ಮಂಗಳವಾರ, ನವೆಂಬರ್ 19, 2019
22 °C

ಪುಟ್ಟ ಕೈಗಳಲ್ಲಿ ಅರಳಿದ ಚಿತ್ರ ಜಗತ್!

Published:
Updated:

ಮೈಸೂರು: ಬೆಳಿಗ್ಗೆಯ ಹತ್ತು ಗಂಟೆಯ ಬಿಸಿಲಿನಲ್ಲಿ ಅಲ್ಲಿ ನವಿಲುಗಳು ಗರಿ ಬಿಚ್ಚಿದ್ದವು. ಹಸಿರು ಮರಗಳು ಕಣ್ಣಿಗೆ ತಂಪೆರೆಯುತ್ತಿದ್ದವು. ವಿಶಿಷ್ಟ ಚಿತ್ತಾರಗಳ ಲೋಕ ಕಣ್ಣ ಮುಂದಿತ್ತು!ಇದು ಯಾವುದೋ ವಿಹಾರ ತಾಣದ ವರ್ಣನೆ ಖಂಡಿತ ಅಲ್ಲ. ಚಿಕ್ಕಮಕ್ಕಳ ಪುಟ್ಟ ಬೆರಳುಗಳಲ್ಲಿ ಸೃಷ್ಟಿಯಾದ ಕಲಾಜಗತ್ತಿನ ಝಲಕ್ ಇದು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಬಾಲಜಗತ್ ಆವರಣದಲ್ಲಿ ಕಳೆದ 21 ದಿನಗಳು ನಡೆದ ಚಿತ್ರಕಲಾ ತರಬೇತಿ ಶಿಬಿರದಲ್ಲಿ ಕಲಿತ ಮಕ್ಕಳು ರಚಿಸಿದ ವೈವಿಧ್ಯಮಯ ಜಲವರ್ಣ, ಪೆನ್ಸಿಲ್ ಆರ್ಟ್‌ಗಳ ಲೋಕ ಭಾನುವಾರ ತೆರೆದಿತ್ತು.ಶಿಬಿರದ ಸಮಾರೋಪದ ಅಂಗ ವಾಗಿ ಮಕ್ಕಳು ರಚಿಸಿದ್ದ ವರ್ಣಮಯ ಕಲಾಕೃತಿಗಳನ್ನು ಪ್ರದರ್ಶನಕ್ಕಿಡ ಲಾಗಿತ್ತು. ತಮ್ಮ ಮುದ್ದಿನ ಮಕ್ಕಳ ಕಲಾ ಪ್ರತಿಭೆಯನ್ನು ನೋಡಿದ ಪಾಲಕರು ಖುಷಿಯಿಂದ ನಗೆ ಅರಳಿಸಿದರೆ, ಗಣ್ಯರು ಭೇಷ್ ಎಂದು ಬೆನ್ನು ತಟ್ಟಿದರು.ಈ ಸಂದರ್ಭದಲ್ಲಿ ಸಮಾರೋಪ ಭಾಷಣ ಮಾಡಿದ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, `ಇವತ್ತಿನ ದಿನಗಳಲ್ಲಿ ಉತ್ತಮ ಓದು ಮತ್ತು ಅಂಕಗಳೊಂದಿಗೆ ಚಿತ್ರಕಲೆ ಮತ್ತಿತರ ಚಟುವಟಿಕೆಗಳ ಜ್ಞಾನ ಇರುವವರಿಗೆ ಉತ್ತಮ ಉದ್ಯೋಗಾ ವಕಾಶಗಳು ಸಿಗುತ್ತವೆ ಎಂದು ಹೇಳಿದರು.`ಚಿತ್ರಕಲೆಯಿಂದ ಮಕ್ಕಳಲ್ಲಿರುವ ರಚನಾತ್ಮಕ ಶಕ್ತಿ ಅಭಿವೃದ್ಧಿ ಯಾಗುತ್ತದೆ. ಇವತ್ತಿನ ಪೈಪೋಟಿಯ ಜಗತ್ತಿನಲ್ಲಿ ಹೆಚ್ಚು ಕ್ರಿಯಾತ್ಮಕವಾದ ವರಿಗೆ ಯಶಸ್ಸು ಸಾಧ್ಯ. ಆದ್ದರಿಂದ ದೊಡ್ಡ ಐಟಿ, ಬಿಟಿ ಕಂಪೆನಿಗಳು ಇವತ್ತು ಚಿತ್ರಕಲಾವಿದರನ್ನು ಆಯ್ಕೆ ಮಾಡಿಕೊಳ್ಳುತ್ತಿವೆ' ಎಂದರು.`ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಪೋಷಕರು ಕಷ್ಟಪಡುತ್ತಾರೆ. ಆದ್ದರಿಂದಲೇ ರಜೆಯ ಸದುಪಯೋಗವಾಗಲಿ ಎಂದು ಇಂತಹ ಶಿಬಿರಗಳಿಗೆ ಸೇರಿಸುತ್ತಾರೆ. ಮುಂದೆ ಮಕ್ಕಳೂ ದೊಡ್ಡವರಾಗಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅವರನ್ನು ಪ್ರೀತಿಯಿಂದ ಆದರಿಸಬೇಕು' ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಉಪ ಕಾರ್ಯದರ್ಶಿ ಎಸ್. ಶಿವಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಎಸ್. ಎಂ. ಜಂಬುಕೇಶ್ವರ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)