ಪುಟ್ಟ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆ

7
ಗ್ರಾಮ ಸಂಚಾರ

ಪುಟ್ಟ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆ

Published:
Updated:

ಮಳವಳ್ಳಿ: 120 ರಿಂದ 130 ಕುಟುಂಬಗಳು ಇರುವ ತಾಲ್ಲೂಕಿನ ನೆಲ್ಲಿಗೆರೆ ಎಂಬ ಪುಟ್ಟ ಗ್ರಾಮದಲ್ಲಿ ಬೆಟ್ಟದಷ್ಟು ಸಮಸ್ಯೆಗಳು ಕಾಡುತ್ತಿವೆ.

ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಈ ಗ್ರಾಮ ನೀರಾವರಿ ವಂಚಿತ ಪ್ರದೇಶ. ಇದಲ್ಲದೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಮಕ್ಕೆ ಕಾಲಿಟ್ಟರೆ ಸಾಕು; ಚರಂಡಿಗಳಲ್ಲಿ ಸಂಪೂರ್ಣ ಹೂಳು ತುಂಬಿರುವುದು, ಸಾರ್ವಜನಿಕ ಸ್ಮಶಾನ ಇಲ್ಲದಿರುವುದು, ಎಲ್ಲೆಂದರಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದು ನಿಂತಿರುವುದು ಕಂಡುಬರುತ್ತದೆ.ಈ ಗ್ರಾಮವು ಸುಜ್ಜಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಗ್ರಾಮದ ಹೊರಭಾಗದಲ್ಲಿ ಎರಡು ಬೃಹತ್ ಟ್ಯಾಂಕುಗಳಿದ್ದರೂ ಕುಡಿಯುವ ನೀರು ಪೂರೈಕೆಯಾಗದೆ ಕೈಪಂಪ್ ಅವಲಂಬಿಸಬೇಕಾಗಿದೆ. ಒಂದು ಟ್ಯಾಂಕಿಗೆ ಹಿಂದೆ ಪಂಚಾಯಿತಿ ವತಿಯಿಂದ ಬೋರ್ ಹಾಕಿಸಿ ಕುಡಿಯುವ ನೀರು ಕೊಡಲು ನಿರ್ಮಿಸಿದ್ದು, ಮತ್ತೊಂದು 56 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ.ಎರಡು ಟ್ಯಾಂಕುಗಳಿದ್ದರೂ ನೀರಿನ ಬವಣೆ ನೀಗಿಲ್ಲ. ಕಾರಣ ಸ್ಥಳೀಯವಾಗಿ ಹಾಕಿದ್ದ ಬೋರ್‌ನ ಅಂತರ್ಜಲ ಸಂಪೂರ್ಣ ಕುಸಿದಿರುವುದು. 56 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಪೈಪ್ ಒಡೆದು ಹಲವು ದಿನಗಳು ಕಳೆದರೂ ದುರಸ್ತಿಯಾಗಿಲ್ಲ. ಇದರಿಂದಾಗಿ ಉಪಯುಕ್ತ ಯೋಜನೆ ಮಂಜೂರಾಗಿದ್ದರೂ ಪ್ರಯೋಜನಕ್ಕೆ ಬಾರದಂತಿದೆ.ಗ್ರಾಮದಲ್ಲಿ ರಸ್ತೆ ಬದಿ ಇರುವ ಚರಂಡಿ ಹೂಳು ತೆಗೆದಿಲ್ಲ. ಚರಂಡಿ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ರಸ್ತೆಗಳು ಸಹ ಅಲ್ಪ ಮಳೆ ಬಿದ್ದರೂ ಸಂಚಾರಕ್ಕೆ ತೊಂದರೆ ಯಾಗುವಂತಿವೆ.ಗ್ರಾಮದಲ್ಲಿ ಸ್ಮಶಾನ ಇಲ್ಲ

ಗ್ರಾಮದಲ್ಲಿ ಕಡಿಮೆ ಕುಟುಂಬಗಳಿದ್ದರೂ ಸಾರ್ವಜನಿಕ ಸ್ಮಾಶನವಿಲ್ಲ. ಇದರಿಂದ ಶವ ಸಂಸ್ಕಾರಕ್ಕೆ ಜನ ಬೇರೆಯವರ ಜಾಗದ ನೆರವು ಪಡೆಯಬೇಕಿದೆ.ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೂ ಅಲ್ಲಲ್ಲಿ ಗುಂಡಿ ಬಿದ್ದಿದೆ. ಅಂಗನವಾಡಿ ಕೇಂದ್ರಕ್ಕೂ ಕಟ್ಟಡ ಇಲ್ಲದೆ ಶಾಲೆ ಹಳೆ ಕಟ್ಟಡದಲ್ಲಿ ನಡೆಯುತ್ತಿದ್ದು, ಪ್ರಸ್ತುತ ಪ್ರೌಢಶಾಲೆ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣವಾಗಿದೆ.ಕುಡಿಯುವ ನೀರಿನ ಬಗ್ಗೆ ಗ್ರಾಮದ ಹಲವುರು ಎರಡು ಯೋಜನೆಗಳು ಜಾರಿಯಲ್ಲಿವೆ. ಆದರೆ, ನೀರಿನ ಬವಣೆ ಮಾತ್ರ ನೀಗಿಲ್ಲ. ಕಾವೇರಿ ಕುಡಿಯುವ ನೀರು ಪೂರೈಕೆಯಲ್ಲಿ ಪೈಪ್ ಒಡೆದ ಕಾರಣ ವ್ಯತ್ಯಯವಾಗುತ್ತಿದ್ದು ಕೂಡಲೇ ಸರಿಪಡಿಸಿ ನೀರು ಪೂರೈಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಎಂಜಿನಿಯರ್ ಜೊತೆ ಮಾತನಾಡಿ ಸರಿಪಡಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್. ವಿಶ್ವಾಸ್.ಬಿ.ಜಿ. ಪುರ ಹೋಬಳಿಯ 56 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಪ್ರಾರಂಭವಾಗಿ ಆರು ತಿಂಗಳು ಕಳೆದರೂ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಇದ್ದು ಸಂಬಂಧಿಸಿದರು ಕೂಡಲೇ ಇತ್ತ ಗಮನಹರಿಸಿ ನೀರಿನ ಬವಣೆ ನೀಗಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry