ಪುಟ್ಟರಾಜರು ಸಂಗೀತ ಕ್ಷೇತ್ರದ ಸಾರ್ವಭೌಮ

7

ಪುಟ್ಟರಾಜರು ಸಂಗೀತ ಕ್ಷೇತ್ರದ ಸಾರ್ವಭೌಮ

Published:
Updated:

ಲಿಂಗಸುಗೂರ: ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸುವ ಮೂಲಕ ಶಿವಯೋಗಿಗಳು ಎಂದು ಗುರ್ತಿಸಿಕೊಂಡಿರುವ ದಿವಂಗತ ಪುಟ್ಟರಾಜ ಶಿವಯೋಗಿಗಳು ಸಂಗೀತ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ.ಕವಿ, ಸಾಹಿತಿ, ನಾಟಕಕಾರ, ಪುರಾಣಿಕ, ಕೀರ್ತನ ಕೇಸರಿ, ಭಾಷಾ ತಜ್ಞರಾಗಿದ್ದ ಅವರು ಸಂಗೀತ ಸಾರ್ವಭೌಮ ಕೀರ್ತಿಗೆ ಕೂಡ ಪಾತ್ರರಾಗಿದ್ದರು ಎಂದು ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ಬಣ್ಣಿಸಿದರು.ಸೋಮವಾರ ರಾತ್ರಿ ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗ ಆಯೋಜಿಸಿದ್ದ ಪಂಡಿತ ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೋತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ರಾಜ್ಯದ ಮೂಲೆ ಮೂಲೆಗಳಲ್ಲಿನ ಅಂಧರು, ಅನಾಥರು, ವಿಕಲಾಂಗಚೇತನರ ಬಾಳಿಗೆ ಬೆಳಕು ನೀಡುವ ಮೂಲಕ ಆರಾಧ್ಯ ದೈವರಾಗಿ ಬೆಳೆದು ನಿಂತಿದ್ದಾರೆ. ಸಂಗೀತ ಕ್ಷೇತ್ರ ಎಂದಾಕ್ಷಣ ಪುಟ್ಟರಾಜ ಗವಾಯಿಗಳು ಎನ್ನುವಂತಹ ವಾತಾವರಣ ನಿರ್ಮಿಸಿದ ಅವರು ಚಿರಸ್ಮರಣೀಯರು.ಶಾಸಕ ಮಾನಪ್ಪ ವಜ್ಜಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜ್ಯ ನಾಟಕ ಅಕಾಡೆಮಿ ಸದಸ್ಯೆ ಸುಮತಿಶ್ರೀ, ವಿಸಿಬಿ ಆಡಳಿತಾಧಿಕಾರಿ ಸಿ.ಶರಣಪ್ಪ, ಕೀರ್ತನಕಾರ ಅಮರಯ್ಯಶಾಸ್ತ್ರಿ ಮಾತನಾಡಿ, ಪುಟ್ಟರಾಜರು ಬೀದಿಗಳಲ್ಲಿ ಭಿಕ್ಷೆ ಬೇಡಿ ಬದುಕುವಂತಹ ಅದೆಷ್ಟು ಅಂಧರು, ವಿಕಲಾಂಗರಿಗೆ ಅನ್ನದಾನ, ಸಂಗೀತ ಜ್ಞಾನ ನೀಡುವ ಮೂಲಕ ರಾಷ್ಟ್ರವ್ಯಾಪಿ ಬೆಳೆದು ನಿಲ್ಲುವಂತಹ ಶಕ್ತಿ ತುಂಬಿದ ಮಹಾನ್ ಚೇತನ. ಪುಟ್ಟರಾಜರಿಲ್ಲದೆ ಸಂಗೀತ ಕ್ಷೇತ್ರ ಅದರಲ್ಲೂ ವಿಕಲಾಂಗರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಅವರ ಸೇವೆಯನ್ನು ಗುಣಗಾನ ಮಾಡಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ಆಕಾಶವಾಣಿ ಕಲಾವಿದರು, ಸಂಗೀತ ಶಿಕ್ಷಕರು, ವಿವಿಧ ರಂಗಗಳಲ್ಲಿ ಸಂಗೀತ ಸೇವೆ ಗೈಯುತ್ತಿರುವ ಪುಟ್ಟರಾಜ ಗವಾಯಿಗಳ ಶಿಷ್ಟ್ಯ ಬಳಗ ಬೆಳಗಿನ ಜಾವದ ವರೆಗೆ ಸಂಗೀತ ಸೇವೆ ಸಲ್ಲಿಸುವ ಮೂಲಕ ಪುಟ್ಟರಾಜರ ಆತ್ಮಕ್ಕೆ ಗೌರವ ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry