ಬುಧವಾರ, ಆಗಸ್ಟ್ 4, 2021
22 °C

ಪುಟ್ಟ ಊರಿನ ದೊಡ್ಡ ಸಮಸ್ಯೆ!

-ಹಾರೋಹಳ್ಳಿ ಪ್ರಕಾಶ್ Updated:

ಅಕ್ಷರ ಗಾತ್ರ : | |

ಪಾಂಡವಪುರ: ತಾಲ್ಲೂಕಿನ ದೇಶವಳ್ಳಿ 75 ಕುಟಂಬಗಳಿರುವ ಪುಟ್ಟ ಗ್ರಾಮ. ಊರು ಚಿಕ್ಕದಿದ್ದರೂ ಸಮಸ್ಯೆಗಳು ಮಾತ್ರ ದೊಡ್ಡದಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ ಸೇರಿದಂತೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಈ ಗ್ರಾಮ ಸಿಲುಕಿಕೊಂಡಿದೆ.ಟಿ.ಎಸ್. ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಊರಿನಲ್ಲಿ ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಗ್ರಾಮದಲ್ಲಿ 3ಕಡೆ ಕೊಳವೆ ಬಾವಿ ಕೊರೆಸಿದರೂ ಪ್ರಯೋಜನಕ್ಕೆ ಬರಲಿಲ್ಲ. 2 ಕಿ.ಮೀ. ದೂರದ ಪಕ್ಕದ ಪಟ್ಟಣಗೆರೆ ಗ್ರಾಮದಿಂದ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.ಆದರೆ, ಮೂರು ದಿನಕ್ಕೊಂದು ಬಾರಿ ಮಾತ್ರ ನೀರು ಬರುವುದರಿಂದ ಕುಡಿಯುವ ಹಾಗೂ ಇನ್ನಿತರ ಬಳಕೆಗೆ ತೊಂದರೆಯುಂಟಾಗಿದೆ. ನೀರು ಸರಬರಾಜಿಗಾಗಿ 2005-06ನೇ ಸಾಲಿನಲ್ಲಿ ಎಸ್‌ಜಿಆರ್‌ವೈ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ತೊಂಬೆ ಹದಗೆಟ್ಟಿದೆ. ಇದರ ದುರಸ್ತಿಗೆ ಪಂಚಾಯಿತಿ ಕ್ರಮ ಕೈಗೊಂಡಿಲ್ಲ.ರಸ್ತೆಗಳೇ ಇಲ್ಲದ ಈ ಊರೊಳಗೆ ತಿರುಗಾಡಲು ಪ್ರಯಾಸ ಪಡಬೇಕಾಗುತ್ತದೆ. ಕಲ್ಲು ಮಣ್ಣಿನಿಂದ ಕೂಡಿರುವ ಇಲ್ಲಿನ ಬೀದಿಗಳನ್ನು ದುರಸ್ತಿ ಮಾಡುವ ಅಗತ್ಯವಿದೆ. ಅಲ್ಲಲ್ಲಿ ಚರಂಡಿ ನಿರ್ಮಾಣ ಮಾಡುವ ಪ್ರಯತ್ನ ನಡೆದಿದ್ದರೂ ವ್ಯವಸ್ಥಿತವಾಗಿ ಪೂರ್ಣಗೊಳ್ಳದೇ ಕೊಳಚೆ ನೀರು ನಿಂತು ಗಬ್ಬುವಾಸನೆ ಬೀರುತ್ತಿದೆ. ಮಳೆಯನ್ನೇ ಅವಲಂಬಿಸಿರುವ ಇಲ್ಲಿಯ ಜನರಿಗೆ ಹೇಮಾವತಿ ನಾಲೆಯ ನೀರು ಹಾಗೂ ಸಮೀಪದಲ್ಲಿರುವ ತೊಣ್ಣೂರು ಕೆರೆಯ ಬಲದಂಡೆ ನಾಲಾ ನೀರು ಇಲ್ಲಿಗೆ ತಲುಪುವಂತೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ.ಕೂಗಳತೆಯಲ್ಲಿರುವ ವಡ್ಡರಹಳ್ಳಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಸಂಜೆ-ರಾತ್ರಿ ವೇಳೆ ಸಿಡಿಸುವ ಸಿಡಿಮದ್ದುಗಳು ಜನರ ನಿದ್ರೆಗೆಡಿಸಿವೆ. ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅನುಮತಿ ಇಲ್ಲದೇ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಸರ್ಕಾರ ಮುಂದಾಗಬೇಕು ಎನ್ನುವುದು ಜನರ ಒತ್ತಾಯ.ಅಕ್ಕಪಕ್ಕದ ಗ್ರಾಮಗಳಾದ ಪಟ್ಟಣಗೇರಿ, ಕೆಂಚನಹಳ್ಳಿ, ಚಂದ್ರೆ ಗ್ರಾಮಗಳ ಸಂಪರ್ಕಕ್ಕೆ ಹಾಗೂ ಕೆರೆತೊಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸಲು `ನಮ್ಮ ಊರು-ನಮ್ಮ ರಸ್ತೆ'ಯ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 4 ತಿಂಗಳ ಹಿಂದೆ (ಮಾರ್ಚ್‌ನಲ್ಲಿ) ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದರೂ ಗುತ್ತಿಗೆದಾರರು ಕೆಲಸವನ್ನೇ ಆರಂಭಿಸಿಲ್ಲ ಎಂದು ಗ್ರಾಮಸ್ಥರ ದೂರು.`ನಮ್ಮೂರಿಗೆ ಕುಡಿಯಲು ನೀರಿಲ್ಲ, ರಸ್ತೆಗಳಿಲ್ಲ. ಸೌಲಭ್ಯಗಳು ಏನೇನೂ ಇಲ್ಲ. ಮೊದಲ ಆದ್ಯತೆ ಮೇರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು' ಎಂದು ಗ್ರಾಮದ ಬೆಟ್ಟೇಗೌಡ, ಅಶೋಕ, ರಾಮೇಗೌಡ ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.