ಬುಧವಾರ, ಮಾರ್ಚ್ 3, 2021
31 °C

ಪುಟ್ಟಣ್ಣ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟಣ್ಣ ಸ್ಮರಣೆ

ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್. ತಮ್ಮ ಚಿತ್ರಗಳಲ್ಲಿ ಸ್ತ್ರೀಯರನ್ನು ಉನ್ನತವಾಗಿ ಬಿಂಬಿಸಿ ಕನ್ನಡದ ಮಹಿಳಾ ಪ್ರೇಕ್ಷಕರ ಮನಸಿನಲ್ಲಿ ಮನೆಮಾಡಿದವರು ಪುಟ್ಟಣ್ಣ. ನಿರ್ದೇಶಕರಿಗೆ ದಾರಿದೀಪವಾಗಿ, ಲೆಕ್ಕವಿಲ್ಲದಷ್ಟು ಕಲಾವಿದರನ್ನು ಬೆಳಕಿಗೆ ತಂದವರು.ಹಲವು ಕಾದಂಬರಿಗಳನ್ನು ಚಿತ್ರರೂಪಕ್ಕೆ ತಂದ ಅವರ ನಿರ್ದೇಶನ ಕಾರ್ಯ ಆರಂಭವಾಗಿದ್ದು ಮಲಯಾಳಂನಲ್ಲ. ಮುಂದೆ ಕನ್ನಡದಲ್ಲಿ ಖ್ಯಾತರಾಗಿ ಹಿಂದಿ, ತಮಿಳು, ತೆಲುಗಿನಲ್ಲೂ ಸಿನಿಮಾ ನಿರ್ದೇಶಿಸಿದರು. ಅವರ ನಿರ್ದೇಶನದ ‘ಗೆಜ್ಜೆಪೂಜೆ’, ‘ಶರಪಂಜರ’, ‘ರಂಗನಾಯಕಿ’, ‘ಉಪಾಸನೆ’ಯಂಥ ಚಿತ್ರಗಳನ್ನು  ಎಂದಿಗೂ ಮರೆಯಲಾಗದು.ನಿರ್ದೇಶಕರ ನಿರ್ದೇಶಕ ಪುಟ್ಟಣ್ಣನವರು ತೀರಿಕೊಂಡು ಇಂದಿಗೆ (ಜೂನ್ 5) ಸರಿಯಾಗಿ ಮೂವತ್ತು ವರ್ಷಗಳೇ ಸಂದವು. ಅವರ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ‘ಪುಟ್ಟಣ್ಣ ಕಣಗಾಲ್ ಸವಿನೆನಪು’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ. ಇಂದು ಸಂಜೆ 6 ಗಂಟೆಗೆ ಭಗವಾನ್ ಮಹಾವೀರ್ ರಸ್ತೆಯಲ್ಲಿರುವ ವಾರ್ತಾ ಭವನದ ಸುಲೋಚನಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.‘ಹಳೆಯ ಸಿನಿ ಕರ್ತರನ್ನು ನೆನೆಯುವ ಹೊಸ ಸರಣಿಯೊಂದನ್ನು ಆರಂಭಿಸಬೇಕು ಎಂದು ಯೋಚಿಸುತ್ತಿದ್ದೆವು. ಅದಕ್ಕೆ ಸರಿಯಾಗಿ ಕೂಡಿ ಬಂದಿದ್ದು ಕಣಗಾಲರು. ಅವರು ತೀರಿಕೊಂಡು ಮೂವತ್ತು ವರ್ಷಗಳಾದವು. ಹಾಗಾಗಿ ಅವರಿಂದಲೇ ಈ ಕಾರ್ಯಕ್ರಮವನ್ನು ಆರಂಭಿದಲು ನಿರ್ಧರಿಸಿದೆವು. ಇನ್ನು ಮುಂದೆ ಪ್ರತಿ ತಿಂಗಳೂ ಇಂಥ ಒಂದು ಕಾರ್ಯಕ್ರಮ ಅಕಾಡೆಮಿ ವತಿಯಿಂದ ನಡೆಯುತ್ತದೆ’ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು.ರಾಜೇಂದ್ರ ಸಿಂಗ್ ಬಾಬು ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ನಂತರ ಹಿರಿಯ ಕಲಾವಿದ ಎಸ್. ಶಿವರಾಂ ಮತ್ತು ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರು ಪುಟ್ಟಣ್ಣ ಕಣಗಾಲರ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಳ್ಳುವರು. ಅದಾದ ನಂತರ ಇಂದಿನ ಯುವಜನರು ಪುಟ್ಟಣ್ಣ ಕಣಗಾಲರನ್ನು ಯಾವರೀತಿ ಗ್ರಹಿಸುತ್ತಾರೆ ಎಂಬ ವಿಚಾರವಾಗಿ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಮಾತನಾಡುತ್ತಾರೆ.ಇದೇ ಸಂದರ್ಭದಲ್ಲಿ ವಾರ್ತಾ ಇಲಾಖೆ ನಿರ್ಮಿಸಿದ ಪುಟ್ಟಣ್ಣನವರ ಕುರಿತ ಒಂಬತ್ತು ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಪ್ರಗತಿ ಅಶ್ವಥ್ ನಾರಾಯಣ್ ಅವರು ಸೆರೆಹಿಡಿದಿರುವ ಪುಟ್ಟಣ್ಣನವರ ಅಪರೂಪದ ಛಾಯಾಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ. ಪುಟ್ಟಣ್ಣ ಅವರ ಪತ್ನಿ ನಾಗಲಕ್ಷ್ಮೀ ಕಣಗಾಲ್ ಅವರನ್ನು ಸನ್ಮಾನಿಸುವುದೂ ಕಾರ್ಯಕ್ರಮದ ಒಂದು ಭಾಗ.ವಾರ್ತಾ ಸಚಿವ ಆರ್. ರೋಷನ್ ಬೇಗ್, ವಸತಿ ಸಚಿವ ಅಂಬರೀಷ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಕಲಾವಿದರಾದ ಬಿ. ಸರೋಜಾದೇವಿ, ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.