ಪುಟ್ಟಯ್ಯನವರೆಂಬ ದೊಡ್ಡಯ್ಯ

ಶುಕ್ರವಾರ, ಜೂಲೈ 19, 2019
26 °C

ಪುಟ್ಟಯ್ಯನವರೆಂಬ ದೊಡ್ಡಯ್ಯ

Published:
Updated:

ಶ್ರೀಮಾನ್ ಪುಟ್ಟಯ್ಯನವರು ಬಿ.ಎ. ಪದವಿಯನ್ನು ಸಂಪಾದಿಸಿದ್ದವರಾದರೂ ಕನ್ನಡ ಬರೆಯುವುದಕ್ಕೆ ಹೊರಟಿದ್ದರಲ್ಲಾ ಎಂಬುದು ನನಗೆ ಅವರ ವಿಷಯದಲ್ಲಿ ಆದ ಮೊದಲನೆಯ ಮೆಚ್ಚಿಕೆ. ಈಗ್ಗೆ ಸುಮಾರು ನಲವತ್ತು ವರ್ಷಗಳ ಹಿಂದೆ ಇಂಗ್ಲಿಷ್ ವಿದ್ಯಾವಂತರಲ್ಲಿ, ಕನ್ನಡಕ್ಕೆ ಗಣನೆ ಎಷ್ಟು ಮಾತ್ರವಿತ್ತು ಎಂಬುದನ್ನು ಇಂದಿನ ಯುವಕರು ಊಹಿಸಲಾರರೋ ಏನೋ! ಆ ಕಾಲದ ಸಭೆ ಸಮಾರಂಭಗಳಲ್ಲಿ ಇಂಗ್ಲಿಷ್ ಕಲಿತವರು ಕನ್ನಡ ಬರೆಯುವುದು, ಕನ್ನಡ ಮಾತನಾಡುವುದು, ಎಂದರೆ ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತವರು ಬೀದಿ ನೆಲದ ಮೇಲೆ ಬಡವರೊಡನೆ ಓಡಾಡಿದಂತೆ ಎಂಬ ಭಾವನೆ ಆಗ ಸಾಮಾನ್ಯವಾಗಿತ್ತು. ಅದು ಸರಿಯಾದ ಭಾವನೆಯೆಂದು ಇಂಗ್ಲಿಷ್ ಬಾರದವರೂ ಒಪ್ಪಿಕೊಂಡಿದ್ದರು. ಅಂಥಾ ಕಾಲದಲ್ಲಿ ರಾಮಯ್ಯನವರೂ ಪುಟ್ಟಯ್ಯನವರೂ ಕನ್ನಡಕ್ಕೆ ಬಂದದ್ದು ನನಗೂ ಒಂದು ತರದ ಪ್ರೋತ್ಸಾಹವೇ ಆಯಿತು. ಆಮೇಲೆ ಪುಟ್ಟಯ್ಯನವರು ಇಂಗ್ಲೆಂಡಿಗೆ ಹೋಗಿ ಅಲ್ಲಿಂದ ಆ ದೇಶದ ಪ್ರಗತಿ ನಾಗರಿಕತೆಗಳನ್ನು ಕುರಿತು ಕನ್ನಡದಲ್ಲಿ `ಒಕ್ಕಲಿಗರ ಪತ್ರಿಕೆ~ಗೆ ಲೇಖನಗಳನ್ನು ಕಳುಹಿಸುತ್ತಿದ್ದದ್ದು ಅವರಲ್ಲಿದ್ದ ಮೆಚ್ಚಿಕೆಯನ್ನು ಇಮ್ಮಡಿಗೊಳಿಸಿತು. ಕಡೆ ಕಡೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಬಂಧದಲ್ಲಿಯೂ, ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್-ಕನ್ನಡ ನಿಘಂಟಿನ ಸಂಬಂಧದಲ್ಲಿಯೂ ಅವರೂ ನಾನೂ ಹಲವು ವರ್ಷ ಸಹೋದ್ಯೋಗಿಗಳಾಗಿದ್ದೆವು. ಕನ್ನಡದ ವಿಷಯದಲ್ಲಿಯೂ ದೇಶದಲ್ಲಿ ಜ್ಞಾನಪ್ರಸಾರ ಮಾಡಬೇಕೆಂಬ ವಿಷಯದಲ್ಲಿಯೂ ಅವರಿಗಿದ್ದ ಉತ್ಸಾಹ ಮೇರೆಯಿಲ್ಲದುದು.ಅವರು ನಿಘಂಟು ಸಮಿತಿಯ ಕೆಲಸಗಳನ್ನು ಎಂಥ ಶ್ರದ್ಧೆಯಿಂದ ಮಾಡುತ್ತಿದ್ದರೆಂಬುದನ್ನು ಕಣ್ಣಾರೆ ಕಂಡದ್ದು ನನಗೆ ಅವರ ವಿಷಯದಲ್ಲಿ ಪೂಜ್ಯ ಬುದ್ಧಿಯನ್ನುಂಟುಮಾಡಿತು. ಒಂದು ದಿನವಾದರೂ ಅವರು ತಾವು ನೋಡಬೇಕಾಗಿದ್ದ ಕರಡು ಬರಹವನ್ನು ನೋಡದೆ, ಅದರಲ್ಲಿ ತಿದ್ದಬೇಕೆಂದು ತೋರಿದ್ದನ್ನು ಆಲೋಚನೆ ಮಾಡಿ ತಿದ್ದದೆ, ಮೀಟಿಂಗಿಗೆ ಬಂದವರಲ್ಲ. ಇಂಥಾ ಮೀಟಿಂಗುಗಳು ತಿಂಗಳಿಗೆರಡು ಸಲ ನಡೆಯುತ್ತಿದ್ದದ್ದರಿಂದ ಆ ಕೆಲಸದ ಪ್ರಯಾಸ ಹೆಚ್ಚಾಗಿತ್ತು. ಅದು ಬಹು ತಾಳ್ಮೆಯನ್ನೂ ಜಾಗರೂಕತೆಯನ್ನೂ ಅಪೇಕ್ಷಿಸುವ ಮುಜುಗರದ ಕುಸುರಿಯ ಕೆಲಸ.ಪುಟ್ಟಯ್ಯನವರು ಮೈಗೆ ಆಲಸಿಕೆಯಾಗಿದ್ದಾಗ ಕೂಡ ಚರ್ಚಾರ್ಹವೆಂದು ತೋರಿದ ಯಾವ ಅಂಶದಲ್ಲಿಯೂ ಉದಾಸೀನರಾಗಿದ್ದವರಲ್ಲ; ಯಾವ ಉತ್ತರವನ್ನೂ ಪರೀಕ್ಷೆ ಮಾಡದೆ ಅಂಗೀಕರಿಸಿದವರಲ್ಲ. ನಿಘಂಟು ಪ್ರಮಾಣಭೂತವಾಗಬೇಕೆಂಬ ಉದ್ದೇಶದಿಂದ ಅವರು ಪಡುತ್ತಿದ್ದ ಶ್ರಮವು ಅವರ ವಿಷಯದಲ್ಲಿ ನಮಗಿದ್ದ ಗೌರವವನ್ನು ವೃದ್ಧಿಪಡಿಸಿತು.ಅದೇ ಸಂದರ್ಭದಲ್ಲಿ ನಮಗೆ ಚೆನ್ನಾಗಿ ತೋರಿಬಂದದ್ದು ಇಂಗ್ಲಿಷ್ ಸಾಹಿತ್ಯ ವಿಚಾರದಲ್ಲಿ ಅವರಿಗಿದ್ದ ಶ್ರದ್ಧೆ ಮತ್ತು ಸಂಸ್ಕೃತದಲ್ಲಿ ಅವರಿಗಿದ್ದ ಭಕ್ತಿ. ಇಂಗ್ಲಿಷ್ ಪದಗಳ ಮತ್ತು ಭಾಷಾ ಮರ್ಯಾದೆಯ ಸ್ವಭಾವವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ಅವರಲ್ಲಿ ಎದ್ದು ಕಾಣುತ್ತಿತ್ತು. ಸಂಸ್ಕೃತದ ವಿಷಯದಲ್ಲಾದರೋ ಅವರ ಮಮತೆಯು ಅವರ ಕನ್ನಡದ ಅಭಿಮಾನಕ್ಕಿಂತ ಮಿಂಚಿದ್ದೋ ಎಂದು ಶ್ರೀ ಬಿ.ಎಂ.ಶ್ರೀಕಂಠಯ್ಯನವರೂ ನಾನೂ ಅಂದುಕೊಳ್ಳುವಷ್ಟು ಮಟ್ಟಿಗೆ ತೋರುತ್ತಿತ್ತು. ಸಂಸ್ಕೃತ ಭಾಷೆಯ ವಿಷಯದಲ್ಲಿ ಮಾತ್ರವೇ ಅಲ್ಲ, ಸಂಸ್ಕೃತ ಸಾಹಿತ್ಯ, ಶಾಸ್ತ್ರ, ಚರಿತ್ರೆ, ಪ್ರಾಚೀನ ಸಂಪ್ರದಾಯ, ಪೂರ್ವಿಕರ ಕಲಾ ಸಂಸ್ಕೃತಿ, ಪೂರ್ವದ ಧರ್ಮವ್ಯವಸ್ಥೆ- ಈ ಎಲ್ಲ ಪುರಾತನ ವಿದ್ಯಾವೈದುಷ್ಯಗಳ ವಿಷಯದಲ್ಲಿಯೂ ಅವರ ಮಮತೆ ಶ್ರದ್ಧೆಗಳು ಅಂತರಂಗದೊಳಗಿನಿಂದ ಉಕ್ಕಿಬರುತ್ತಿದ್ದವು.ಅವರು ಸಮಾಜ ಸೇವೆಯ ರೂಪದಲ್ಲಿಯೂ ಲೋಕ ಮೈತ್ರಿಯ ದಾರಿಯಲ್ಲಿಯೂ ಮಾಡಿದ ಕಾರ್ಯಗಳನ್ನು ಪ್ರಶಂಸೆ ಮಾಡುವ ಯತ್ನಕ್ಕೆ ನಾನು ಕೈ ಹಾಕಲಾರೆ. ಅವರು ಎಷ್ಟೆಷ್ಟು ಸಂಸ್ಥೆಗಳಲ್ಲಿ ಹೇಗೆ ಹೇಗೆ ಕೆಲಸ ಮಾಡಿದರೆಂಬುದನ್ನು ಈ ಗ್ರಂಥ ತಿಳಿಸುತ್ತದೆ. ಒಂದಾನೊಂದು ಆಪ್ತಮಿತ್ರ ಗೋಷ್ಠಿಯಲ್ಲಿ ಅವರೂ ನಾನೂ ಬಹು ವರ್ಷಗಳ ಕಾಲ ಸಹಸದಸ್ಯರಾಗಿದ್ದೆವು. ಆಗ ಅವರಿಗೂ ನನಗೂ ಬಳಕೆ ಬಹಳ ಹೆಚ್ಚಾಯಿತು. ಆ ಗೋಷ್ಠಿಯ ಹಣಕಾಸುಗಳ ವ್ಯವಸ್ಥೆಯನ್ನೆಲ್ಲ ಆ ಸ್ನೇಹಿತರು ಪುಟ್ಟಯ್ಯನವರ ಪಾಲಿಗೆ ಬಿಟ್ಟಿದ್ದರು. ಆಗ ಗೊತ್ತಾಯಿತು ನಮಗೆ ಅವರ ನಿಷ್ಕರ್ಷೆ ಎಂಥಾದ್ದು, ಅವರ ಜಾಗರೂಕತೆ ಎಂಥಾದ್ದು ಮತ್ತು ಅವರ ನಿಯಮ ನಿಷ್ಠೆ ಎಂಥಾದ್ದು ಎಂಬುದು. ಪುಟ್ಟಯ್ಯನವರು ಸಾವಿರಾರು ರೂಪಾಯಿಗಳ ಲೆಕ್ಕವನ್ನು ಒಂದು ಕಾಸೂ ಹೆಚ್ಚು ಕಡಮೆಯಾಗದಂತೆ, ಮತ್ತು ಒಂದು ದಿವಸ ಹೆಚ್ಚು ಕಡಮೆಯಾಗದಂತೆ, ಬರೆದಿಟ್ಟು ಒಪ್ಪಿಸುತ್ತಿದ್ದರು.ಒಟ್ಟಿನ ಮೇಲೆ ನಮ್ಮ ಜನದಲ್ಲಿ ಸರ್ವತ್ರ ಎಂಥ ಗುಣಗಳು ಹರಡಿರಬೇಕೆಂದು ನಾವು ಆಶೆ ಪಡಬಹುದೋ ಅಂಥ ಗುಣಗಳನ್ನು ಪುಟ್ಟಯ್ಯನವರು ಸಂಪಾದಿಸಿಕೊಂಡಿದ್ದರು. ಮನೆತನದ ಹಿರಿಮೆಯಾಗಲಿ, ಸಿರಿಯಾಗಲಿ, ಮತ್ತಾವ ಹೊರಗಣ ಸಂದರ್ಭವಾಗಲಿ ಸಹಾಯಕ್ಕೆ ದೊರೆಯದೆ ಇದ್ದಾತನೊಬ್ಬನು ಕೇವಲ ಸ್ವಪ್ರಯತ್ನದಿಂದ ಜೀವನಾನುಕೂಲತೆಯನ್ನು ಸಂಪಾದಿಸಿಕೊಂಡು ಹೇಗೆ ನಾಲ್ಕು ಮಂದಿಗೆ ಪ್ರಯೋಜನಕಾರಿಯೂ ಗಣ್ಯನೂ ಆಗಬಹುದೆಂಬುದಕ್ಕೆ ಪುಟ್ಟಯ್ಯನವರ ಜೀವನ ನಿದರ್ಶನವಾಗಿದೆ. ಅವರಲ್ಲಿ ನಾವು ಯಾವ ಯಾವುದನ್ನು ಮೆಚ್ಚಿ ಸಂತೋಷಿಸಬಹುದೋ ಅದೆಲ್ಲ ಅವರ ಸ್ವಂತ ಕೃಷಿಯ, ಸ್ವಂತ ನಿಷ್ಠೆಯ, ಸ್ವಂತ ಶ್ರಮದ ಫಲ. ಅವರು ದೈನ್ಯದಿಂದ ಒಬ್ಬರಲ್ಲಿ ಹೋಗಿ ಬೇಡಿದವರಲ್ಲ.ಆತ್ಮಗೌರವವನ್ನು ಎಂದೂ ತೊರೆದವರಲ್ಲ. ಆದರೆ ಆತ್ಮಗೌರವವೆಂಬ ಹೆಸರಿನಿಂದ ದರ್ಪ ಅಟ್ಟಹಾಸಗಳನ್ನು ತೋರಿದವರೂ ಅಲ್ಲ. ಕಟುಮಾತೂ ಅಹಂಕಾರದ ನಡತೆಯೂ ಅವರಲ್ಲಿರಲಿಲ್ಲ. ವಿನಯ ಸರಸತೆಗಳು ಅವರ ಹುಟ್ಟು ಗುಣ. ಆದ್ದರಿಂದಲೇ ಅವರ ಮಿತ್ರಮಂಡಳಿ ಅಷ್ಟು ವಿಸ್ತಾರವಾಗಿದ್ದದ್ದು.ಅವರ ಗೃಹಜೀವನವನ್ನು ಕುರಿತು ಒಂದು ಮಾತನ್ನಾದರೂ ಹೇಳಬೇಕೆನ್ನಿಸುತ್ತದೆ. ಅವರೂ ಶ್ರೀ ಕೆ.ಎಚ್. ರಾಮಯ್ಯನವರೂ ಸಂಸಾರಿಗಳಿಗೆ ಆದರ್ಶಪ್ರಾಯರೆಂದು ನನ್ನ ತಿಳಿವಳಿಕೆ. ಇಬ್ಬರೂ ಒಂದೇರೀತಿ ಕುಟುಂಬ ವಾತ್ಸಲ್ಯವುಳ್ಳವರು. ಅವರ ಸಂತೋಷ ಸ್ಥಲಗಳು ಬೇರೆ ಎಷ್ಟಿದ್ದರೂ ಮನೆ ಅವರಿಗೆ ಎಲ್ಲಕ್ಕಿಂತಲೂ ಮೇಲಾದದ್ದು. ಕ್ಲಬ್ಬುಗಳಲ್ಲಿಯೂ ನಾಟಕ ಶಾಲೆಗಳಲ್ಲಿಯೂ ಸುಖವನ್ನರಸುವ ದೊಡ್ಡಮನುಷ್ಯರ ಸಂಖ್ಯೆ ಹೆಚ್ಚುತ್ತಿರುವ ಈ ಕಾಲದಲ್ಲಿ ಪುಟ್ಟಯ್ಯ ರಾಮಯ್ಯನವರಂಥವರ ಸ್ಮರಣೆ ಮನಸ್ಸಿಗೆ ಆಪ್ಯಾಯನಕಾರಿಯಾಗುತ್ತದೆ.

(ಪುಸ್ತಕ ವಿವರ- ಕೃತಿ: ನನ್ನ ತಂದೆ; ಲೇ: ರಾಧಾಕೃಷ್ಣ; ಬೆ: ರೂ. 150; ಪ್ರ: ಜಿಯಲಾಜಿಕಲ್ ಸೊಸೈಟಿ ಆಫ್ ಇಂಡಿಯಾ, 63, 12ನೇ ಅಡ್ಡರಸ್ತೆ, ಬಸಪ್ಪ ಲೇಔಟ್, ಗವೀಪುರಂ ಅಂಚೆ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry