪರಾರಿ

ಇತರೆ ಕಾರುಗಳ ಪಲ್ಟಿ ಹೊಡೆಯಿಸಿ ಬೆಂಕಿ ಹೊತ್ತಿಸಿತು ಸ್ಯಾಂಟ್ರೊ

ಸೋಮು ಸಂಭ್ರಮದಿಂದ ಕುಳಿತ ಕುರ್ಚಿಯಲಿ ಕುಣಿದಾಡೆ

ಬಿದ್ದ ಕಾರನು ಎದ್ದು ನಿಲ್ಲಿಸಿದ ಹೊತ್ತಿದ ಬೆಂಕಿಯ ನಂದಿಸಿದ

ಮುರಿದು ಬಿದ್ದ ಕಾರನು ಗುಂಡಿಯನೊತ್ತಿ ರಿಪೇರಿ ಮಾಡಿ ನಕ್ಕ

ನೋಡಿದೆಯಾ ಅಜ್ಜಿ ಸೈಬರ್ ಗೇಮು ಎಂದು ಕೇಳಿದ ಸಡಗರದಿ.ಒಂದು ಗಂಟೆ ಆಗಲಿಕ್ಕಿಲ್ಲ ಅಜ್ಜಿ ಮೊಮ್ಮಗ ಅಲ್ಲಿಂದ ಹೊರಟರು. ಮೊಮ್ಮಗ ಅಜ್ಜಿಗೆ ಕೇಳಿದ: ‘ಚೆನ್ನಾಗಿತ್ತ ಅಜ್ಜಿ ಗೇಮು?’

‘ಚೆನ್ನಾಗಿತ್ತಪ್ಪ... ನೀನು ಬೋ ಬುದ್ಧಿವಂತ ಅದೆ ಬಿಡು’ ಎಂದಳು ಅಜ್ಜಿ. ಮತ್ತೆ ಕೇಳಿದಳು: ‘ಅಲ್ಲಿ ಬಂದೋರೆಲ್ಲ ಇದೇ ಆಟ ಆಡತಿದ್ರ?’.‘ಹೌದು. ಬೇರೆ ಬೇರೆ ಆಟ ಬೇರೆ ಬೇರೆ ಕಾರು... ಗನ್ ಮ್ಯಾನ್, ಜಂಗಲೀ ಶಪರ್ಡ, ಬ್ಯಾಟ್‌ಮಾನ್ ಅಂತೆಲ್ಲ ಆಟಾನು ಉಂಟು’ ಎಂದು ಮೊಮ್ಮಗ ಬಣ್ಣಿಸಿದ. ಅಜ್ಜಿ ಮೂಗಿನ ಮೇಲೆ ಬೆರಳಿರಿಸಿಕೊಂಡಳು. ಊರಿಗೆ ಹೋಗುವ ಬಸ್ಸು ನಿಂತಿತ್ತು. ಇಬ್ಬರೂ ಹತ್ತಿ ಕುಳಿತರು. ಬಸ್ಸು ಹೊರಟು ಊರ ಗಡಿದಾಟಿ ತುಸು ಮುಂದೆ ಬಂದಾಗ ತಟ್ಟನೆ ನಿಂತು ಚಾಲಕ ಗಡಿಬಿಡಿಸಿ ಇಳಿದ.‘ಏನಾಯ್ತಣ್ಣೋ’ ಎಂದು ಕಂಡಕ್ಟರ್ ಕರಿಯಣ್ಣ ಹಿಂದೆಯೇ ಇಳಿದ. ಇಬ್ಬರೂ ಸೇರಿ ಅಲ್ಲಿ ಎಳೆದು, ಇಲ್ಲಿ ತಿವಿದು, ಇನ್ನೊಂದು ಕಡೆ ಗುದ್ದಿ ನೋಡಿದರು. ಅವರ ಜೊತೆ ಜನರೂ ಸೇರಿಕೊಂಡರು. ಬಸ್ಸು ಸ್ಟಾರ್ಟ್‌ ಆಗಲಿಲ್ಲ. ಅಜ್ಜಿ ನಿದ್ದೆ ಹೋಗಿದ್ದ ಸೋಮನನ್ನ ಎಚ್ಚರಿಸಿ ಹೇಳಿದಳು: ‘ಬಸ್ಸಿಗೆ ಏನೋ ಆಗೈತಂತೆ ನೋಡು ಸೋಮಣ್ಣ, ನಾವು ಊರು ಸೇರಬೇಕಲ್ಲ’.ಸೋಮಣ್ಣ ಅಜ್ಜಿ ಮುಖವನ್ನ ದುರದುರು ನೋಡಿದ. ‘ಸ್ಯಾಂಟ್ರೋ ಪಾಂಟ್ರೋ ಅಂದಿ, ನೋಡು ನಮ್ಮ ಲಕ್ಷ್ಮಿ ಬಸ್ಸಿಗೆ ಏನಾಗದೆ ಅಂತ’      ಅಂಗಲಾಚಿದಳು ಅಜ್ಜಿ.‘ನನಗಿದೆಲ್ಲ ತಿಳಿಯಾಕಿಲ್ಲ ಬಿಡು’ ಎಂದು ಅಜ್ಜಿಯ ಕೈ ಕೊಸರಿಕೊಂಡ ಸೋಮ.

‘ಬಯಲಾಗೆ ಆಡಿದ್ರೆ ಎಲ್ಲ ಕಲೀಬೌದು... ಕೋಣೇಲಿ ಕೂತು ಆಡಿದ್ರೆ ಆಗೋದೇ ಹೀಗೆ’ ಎಂದು ಅಜ್ಜಿ ಸೋಮನ ಮುಖ ತಿವಿದಳು. ಜನರ ಮುಂದೆ ಅವಮಾನವಾಗಿ ಸೋಮ ತಲೆ ತಗ್ಗಿಸಿದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.